Advertisement
ಆನ್‌ಲೈನ್ ಜಮಾನಾದಲ್ಲಿ ಝೊಮೆಟೋ, ಸ್ವಿಗ್ಗಿ, ಅಥವಾ ಊಬರ್ ಈಟ್ಸ್ ಇವುಗಳ ಹೆಸರನ್ನು ಕೇಳದವರು ವಿರಳ. ಅದರಲ್ಲೂ ಈಗಿನ ಪೀಳಿಗೆಯವರೇ ಈ ಆಹಾರ ಡೆಲಿವರಿ ಕಂಪನಿಗಳ ಪ್ರಮುಖ ಗ್ರಾಹಕರು. ಬೆಳಗ್ಗಿನಿಂದ ರಾತ್ರಿಯ ತನಕ ಕೆಲಸ ಮಾಡಿ ಸುಸ್ತಾಗಿ ಮನೆಗೆ ಬರುವ ಬ್ಯಾಚುಲರ್‌ಗಳಿಗಂತೂ ಇದು ವರದಾನವೇ. ದಾರಿಯಲ್ಲಿಯೇ ಆಹಾರ ಆರ್ಡರ್ ಮಾಡಿಬಿಟ್ಟರೆ ಮನೆ ತಲುಪುವಷ್ಟರಲ್ಲಿ ಬಿಸಿಬಿಸಿ ಆಹಾರ ಡೆಲಿವರಿಯಾಗುತ್ತದೆ. ಇದುವರೆಗೂ ಬಳಕೆದಾರ ತನ್ನ ಸಮೀಪದ ಹೋಟೆಲ್‌ಗಳಿಂದ ಮಾತ್ರವೇ ಆರ್ಡರ್ ಮಾಡಬಹುದಿತ್ತು. ಇದರಿಂದಾಗಿ ಹೋಟೆಲ್‌ಗಳು ಬೇರೆ ಪ್ರದೇಶಗಳ ಗ್ರಾಹಕರನ್ನು ಕಳೆದುಕೊಳ್ಳುವಂತಾಗುತ್ತಿತ್ತು. ಈಗ ಅದಕ್ಕೊಂದು ಪರಿಹಾರ ಸಿಕ್ಕಿದೆ. ಅದುವೇ ಕ್ಲೌಡ್ ಕಿಚನ್.
ಹೋಟೆಲ್‌ಗಳು ತಮ್ಮ ಶಾಖೆ ಇಲ್ಲದ ಸ್ಥಳಗಳಲ್ಲಿ ಕಾರ್ಯಾಚರಿಸುತ್ತಿರುವ ಒಂದು ಅಡುಗೆಮನೆಯ (ಕ್ಲೌಡ್ ಕಿಚನ್) ಜೊತೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಆ ಪ್ರದೇಶದಿಂದ ಆ ಹೋಟೆಲ್‌ಗೆ ಆರ್ಡರ್ ಬಂದಾಗ, ಆ ಹೋಟೆಲ್ ಪರವಾಗಿ ಕ್ಲೌಡ್ ಕಿಚನ್‌ನಿಂದ ಆಹಾರ ಸರಬರಾಜಾಗುತ್ತದೆ. ಇನ್ನು ಕೆಲವು ಹೋಟೆಲ್‌ಗಳವರು ಕೈತುಂಬಾ ಸಭೆ ಸಮಾರಂಭಗಳಿಗೆ ಆಹಾರ ಪೂರೈಸುವ ಆರ್ಡರ್ ಇದ್ದು, ಅದನ್ನು ಸಕಾಲದಲ್ಲಿ ಡೆಲಿವರಿ ಮಾಡಲಾಗದಿದ್ದರೆ ಕ್ಲೌಡ್ ಕಿಚನ್ ಮೊರೆ ಹೋಗುವುದೂ ಉಂಟು. ಕ್ಲೌಡ್ ಕಿಚನ್‌ಅನ್ನು ಡಾರ್ಕ್ ಕಿಚನ್, ಘೋಸ್ಟ್ ಕಿಚನ್ ಅಂತಲೂ ಕರೆಯುವುದುಂಟು. ಏಕೆಂದರೆ, ಕ್ಲೌಡ್ ಕಿಚನ್‌ಗಳಲ್ಲಿ ಕುಳಿತು ಊಟ ಮಾಡುವ ಸೌಕರ್ಯ ಇರುವುದಿಲ್ಲ. ಹೀಗಾಗಿ ಹೊರಗಿನವರಿಗೆ ಅದರ ಅಸ್ತಿತ್ವದ ಗುರುತು ಪರಿಚಯವೇ ಇರುವುದಿಲ್ಲ. ಕೇವಲ ಆ್ಯಪ್‌ನ ಸಂಸ್ಥೆಯವರಿಗೆ ಅಡುಗೆ ಮನೆಯ ಪರಿಚಯವಿರುತ್ತದೆ. ಅವರು ಅಲ್ಲಿಂದ ಆಹಾರವನ್ನು ಗ್ರಾಹಕರ ಮನೆಗೆ ತಲುಪಿಸುತ್ತಾರೆ. ಗ್ರಾಹಕ ತನ್ನ ಸ್ವಸ್ಥಾನದಲ್ಲಿ ಆಹಾರ ಸೇವಿಸುತ್ತಾನೆ. ಹುಟ್ಟಿಕೊಂಡಿದ್ದು ಏಕೆ?
