Advertisement

ಮಂಗಳೂರು ಧರ್ಮ ಪ್ರಾಂತದ ವಿಚಾರಣೆ ಮುಕ್ತಾಯ

01:23 AM Jul 18, 2019 | Team Udayavani |

ಮಂಗಳೂರು: ದೇವರ ಸೇವಕ ರೇಮಂಡ್‌ ಫ್ರಾನ್ಸಿಸ್‌ ಕಮಿಲ್ಲಸ್‌ ಮಸ್ಕರೇನ್ಹಸ್‌ ಅವರನ್ನು ಪುನೀತ ಮತ್ತು ಸಂತ ಎಂದು ಪ್ರಕಟಿಸಲು ಧರ್ಮಕ್ಷೇತ್ರದ ಮಟ್ಟದಲ್ಲಿ ರಚಿಸಲ್ಪಟ್ಟ ಅಧಿಕೃತ ವಿಚಾರಣ ಸಮಿತಿಯ ಸಮಾರೋಪ ಅಧಿವೇಶನ ಬೆಂದೂರಿನ ಸಂತ ಸೆಬಾಸ್ಟಿಯನ್‌ ಚರ್ಚ್‌ನಲ್ಲಿ ಬುಧವಾರ ಜರಗಿತು.

Advertisement

ಅಧ್ಯಕ್ಷತೆ ವಹಿಸಿದ್ದ ಬಿಷಪ್‌ ವಂ| ಪೀಟರ್‌ ಪೌಲ್ ಸಲ್ಡಾನ್ಹಾ ಮಾತನಾಡಿ, ದೇವರ ಸೇವಕ ರೇಮಂಡ್‌ ಒಬ್ಬ ದೈವಭಕ್ತ. ತಮ್ಮ ಜೀವನವನ್ನು ಸಮಾಜದ ಒಳಿತಿಗಾಗಿ ಸಮರ್ಪಿಸಿದ ಮಹಾಪುರುಷರು. ಮಂಗಳೂರು ಧರ್ಮಪ್ರಾಂತದ ಚರಿತ್ರೆಯಲ್ಲಿ ಈ ದಿನ ವಿಶಿಷ್ಟ ಮೈಲುಗಲ್ಲು ಎಂದರು.

ವಂ| ಜೋನ್‌ ಬಾಪ್ಟಿಸ್ಟ್‌ ಸಲ್ಡಾನ್ಹಾ ಪ್ರಾರ್ಥನಾ ವಿಧಿ ನೆರವೇರಿಸಿದರು. ಬೆಥನಿ ಸಂಸ್ಥೆಯ ಮಹಾಮಾತೆ ಭ| ರೋಜ್‌ ಸೆಲಿನ್‌, ಬೆಂದೂರ್‌ ಧರ್ಮಕೇಂದ್ರದ ಪ್ರಧಾನ ಗುರು ವಂ| ವಿನ್ಸೆಂಟ್ ಮೊಂತೆರೊ ಮತ್ತಿತರರು ದೇವರ ಸೇವಕ ರೇಮಂಡರ ಸಮಾಧಿಯ ಮೇಲೆ ಹೂಗುಚ್ಛ ಇಟ್ಟು ಗೌರವ ಅರ್ಪಿಸಿದರು.

ನೋಟರಿ ವಂ| ನವೀನ್‌ ಪಿಂಟೊ ಅವರು,ಧರ್ಮಾಧ್ಯಕ್ಷರ ಪ್ರತಿನಿಧಿ ವಂ| ಹೆನ್ರಿ ಸಿಕ್ವೇರಾ ಅವರಿಗೆ ಅಧಿಕೃತ ದಾಖಲೆಗಳನ್ನು ಹಸ್ತಾಂತರಿಸಿದರು. ಪ್ರೊಮೋಟರ್‌ ಆಫ್‌ ಜಸ್ಟಿಸ್‌ ವಂ| ಜೋನ್‌ ಮೆಂಡೊನ್ಸಾದಾಖಲೆ ಪತ್ರಗಳನ್ನು ವ್ಯಾಟಿಕನ್‌ಗೆ ಕಳುಹಿಸಲು ಅಭ್ಯಂತರವಿಲ್ಲ ಎಂದು ಘೋಷಿಸಿದರು.

