Advertisement

ಜೈನ ಮುನಿಗಳಿಂದ ದಶಲಕ್ಷಣ ಮಹಾಪರ್ವ ಕಾರ್ಯಕ್ರಮ : ಹತ್ತು ದಿನ ಕಸಾಯಿಖಾನೆ ಬಂದ್‌ ಮಾಡಿ

08:33 AM Sep 11, 2021 | Team Udayavani |

ಧಾರವಾಡ: ದೇಶದ ವಿವಿಧ ಭಾಗಗಳಲ್ಲಿ ಸೆ.9 ರಿಂದ ಹತ್ತು ದಿನಗಳ ಕಾಲ ಜೈನ ಮುನಿಗಳಿಂದ ದಶಲಕ್ಷಣ ಮಹಾಪರ್ವ ಕಾರ್ಯಕ್ರಮ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಕಸಾಯಿ ಖಾನೆ ಬಂದ್‌ ಮಾಡಬೇಕು. ಈ ಅವಧಿಯಲ್ಲಿ ಮಾಂಸಾಹಾರ ತ್ಯಜಿಸಬೇಕೆಂದು ಕ್ರಾಂತಿಕಾರಿ ಸಂತ 108 ಮುನಿಶ್ರೀ ಪ್ರಸಂಗಸಾಗರ ಮಹಾರಾಜರು ಹೇಳಿದರು.

Advertisement

ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಾತುರ್ಮಾಸ ಅಂಗವಾಗಿ ಹಮ್ಮಿಕೊಂಡ ದಶಲಕ್ಷಣ ಮಹಾಪರ್ವ ಕಾರ್ಯಕ್ರಮಗಳ ಬಗ್ಗೆ ಅವರು ಮಾತನಾಡಿದರು. ಮಾಂಸಾಹಾರದಲ್ಲಿ ಶಕ್ತಿ ಇಲ್ಲ. ಶಾಖಾಹಾರದಲ್ಲಿ ಶಕ್ತಿ ಇದೆ. ನಾವು ಇನ್ನೊಬ್ಬರಿಗೆ ಜೀವ ಕೊಡಬೇಕು. ಜೀವ ತೆಗೆಯುವ ಅಧಿಕಾರ ನಮಗಿಲ್ಲ. ದಶಲಕ್ಷ ಮಹಾಪರ್ವದ ಅಂಗವಾಗಿ ದೆಹಲಿ, ಮುಂಬೈ, ಗುಜರಾತ್‌ನಲ್ಲಿ ಮಾಂಸಾಹಾರದ ಅಂಗಡಿಗಳನ್ನು ಬಂದ್‌ ಮಾಡುತ್ತಿದ್ದಾರೆ. ಹೀಗಾಗಿ ಕರ್ನಾಟಕದಲ್ಲೂ ಬಂದ್‌ ಮಾಡುವಂತೆ ಸರ್ಕಾರಕ್ಕೆ ಕೇಳುತ್ತಿದ್ದೇವೆ. ರಾಜ್ಯದಲ್ಲಿರುವ ಎಲ್ಲ ವಧಾಲಯಗಳನ್ನು ಹತ್ತು ದಿನಗಳವರೆಗೆ ಬಂದ್‌ ಮಾಡಿ, ಈ ಮೂಲಕ ಎಲ್ಲರೂ ಅಹಿಂಸಾ ಪರಮೋಧರ್ಮದ ತತ್ವ ಪಾಲಿಸಿ ನಮ್ಮೊಂದಿಗೆ ಕೈಜೋಡಿಸಬೇಕು ಎಂದರು.

ಕೊಟಬಾಗಿ ಗ್ರಾಮದಲ್ಲಿ ಸೆ.11 ರಿಂದ 20ರವರೆಗೆ ಜರುಗುವ ದಶಲಕ್ಷಣ ಮಹಾಪರ್ವ, ಅಣುವೃತ ಸಂಸ್ಕಾರ ಮತ್ತು ಧ್ಯಾನ ಯೋಗಸಾಧನಾ ಶಿಬಿರ ಹಾಗೂ ಕ್ಷಮಾವಳಿ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದ ಅವರು, ಸೆ.11 ರಂದು ಉತ್ತಮ ಕ್ಷಮಾ ಧರ್ಮ, 12ರಂದು ಉತ್ತಮ ಮಾರ್ಧವ ಧರ್ಮ, 1 ರಂದು ಉತ್ತಮ ಅರ್ಜವ ಧರ್ಮ, 14 ರಂದು ಉತ್ತಮ ಶೌಚ ಧರ್ಮ, 15ರಂದು ಉತ್ತಮ ಸತ್ಯ ಧರ್ಮ, 16ರಂದು ಉತ್ತಮ ಸಂಯಮ ಧರ್ಮ, 17 ರಂದು ಉತ್ತಮ ತಪ ಧರ್ಮ, 18ರಂದು ಉತ್ತಮ ತ್ಯಾಗ ಧರ್ಮ, 19ರಂದು ಉತ್ತಮ ಆಕಿಂಚನ್ಯ ಧರ್ಮ ಹಾಗೂ 20 ರಂದು ಉತ್ತಮ ಬ್ರಹ್ಮಚರ್ಯ ಧರ್ಮ ಹೀಗೆ ದಶಲಕ್ಷಣ ಮಹಾಪರ್ವದ ಕಾರ್ಯಕ್ರಮಗಳು ಪ್ರತಿದಿನ ಮಧ್ಯಾಹ್ನ 2:00 ಗಂಟೆಗೆ ಜರುಗಲಿವೆ. ಪ್ರತಿನಿತ್ಯ ಬೆಳಿಗ್ಗೆ 5 ರಿಂದ ಧ್ಯಾನ, ಯೋಗ, ಜಿನ ಅಭಿಷೇಕ ಮತ್ತು ಅಷ್ಟವಿಧಾರ್ಚನೆ ಪೂಜೆ ನಡೆಯಲಿವೆ ಎಂದರು.

ಹತ್ತು ದಿನಗಳವರೆಗಿನ ಈ ಕಾರ್ಯಕ್ರಮಕ್ಕೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಹಿರಿಯ ಪತ್ರಕರ್ತ ಅಜಿತ ಹನುಮಕ್ಕನವರ, ಶ್ರೀರಾಮ ಸೇನೆಯ ರಾಷ್ಟ್ರಾಧ್ಯಕ್ಷ ಪ್ರಮೋದ ಮುತಾಲಿಕ, ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ, ಯುವ ಬಿಗ್ರೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next