Advertisement

ಏರೋ ಇಂಡಿಯಾ 2019ಕ್ಕೆ ತೆರೆ

06:31 AM Feb 25, 2019 | |

ಬೆಂಗಳೂರು: ಇಳಿಸಂಜೆ ಪಡುವಣದಲ್ಲಿ ಸೂರ್ಯ ಮುಳಗುತ್ತಿದ್ದಂತೆ, ಇತ್ತ ಲೋಹದ ಹಕ್ಕಿಗಳು ಕೂಡ ಮನರಂಜನೆಯ ಆಟ ಮುಗಿಸಿ, “ಏರೋ ಇಂಡಿಯಾ-2019′ ವೈಮಾನಿಕ ಪ್ರದರ್ಶನಕ್ಕೆ ವಿದಾಯ ಹೇಳಿದವು. ಸೂರ್ಯಕಿರಣ್‌ ಕಹಿ ಘಟನೆ ನಡುವೆಯೇ ಆರಂಭವಾದ ಏರೋ ಶೋದಲ್ಲಿ ಲೋಹದ ಹಕ್ಕಿಗಳು ಸತತ ಐದು ದಿನವೂ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದ್ದು, ದೇಶ, ವಿದೇಶದಿಂದ ಬಂದಿದ್ದ ಯುದ್ಧ ವಿಮಾನಗಳು ತಮ್ಮ ಗೂಡುಗಳತ್ತ ಮರಳಿವೆ.

Advertisement

ಏರ್‌ ಶೋ ಆರಂಭಕ್ಕೆ ಮುನ್ನ ಸಂಭವಿಸಿದ ದುರಂತದಲ್ಲಿ ಸೂರ್ಯ ಕಿರಣ್‌ ತಂಡದ ವಿಂಗ್‌ ಕಮಾಂಡರ್‌ ಸಾಹಿಲ್‌ ಗಾಂಧಿ ಮೃತಪಟ್ಟಿದ್ದರಿಂದ ಯಲಹಂಕ ವಾಯುನೆಲೆಯಲ್ಲಿ ಸೂತಕದ ಛಾಯೆ ಮೂಡಿತ್ತು. ಅದಾದ ಬಳಿಕ ಶನಿವಾರ ಸಂಭವಿಸಿದ ಅಗ್ನಿ ಅವಘಡದಿಂದ ಮುನ್ನೂರು ಕಾರುಗಳು ಭಸ್ಮವಾಗಿ ಏರೋ ಇಂಡಿಯಾವನ್ನು ಕಾರ್ಮೋಡ ಆವರಿಸಿತ್ತು. ಅವೆಲ್ಲಗಳನ್ನು ಮೀರಿ ಅಂತಿಮ ದಿನ ಬಾನಿಗೆ ಜಿಗಿದ ವಿಮಾನಗಳು “ವಾವ್‌’ ಎನ್ನುವಂತಹ ಪ್ರದರ್ಶನ ನೀಡಿ ಎಲ್ಲ ನೋವುಗಳನ್ನು ಮರೆಸುವ ಮೂಲಕ 12ನೇ ವೈಮಾನಿಕ ಪ್ರದರ್ಶನವನ್ನು ಯಶಸ್ವಿಯಾಗಿಸಿದವು.

ಏರ್‌ ಶೋ ಕೊನೆಯ ದಿನವಾದ ಭಾನುವಾರ ಬೆಳಗ್ಗೆ 8.30ರಿಂದಲೇ ಸಾವಿರಾರು ಜನರು ಯಲಹಂಕ ವಾಯುನೆಲೆಯಲ್ಲಿ ನೆರೆದಿದ್ದರು. ಬೆಳಗ್ಗೆ 10 ಗಂಟೆಗೆ ಸೂರ್ಯ ಕಿರಣ್‌ ತಂಡ ಪ್ರದರ್ಶನ ನೀಡುವ ಮೂಲಕ ಕೊನೆಯ ದಿನ ಪ್ರದರ್ಶನಕ್ಕೆ ಚಾಲನೆ ನೀಡಿತು. ಬಿರು ಬಿಸಿಲು ನೆತ್ತಿ ಸುಡುತ್ತಿದ್ದರೂ ಆಕಾಶದೆಡೆ ಮುಖ ಮಾಡಿದ ಪ್ರೇಕ್ಷಕರು ಶಿಳ್ಳೆ-ಚಪ್ಪಾಳೆ ಮೂಲಕ ಯುದ್ಧ ವಿಮಾನಗಳ ಕಸರತ್ತುಗಳನ್ನು ಮೆಚ್ಚಿಕೊಂಡರು.