ಕ್ಲೌಡ್ ಕಿಚನ್ ಎಂದರೆ ಅದು ಹೋಟೆಲ್‌ಗಳ ಶಾಖೆ ಇದ್ದಂತೆಯೇ. ಅದೂ ಕಡಿಮೆ ಖರ್ಚಿನಲ್ಲಿ. ಅದು ಒಂದು ಕಾರಣವಾದರೆ ಇನ್ನೊಂದು ಆನ್‌ಲೈನ್ ಫುಡ್ ಡೆಲಿವರಿ ವ್ಯವಸ್ಥೆ ಬಂದ ಮೇಲೆ ಗ್ರಾಹಕರ ಅಭಿರುಚಿ ಬದಲಾಗುತ್ತಿದೆ. ಆಹಾರ ಎಲ್ಲಿಂದ ಬಂತು ಎನ್ನುವುದಕ್ಕಿಂತ ಹೆಚ್ಚಾಗಿ, ರುಚಿಕರ ಅಡುಗೆಯ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಈ ಕಾರಣಗಳಿಗಾಗಿ ಕ್ಲೌಡ್ ಕಿಚನ್‌ಗಳಿಗೆ ಪ್ರಾಮುಖ್ಯತೆ ಹೆಚ್ಚುತ್ತಿದೆ. ಹಿಂದೆಲ್ಲ ಆಹಾರ ಉದ್ಯಮದ ಮಂದಿಯೇ ಕ್ಲೌಡ್‌ಕಿಚನ್‌ಗಳನ್ನು ನಡೆಸುತ್ತಿದ್ದರು. ಈಗ ಹಾಗಲ್ಲ, ಸಣ್ಣ ಮನೆಯಲ್ಲಿ ಕೂಡ ಒಂದು ಕಿಚನ್ ಹುಟ್ಟಿಕೊಳ್ಳಬಹುದು. ದಿನಕ್ಕೆ ಸರಾಸರಿ 50- 100 ಗ್ರಾಹಕರು ಸಿಕ್ಕರೂ ಲಾಭ ಪಡೆಯಬಹುದು.
