ಲಿಂಗಸುಗೂರು: ಸುಂದರ ಬದುಕಿಗೆ ವಚನಗಳು ದಾರಿದೀಪವಾಗಿವೆ ಎಂದು ಸಜ್ಜಲಗುಡ್ಡ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಬಸಪ್ಪ ಹಂದ್ರಾಳ ಹೇಳಿದರು.
ಪಟ್ಟಣದ ಹೇಮರಡ್ಡಿ ಮಲ್ಲಮ್ಮ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿದ್ದ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿ ಸಮಾನತೆ ತರಲು ವಚನಗಳು ಸಾಕಷ್ಟು ಪ್ರಭಾವ ಬೀರಿವೆ. ಬಸವಣನವರು ಮೂರು ಸಾಲುಗಳ ವಚನಗಳಲ್ಲಿ ವ್ಯಕ್ತಿ ಹಾಗೂ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ ಎಂದರು.
ಉಪನ್ಯಾಸಕ ಡಾ| ಮಹಾದೇವಪ್ಪ ನಾಗರಾಳ ಮಾತನಾಡಿ, ಜನರು ಆಡುವ ಭಾಷೆಗೆ ಹತ್ತಿರವಾಗಿಸುವ, ಜನರ ಜೀವನ ಗಟ್ಟಿಗೊಳಿಸುವಲ್ಲಿ ವೀರಶೈವ ಸಾಹಿತ್ಯ ಅಗ್ರಗಣ್ಯವಾಗಿದೆ. ವೀರಶೈವ ತತ್ವ ಸಿದ್ಧಾಂತಗಳನ್ನು ಸೈದ್ಧಾಂತಿಕ ನಿಲುವುಗಳನ್ನು ವೀರಶೈವ ಸಾಹಿತ್ಯ ಒಳಗೊಂಡಿದೆ ಎಂದರು.
ಶ್ರೀಶೈಲ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆ ಆಡಳಿತಾಧಿ ಕಾರಿ ದೇವರಡ್ಡಿ ಮೇಟಿ, ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಗೌಡೂರು, ಪ್ರಭಾರಿ ಪ್ರಚಾರ್ಯ ರಾಮುಬಾಬು, ದತ್ತಿದಾನಿಗಳಾದ ದೊಡ್ಡಪ್ಪ ಸಾಹುಕಾರ, ಮಂಜುನಾಥ ಕಾಮಿನ್, ಶಂಕ್ರಪ್ಪ ಸಕ್ರೀ, ಗಿರಿರಾಜ ಹೊಸಮನಿ ಹಾಗೂ ಇನ್ನಿತರಿದ್ದರು.