ಭಾನುವಾರ ಎರಡು ಪ್ರದರ್ಶನಗಳಲ್ಲಿ ಸೂರ್ಯ ಕಿರಣ್‌, ನೇತ್ರಾ, ಯಾಕ್‌, ಧ್ರುವ, ತೇಜಸ್‌, ಧನುಷ್‌, ಪ್ರೋಟೋ, ಸುಖೋಯ್‌, ಭೀಮ್‌, ಎಫ್-16, ಡಕೋಟ ಹಾಗೂ ಸಾರಂಗ್‌ ತಂಡಗಳು ಮನರಂಜಿಸಿದವು. ಆದರೆ, ಮಧ್ಯಾಹ್ನ ಸೂರ್ಯ ಕಿರಣ ತಂಡ ಬಾನಂಗಳಕ್ಕೆ ಜಿಗಿಯದಿರುವುದು ಪ್ರೇಕ್ಷಕರಿಗೆ ಬೇಸರ ತರಿಸಿತು.

ಸಾರಂಗ್‌ ತಂಡದ ಹೆಲಿಕಾಪ್ಟರ್‌ಗಳು ಕೊನೆಯದಾಗಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿವು. ಅಲ್ಲಿಗಾಗಲೇ ನಿರೂಪಕರು 2019ರ ಏರೋ ಶೋ ಮುಗಿಯಿತೆಂದು ಘೋಷಿಸಿದರೆ, ಸೂರ್ಯನ ಜತೆ ಜತೆಗೆ ಸಾರಂಗ್‌ ಹೆಲಿಕಾಪ್ಟರ್‌ಗಳು ಭುವಿಗಿಳಿದವು. ಅದ್ಭುತ ಗಳಿಗೆಗಳನ್ನು ಕಣ್ತುಂಬಿಕೊಂಡ ಸಾರ್ಥಕತೆಯ ಭಾವದೊಂದಿಗೆ ಜನರು ಮನೆ ಕಡೆಗೆ ಭಾರವಾದ ಹೆಜ್ಜೆ ಹಾಕಿದರು. 

Advertisement

ಪ್ರೇಕ್ಷಕರ ಸಂಖ್ಯೆಯಲ್ಲಿ ಶೇ.25ರಷ್ಟು ಇಳಿಕೆ: ಏರೋ ಇಂಡಿಯಾ 2019ಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕದರೂ, ಪ್ರೇಕ್ಷಕರ ಸಂಖ್ಯೆಯಲ್ಲಿ ಕಳೆದ ಬಾರಿಗಿಂತ ಶೇ.25ರಷ್ಟು ಇಳಿಕೆ ಕಂಡುಬಂದಿದೆ. ಸೂರ್ಯ ಕಿರಣ ದುರಂತದ ಹೊರತಾಗೂ ವೈಮಾನಿಕ ಪ್ರದರ್ಶನ ಕಣ್ತುಂಬಿಕೊಳ್ಳಲು ಶನಿವಾರ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು.

ಆದರೆ, ಶನಿವಾರ ಮಧ್ಯಾಹ್ನ ಪ್ರೇಕ್ಷಕರ ಮುನ್ನೂರು ಕಾರುಗಳು ಬೆಂಕಿಗಾಹುತಿಯಾದ ಪರಿಣಾಮ ಆತಂಕಕ್ಕೆ ಒಳಗಾಗಿದ್ದ ಜನ, ಭಾನುವಾರ ನಿರೀಕ್ಷಿತ ಪ್ರಮಾಣದಲ್ಲಿ ವಾಯುನೆಲೆಗೆ ಬರಲಿಲ್ಲ. ಏರ್‌ಫೋರ್ಸ್‌ ಅಧಿಕಾರಿಗಳೇ ಹೇಳುವಂತೆ 2017ರಲ್ಲಿ 5.50 ಲಕ್ಷ ಜನರು ಏರ್‌ ಶೋ ವೀಕ್ಷಿಸಿದ್ದರು. ಪ್ರಸಕ್ತ ವರ್ಷ 4 ಲಕ್ಷ ಜನ ಮಾತ್ರ ಭೇಟಿ ನೀಡಿದ್ದಾರೆ.