Related Articles
ಕ್ಲೌಡ್ ಕಿಚನ್ ಸಿದ್ಧಪಡಿಸುವಾಗ ಹಲವು ಬಗೆಯ ಕ್ರಮಗಳನ್ನು,, ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಎಲ್ಲವೂ ಸರಿಯಾಗಿದ್ದರೆ ಮಾತ್ರ ದೊಡ್ಡ ಕಾರ್ಪೊರೆಟ್ ಕಂಪನಿಗಳು, ಹೋಟೆಲ್‌ಗಳು, ಆನ್‌ಲೈನ್ ಫುಡ್ ಡೆಲಿವರಿ ಆ್ಯಪ್‌ನವರು ಆರ್ಡರ್ ಕೊಡುತ್ತವೆ. ಆರ್ಡರ್ ಕೊಡುವ ಮುನ್ನ ಅವರು ಒಂದು ಸುತ್ತಿನ ತಪಾಸಣೆಯನ್ನೂ ನಡೆಸುತ್ತಾರೆ. ಕ್ಲೌಡ್ ಕಿಚನ್‌ಗಳನ್ನು ನಿರ್ಮಿಸಿಕೊಡಲೆಂದೇ ಹಲವು ಕನ್ಸಲ್ಟೆಂಟ್‌ಗಳಿದ್ದಾರೆ. ಅವರ ಸಹಾಯವನ್ನು ಪಡೆಯುವುದರಿಂದ ಮಾನದಂಡಗಳಿಗೆ ಅನುಗುಣವಾಗಿ ಕ್ಲೌಡ್ ಕಿಚನ್ ನಿರ್ಮಿಸಿಕೊಳ್ಳಬಹುದು. ಅಲ್ಲದೆ ಅವರಿಂದ ಕಾರ್ಪೊರೆಟ್ ಸಂಸ್ಥೆಗಳ ಸಂಪರ್ಕವೂ ಸಿಗುವ ಸಾಧ್ಯತೆ ಇರುತ್ತದೆ. ಸಂಪರ್ಕವೇ ಮುಖ್ಯವಾದ ಅಂಶ. ಎಷ್ಟು ಚೆನ್ನಾಗಿ ಕಿಚನ್ ಮಾಡಿ, ಆರ್ಡರ್ ಸಿಗದಿದ್ದರೇನು ಬಂತು! ಹೀಗಾಗಿ ಕ್ಲೌಡ್ ಕಿಚನ್‌ನವರು ತಮ್ಮನ್ನು ತಾವೇ ಮಾರ್ಕೆಟಿಂಗ್ ಮಾಡಿಕೊಳ್ಳುವ ಅನಿವಾರ್ಯತೆ ಸದ್ಯದ ಮಟ್ಟಿಗಂತೂ ಇದೆ. ತಾವೇ ಖುದ್ದಾಗಿ ಸಂಪರ್ಕಿಸಲು ಮುಂದಾಗಬೇಕು.
Advertisement
ಲಾಭಗಳು-1. ಹೋಟೆಲ್ ನಿರ್ಮಾಣಕ್ಕೆ ತಗುಲುವಷ್ಟು ಖರ್ಚು ಆಗುವುದಿಲ್ಲ.
2. ಕಡಿಮೆ ಅವಧಿಯಲ್ಲಿ ಸಿದ್ಧಪಡಿಸಬಹುದು.
3. ಎಲ್ಲಿ ಜಾಗ ಸಿಗುತ್ತದೆಯೋ ಅಲ್ಲಿ ಅಡುಗೆ ಮನೆ ಶುರುಮಾಡಬಹುದು.
4. ಬ್ರ್ಯಾಂಡ್ ಬೆಳೆದ ನಂತರ ನಾಲ್ಕಾರು ಕಡೆ ಬ್ರ್ಯಾಂಚ್ ಶುರುಮಾಡಬೇಕು ಎನ್ನುವುದು ವ್ಯಾಪಾರದ ನಿಯಮ. ಆದರೆ ಇಲ್ಲಿ ಹಾಗಿಲ್ಲ. ನಿಮ್ಮದೇ ಬ್ರ್ಯಾಂಡಿನ ಹಲವಾರು ಬ್ರ್ಯಾಂಚ್‌ಗಳನ್ನು ಒಮ್ಮೆಲೇ ಶುರು ಮಾಡಬಹುದು. ತುಂಬಾ ಫ್ಲೆಕ್ಸಿಬಿಟಿ ಇದೆ! ನಷ್ಟಗಳು-
1. ಗ್ರಾಹಕ ಹಾಗೂ ಹೋಟೆಲ್ ನಡುವೆ ಯಾವುದೇ ರೀತಿಯ ಒಡನಾಟ ಇರುವುದಿಲ್ಲ.
