ಮಡಿಕೇರಿ: ಜನರಲ್ ತಿಮ್ಮಯ್ಯ ಜನ್ಮ ದಿನಾಚರಣೆ ಪ್ರಯುಕ್ತ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಸಂಸ್ಥೆ, ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರೋವರ್ ಅಂಡ್ ರೇಂಜರ್ಸ್ ಘಟಕ ಹಾಗೂ ಎಂ.ಬಾಡಗ ಭಗವತಿ ದೇವಸ್ಥಾನ ಸಮಿತಿಯ ವತಿಯಿಂದ ದೇವಾಲಯದ ಆವರಣದಲ್ಲಿ ನಡೆದ ಪ್ರಕೃತಿ ಅಧ್ಯಯನ ಮತ್ತು ಸಮುದಾಯ ಅಭಿವೃದ್ಧಿ ಶಿಬಿರ ಸಮಾರೋಪ ನಡೆಯಿತು.
ಜಾಗೃತಿ ಮೂಡಿಸಲು ಸಹಕಾರಿ
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಟಿ.ಕೆ.ಬೋಪಯ್ಯ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಲು ಪ್ರಕೃತಿ ಅಧ್ಯಯನ ಕಾರ್ಯಕ್ರಮಗಳು ಹೆಚ್ಚು ಸಹಕಾರಿಯಾಗಿದೆ ಎಂದರು.
ಸಮಾರೋಪ ಭಾಷಣ ಮಾಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಆಯುಕ್ತ ಜಿಮ್ಮಿ ಸಿಕ್ವೆರಾ, ರೋವರ್ ಅಂಡ್ ರೇಂಜರ್ಸ್ ದೇಶದ ಸಮವಸ್ತ್ರಧಾರಿ ವ್ಯವಸ್ಥೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಹೆಮ್ಮೆಯ ವಿಚಾರವೆಂದರು. ಮುಖ್ಯ ಅತಿಥಿಯಾಗಿದ್ದ ನಾಪೋಕ್ಲು ಕೊಡವ ಸಮಾಜದ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ ವಿದ್ಯಾರ್ಥಿ ಜೀವನದಲ್ಲಿ ಲಭ್ಯವಿರುವ ಎಲ್ಲಾ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ನೈಜ ಬಲ, ದೌರ್ಬಲ್ಯ, ಅವಕಾಶಗಳು ಹಾಗೂ ಆತಂಕದ ಕುರಿತು ಆತ್ಮಾವಲೋಕನ ಮಾಡಿಕೊಂಡು ಎಲ್ಲಾ ವಿಚಾರಗಳನ್ನು ಸಕಾರಾತ್ಮಕವಾಗಿ ಚಿಂತಿಸಿ ಯಶಸ್ಸನ್ನು ಸಾಧಿಸಬೇಕೆಂದು ಕಿವಿಮಾತು ಹೇಳಿದರು.
ಗೊಬ್ಬರಗಳ ಮಾಹಿತಿ
ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ ಕಂಪನಿಯ ನಿವೃತ್ತ ಜನರಲ್ ಮ್ಯಾನೇಜರ್ ಕೋಟೆರ ಪೃಥ್ವಿ ತಿಮ್ಮಯ್ಯ ರಾಸಾಯನಿಕ ಗೊಬ್ಬರಗಳ ಬಗ್ಗೆ ಮಾಹಿತಿ ನೀಡಿದರು. ಎಂ.ಬಾಡಗ ಗ್ರಾ.ಪಂ ಮಾಜಿ ಅಧ್ಯಕ್ಷೆ ಪೆಮ್ಮಂಡ ಗೀತಾಪವಿತ್ರ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಪ್ರಧಾನ ಆಯುಕ್ತ ಕಂಬಿರಂಡ ಕಿಟ್ಟುಕಾಳಪ್ಪ ಮಾತನಾಡಿದರು. ವಿರಾಜಪೇಟೆ ಕಾಲೇಜು ರೋವರ್ ಲೀಡರ್ ವನಿತ್ ಕುಮಾರ್ ಹಾಗೂ ರಾಖೀ ಪೂವಣ್ಣ ಉಪಸ್ಥಿತರಿದ್ದರು.