ಸಿನಿಮಾ ತೋರಿಸುತ್ತಿಲ್ಲ, ಶಕ್ತಿ ಪ್ರದರ್ಶಿಸುತ್ತಿದ್ದೇವೆ – ರಾಜ್ಯಪಾಲ: ವೈಮಾನಿಕ ಪ್ರದರ್ಶನದ ಮೂಲಕ ನಾವೇನು ಸಿನಿಮಾ ತೋರಿಸುತ್ತಿಲ್ಲ. ಬದಲಿಗೆ ಭಾರತೀಯ ಸೇನೆಯ ಶಕ್ತಿ ಸಾಮರ್ಥ್ಯವನ್ನು ಜಗತ್ತಿಗೆ ಪ್ರದರ್ಶಿಸುತ್ತಿದ್ದೇವೆ ಎಂದು ರಾಜ್ಯಪಾಲ ವಿ.ಆರ್‌.ವಾಲಾ ತಿಳಿಸಿದರು.

12ನೇ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಎಚ್‌ಎಎಲ್‌ ನಿರ್ಮಿಸಿರುವ ಸುಖೋಯ್‌ ಹಾಗೂ ತೇಜಸ್‌ ವಿಮಾನಗಳು ಸದೃಢವಾಗಿದ್ದು, 2022ರ ವೇಳೆಗೆ ಎಫ್-22 ರೀತಿಯ ವಿಮಾನಗಳನ್ನು ತಯಾರಿಸಬೇಕಿದೆ ಎಂದು ಹೇಳಿದರು. 

ಕಮಾಂಡ್‌ ಚೀಫ್ ಏರ್‌ ಮಾರ್ಷಲ್‌ (ತರಬೇತಿ) ಆರ್‌.ಕೆ.ಎಸ್‌.ಬದೋರಿಯಾ ಮಾತನಾಡಿ, 2017ರ ಏರೋ ಇಂಡಿಯಾದಲ್ಲಿ 24 ರೀತಿಯ ವಿಮಾನಗಳ ಪ್ರದರ್ಶನ ಹಾಗೂ ಹಾರಾಟ ಮಾಡಿದ್ದವು. ಈ ಬಾರಿ 54 ಮಾದರಿಯ ವಿಮಾನಗಳು ಪಾಲ್ಗೊಂಡಿದ್ದವು. ಆ ಮೂಲಕ ವೈಮಾನಿಕ ಕ್ಷೇತ್ರದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಪ್ರಗತಿ ಸಾಧಿಸುತ್ತಿದೆ. ಯುದ್ಧ ವಿಮಾನಗಳೊಂದಿಗೆ ಡ್ರೋಣ್‌ ಒಲಿಂಪಿಕ್‌ ಕೂಡ ನಡೆಸಿದ್ದು ಈ ಬಾರಿಯ ವಿಶೇಷ ಎಂದರು.

ನಿತ್ರಾಣ, ಮಗು ಹುಡುಕಾಟ: ಏರೋ ಶೋ ವೇಳೆ ವ್ಯಕ್ತಿಯೊಬ್ಬರು ಕಡಿಮೆ ರಕ್ತದೊತ್ತದಿಂದ ನಿತ್ರಾಣಗೊಂಡು ಕುಸಿದು ಬಿದ್ದರು. ಕೂಡಲೇ ಅವರನ್ನು ಆ್ಯಂಬುಲೆನ್ಸ್‌ ಮೂಲಕ ಸಮೀಪದ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಇದೇ ವೇಳೆ ಮಗುವೊಂದು ತಪ್ಪಿಸಿಕೊಂಡಿದ್ದರಿಂದ ಪೋಷಕರು ಕಂಗಾಲಾದ ಘಟನೆಯೂ ನಡೆಯಿತು.

ಊಟಕ್ಕೆ ಹೋದಾಗ ಮಗು ಕಳೆದಿದೆ. ಹುಡುಕಿಕೊಡುವಂತೆ ಪೋಷಕರು ಭದ್ರತಾ ಸಿಬ್ಬಂದಿಯಲ್ಲಿ ಮನವಿ ಮಾಡಿದ್ದು, ನಿರೂಪಕರು ಮೈಕ್‌ನಲ್ಲಿ ಘೋಷಿಸುವ ಮೂಲಕ ಮಗು ಹುಡುಕಿಕೊಡುವಂತೆ ಜನರಿಗೆ ಮನವಿ ಮಾಡಿದರು.