2. ಗ್ರಾಹಕನಿಗೆ ಎಂದೂ ತನ್ನ ಊಟ ಎಲ್ಲಿಂದ ಬರುತ್ತದೆ ಎನ್ನುವುದು ಗೊತ್ತಾಗುವುದಿಲ್ಲ. ಹೀಗಾಗಿ ಅದಕ್ಕೆ ಸಿಗಬೇಕಾದ ಹೆಸರು, ಮನ್ನಣೆ ದೊರೆಯದೇ ಹೋಗಬಹುದು.
3. “ಕಸ್ಟಮರ್ ಬೇಸ್’ ಎನ್ನುತ್ತಾರಲ್ಲ, ಅದು ಯಾವತ್ತು ಮೂರನೆಯವರ ಹತ್ತಿರ ಇರುತ್ತದೆ. ಎಷ್ಟೇ ಒಳ್ಳೆಯ ಅಡುಗೆಯಾಗಿದ್ದರೂ ಗ್ರಾಹಕ ಮತ್ತೆ ಆರ್ಡರ್ ಮಾಡಬೇಕು ಅಂದರೆ, ಆ್ಯಪ್ ಕಂಪನಿ ಅಥವಾ ಹೋಟೆಲ್‌ಗಳ ಮೂಲಕವೇ ಮಾಡಬೇಕು.
4. ಗ್ರಾಹಕರ ನಡವಳಿಕೆ, ಅವರ ಇಷ್ಟ, ಬೇಕು, ಬೇಡಗಳು ಕಿಚನ್ ಮಾಲೀಕನಿಗೆ ತಿಳಿಯುವುದಿಲ್ಲ. ಎಕನಾಮಿಕ್ಸ್ ಆಫ್ ಡಾರ್ಕ್ ಕಿಚನ್
– 300 -1200 ಚದರ ಅಡಿ ಜಾಗ
– 80- 90 ಲಕ್ಷ ರೂಪಾಯಿ ಹೂಡಿಕೆ (ದೊಡ್ಡ ಪ್ರಮಾಣದಲ್ಲಿ ನಡೆಸಲು)
-10,000 ಗ್ರಾಹಕರು ಪ್ರತಿದಿನ
– 35- 40% ಲಾಭ (ಸಾಂಪ್ರದಾಯಿಕ- ಹೋಟೆಲ್‌ಗಳಿಗಿಂತ 25- 30% ಹೆಚ್ಚು)
– ಭಾರತದಲ್ಲಿ ಆನ್‌ಲೈನ್ ಆಹಾರ ಡೆಲಿವರಿ ವ್ಯವಹಾರ 14,000 ಕೋಟಿ ರೂ.ಗೆ ತಲುಪಿದೆ.
– ಕೇವಲ ಸ್ವಿಗ್ಗಿ ಕಂಪನಿಯದೇ ಸುಮಾರು 1,000 ಕ್ಲೌಡ್ ಕಿಚನ್ ಇದೆ. ಸದ್ಯ, ಬೆಂಗಳೂರಿನಂಥ ಮೆಟ್ರೊ ಸಿಟಿಗಳಲ್ಲಿ ಕ್ಲೌಡ್ ಕಿಚನ್‌ಗಳು ತಲೆಯೆತ್ತುತ್ತಿವೆ. ಮುಂದಿನ ದಿನಗಳಲ್ಲಿ ಎಲ್ಲೆಲ್ಲಿ ಆನ್‌ಲೈನ್ ಫುಡ್ ಡೆಲಿವರಿ ಉದ್ಯಮ ಬೆಳೆಯುತ್ತದೆಯೋ ಅಲ್ಲೆಲ್ಲಾ ಖಂಡಿತವಾಗಿ ಕ್ಲೌಡ್ ಕಿಚನ್‌ಗಳನ್ನು ಕಾಣಬಹುದು. ಇದರಿಂದ ಹೋಟೆಲ್ ಉದ್ಯಮ ವಿಸ್ತರಿಸಿದಂತಾಗುವುದಲ್ಲದೆ ಉದ್ಯೋಗಾವಕಾಶಗಳೂ ಹೆಚ್ಚುವವು.
– ಪಿ.ಸಿ.ರಾವ್, ಅಧ್ಯಕ್ಷರು, ಬೆಂಗಳೂರು ಹೋಟೆಲ್ ಮಾಲೀಕರ ಸಂಘ – ವಿಕ್ರಮ ಜೋಶಿ