ಉಪ ನೋಟರಿ ವಂ| ವಿನ್ಸೆಂಟ್ ಸಲ್ಡಾನ್ಹಾ, ಪ್ರಕ್ರಿಯೆಯ ಪೋಸ್ಟುಲೇಟರ್‌ ಭ| ಲಿಲ್ಲಿಸ್‌ ಕಟಕಾಯಾಮ್‌, ದಸ್ತಾವೇಜುಗಳ ನಕಲುಕಾರಿಣಿ ಭ| ಮೊಲಿ ಶಾರೊನ್‌, ದಸ್ತಾವೇಜುಗಳನ್ನು ಅನುವಾದ ಮಾಡಿದ ಭ| ಹಿಲೆರಿಟಾ ಪ್ರಮಾಣವಚನ ಮಾಡಿದರು. ವರದಿಯ ಪ್ರತಿಯನ್ನು ಅಧಿಕೃತ ದಾಖಲೆಗಳ ಪೆಟ್ಟಿಗೆಗಳಲ್ಲಿ ಇರಿಸಿ ಧರ್ಮಾಧ್ಯಕ್ಷರು ಮೊಹರು ಮಾಡಿದರು. ಬಳಿಕ ಅವನ್ನು ಧರ್ಮಪ್ರಾಂತದ ದಸ್ತಾವೇಜು ಕೊಠಡಿಯಲ್ಲಿರಿಸಲು ಚಾನ್ಸಲರ್‌ ವಂ| ವಿಕ್ಟರ್‌ ಜಾರ್ಜ್‌ ಅವರಿಗೆ ಹಸ್ತಾಂತರಿಸಲಾಯಿತು.

Advertisement

ದಾಖಲೆಗಳ 15 ಕಟ್ಟುಗಳ 2 ಪ್ರತಿಗಳನ್ನು ಹೊಸದಿಲ್ಲಿಯ ವ್ಯಾಟಿಕನ್‌ ರಾಯಭಾರ ಕಚೇರಿಯ ನುನ್ಸಿಯೊ ಅವರ ಮೂಲಕ ಅಧ್ಯಯನಕ್ಕಾಗಿ ವ್ಯಾಟಿಕನ್‌ನಲ್ಲಿರುವ ‘ಕಾಂಗ್ರಿಗೇಶನ್‌ ಫಾರ್‌ ದ ಕಾಸಸ್‌ ಆಫ್‌ ದ ಸೈಂಟ್ಸ್‌’ ಸಮಿತಿಗೆ ಕಳುಹಿಸಲು ನೇಮಿಸಲ್ಪಟ್ಟ ಭ| ಲಿಲ್ಲಿಸ್‌ ಕಟಕಾಯಮ್‌ ಅವರಿಗೆ ನೀಡಲಾಯಿತು.

ನಿವೃತ್ತ ಧರ್ಮಾಧ್ಯಕ್ಷ ವಂ| ಅಲೋಶಿಯಸ್‌ ಡಿ’ಸೋಜಾ ಶುಭ ಹಾರೈಸಿದರು. ವಿಚಾರಣೆ, ಚಾರಿತ್ರಿಕ ಮತ್ತು ದೇವಶಾಸ್ತ್ರ ಸಮಿತಿಯ ಸದಸ್ಯರು, ಹಿಂದಿನ ಬೆಥನಿ ಮಹಾಮಾತೆಯರಾದ ಭ| ಜ್ಯೋತಿ, ಭ| ವಿಲ್ಬರ್ಟಾ, ಬೆಂದೂರು ಧರ್ಮಕೇಂದ್ರದ ಹಿಂದಿನ ಗುರುಗಳಾದ ವಂ| ಪೀಟರ್‌ ನೊರೊನ್ಹಾ, ವಂ| ಆಂತೊನಿ ಶೆರಾ, ಪ್ರಸ್ತುತ ಗುರು ವಂ| ವಿನ್ಸೆಂಟ್ ಮೊಂತೆರೊ ಅವರನ್ನು ಗೌರವಿಸಲಾಯಿತು. ಭ| ಲಿಲ್ಲಿಸ್‌ ಅವರನ್ನು ಸಮ್ಮಾನಿಸಲಾಯಿತು. ರೋಮನ್‌ ಪೋಸ್ಟುಲೇಟರ್‌ ಆಗಿ ನೇಮಕಗೊಂಡ ಭ| ಡೋನಾ ಸಾಂಕ್ತಿಸ್‌ ಅವರಿಗೆ ಶುಭ ಕೋರಲಾಯಿತು.

ರವಿವಾರದಂದು ಬೆಂದೂರಿನ ಸಂತ ಸೆಬಾಸ್ಟಿಯನ್‌ ಚರ್ಚ್‌ನಲ್ಲಿ ಕೃತಜ್ಞತಾ ಬಲಿಪೂಜೆ ಅರ್ಪಿಸುವ ಮೂಲಕ ಸಮಾರೋಪ ಅಧಿವೇಶನ ಆರಂಭವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next