ಪ್ರದರ್ಶವನ್ನು ಉತ್ತಮವಾಗಿ ರೂಪಿಸಲಾಗಿದ್ದು, ಎಲ್ಲ ವ್ಯವಸ್ಥೆಗಳು ಉತ್ತಮವಾಗಿವೆ. ಏರೋ ಂಡಿಯಾ ಹೆಚ್ಚು ಖುಷಿ ಕೊಟ್ಟಿದೆ.
-ದೀಪ್ಸಿಕಾ, ಉತ್ತರ ಪ್ರದೇಶ

ಏರ್‌ ಶೊಗೆ ಎರಡನೇ ಬಾರಿ ಬಂದಿದ್ದು, ಕಳೆದ ಬಾರಿಗಿಂತಲೂ ಈ ಬಾರಿಯ ಪ್ರದರ್ಶನ ಉತ್ತಮವಾಗಿತ್ತು.
-ಸುಮಿತ್‌, ಮಲ್ಲೇಶ್ವರ

ಇಪ್ಪತ್ತು ವರ್ಷಗಳ ನಂತರ ಏರ್‌ ಶೋ ನೋಡಲು ಬಂದಿದ್ದು, ವಿಮಾನಗಳ ಕಸರತ್ತುಗಳು ನನ್ನನ್ನು ಮೂಕ ವಿಸ್ಮಿತಗೊಳಿಸಿದವು.
-ಶ್ರೀನಿವಾಸ್‌, ಮತ್ತೀಕೆರೆ

ಏರ್‌ ಶೋ ತುಂಬಾ ಸುಂದರವಾಗಿ ಮೂಡಿ ಬಂತು. ಮಹಿಳೆಯರು ಹಾಗೂ ಮಕ್ಕಳಿಗೆ ಕನಿಷ್ಠ ಪೆಂಡಾಲ್‌ ವ್ಯವಸ್ಥೆ ಮಾಡಬೇಕಿತ್ತು.
-ಚಂದನ್‌, ಅಸ್ಸಾಂ

ಪುಣೆಯಲ್ಲಿ ಏರೋ ಶೋ ನೋಡಿದ್ದೇನೆ. ಆದರೆ, ಅಲ್ಲಿಗಿಂತಲೂ ಬೆಂಗಳೂರಿನಲ್ಲಿ ನೋಡಿದ್ದು ಹೆಚ್ಚು ಖುಷಿ ತಂದಿದೆ.
-ಮನಿಷಾ, ಪುಣೆ

ಈ ವರ್ಷದ ಪ್ರದರ್ಶನ ವಿಶೇಷವಾಗಿತ್ತು. ಸೂರ್ಯ ಕಿರಣ ಪ್ರದರ್ಶನ ನೋಡಲಾಗಲಿಲ್ಲ ಎಂಬ ಬೇಸರವಿದೆ.
-ನಾಗೇಶ್‌, ಯಲಹಂಕ

ಈ ಬಾರಿ ಹೆಚ್ಚಿನ ಸಂಖ್ಯೆ ವಿಮಾನಗಳು ಹಾರಾಟ ನಡೆಸಿದ್ದು, ಸೂರ್ಯ ಕಿರಣ ದುರಂತ ತುಂಬಾ ಬೇಸರ ಮೂಡಿಸಿದೆ.
-ಶ್ರೇಷ್ಠ್, ಉತ್ತರ ಪ್ರದೇಶ

ಟಿವಿಯಲ್ಲಿ ಮಾತ್ರ ನೋಡುತ್ತಿದ್ದ ವೈಮಾನಿಕ ಪ್ರದರ್ಶನವನ್ನು ಮೊದಲ ಬಾರಿ ಯುದ್ಧ ವಿಮಾನಗಳನ್ನು ಪ್ರತ್ಯಕ್ಷವಾಗಿ ನೋಡಿದ್ದೇ ಖುಷಿ.
-ನವ್ಯಾ, ವಿದ್ಯಾರಣ್ಯಪುರ

ಮೊದಲ ಬಾರಿಗೆ ಏರೋ ಇಂಡಿಯಾಗೆ ಬಂದಿದ್ದು, ವಿಮಾನಗಳ ಹಾರಾಟ ನೋಡಲು ತುಂಬಾ ರೋಮಾಂಚನವಾಗಿತ್ತು.
-ಅಕಾಂಕ್ಷ್, ಮತ್ತಿಕೆರೆ

* ವೆಂ.ಸುನೀಲ್‌ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next