Advertisement

ಫೈನಲ್‌ ರೇಸ್‌ನಲ್ಲಿ ಬೆಲಿಂಡಾ-ಬಿಯಾಂಕಾ

11:06 AM Sep 07, 2019 | Sriram |

ನ್ಯೂಯಾರ್ಕ್‌: ಯುಎಸ್‌ ಓಪನ್‌ ಪುರುಷರ ವಿಭಾಗದಲ್ಲಿ ಸ್ವಿಜರ್‌ಲ್ಯಾಂಡ್‌ ನಿರಾಸೆ ಅನುಭವಿಸಿದರೂ ವನಿತಾ ವಿಭಾಗದಲ್ಲಿ 13ನೇ ಶ್ರೇಯಾಂಕದ ಬೆಲಿಂಡಾ ಬೆನ್ಸಿಕ್‌ ಸೆಮಿಫೈನಲ್‌ಗೆ ನೆಗೆಯುವ ಮೂಲಕ ಸ್ವಿಸ್‌ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದಾರೆ. ಇವರ ಎದುರಾಳಿ ಕೆನಡಾದ ಬಿಯಾಂಕಾ ಆ್ಯಂಡ್ರಿಸ್ಕಾ.

Advertisement

ಇಬ್ಬರ ಪಾಲಿಗೂ ಇದು ಮೊದಲ ಗ್ರ್ಯಾನ್‌ಸ್ಲಾಮ್‌ ಸೆಮಿಫೈನಲ್‌ ಸಂಭ್ರಮ ಎಂಬುದು ವಿಶೇಷ. ಅಷ್ಟೇ ಅಲ್ಲ, ಇವರಿಬ್ಬರು ಪರಸ್ಪರ ಎದುರಾಗುತ್ತಿರುವುದು ಕೂಡ ಇದೇ ಮೊದಲು.

ಬೆಲಿಂಡಾ-ಬಿಯಾಂಕಾ ಉಪಾಂತ್ಯದಲ್ಲಿ ಪರಸ್ಪರ ಎದುರಾಗಲಿದ್ದು, ಒಬ್ಬರಿಗೆ ಮೊದಲ ಸಲ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಬಾಗಿಲು ತೆರೆಯಲಿದೆ. ಭಾರತೀಯ ಕಾಲಮಾನ ಪ್ರಕಾರ ಈ ಪಂದ್ಯ ಶುಕ್ರವಾರ ಬೆಳಗ್ಗೆ 5.45ಕ್ಕೆ ಆರಂಭವಾಗಲಿದೆ. ಮೊದಲ ಸೆಮಿಫೈನಲ್‌ 4.30ಕ್ಕೆ ಶುರುವಾಗಲಿದ್ದು, ಇದರಲ್ಲಿ ಸೆರೆನಾ ವಿಲಿಯಮ್ಸ್‌-ಎಲಿನಾ ಸ್ವಿಟೋಲಿನಾ ಮುಖಾಮುಖೀ ಆಗಲಿದ್ದಾರೆ. ಈ ನಾಲ್ವರಲ್ಲಿ ಸೆರೆನಾ ಹೊರತುಪಡಿಸಿ ಉಳಿದವರ್ಯಾರೂ ಈವರೆಗೆ ಗ್ರ್ಯಾನ್‌ಸ್ಲಾಮ್‌ ಚಾಂಪಿಯನ್‌ ಆಗಿಲ್ಲ.

ಕನಸು ನನಸಾಗಿದೆ…
ಬುಧವಾರ ರಾತ್ರಿ ನಡೆದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಬೆಲಿಂಡಾ ಬೆನ್ಸಿಕ್‌ 23ನೇ ಶ್ರೇಯಾಂಕದ ಕ್ರೊವೇಶಿಯನ್‌ ಆಟಗಾರ್ತಿ ಡೋನಾ ವೆಕಿಕ್‌ ವಿರುದ್ಧ 7-6 (7-5), 6-3 ಅಂತರದ ಗೆಲುವು ಸಾಧಿಸಿದರು. ಇದು ವೆಕಿಕ್‌ ವಿರುದ್ಧ ಆಡಿದ 4 ಪಂದ್ಯಗಳಲ್ಲಿ ಬೆನ್ಸಿಕ್‌ ಸಾಧಿಸಿದ 4ನೇ ಜಯ.

ಅನಂತರದ ಪಂದ್ಯದಲ್ಲಿ ಬಿಯಾಂಕಾ ಆ್ಯಂಡ್ರಿಸ್ಕಾ ಮೊದಲ ಸೆಟ್‌ ಕಳೆದುಕೊಂಡರೂ ದಿಟ್ಟ ಹೋರಾಟ ನಡೆಸಿ ಬೆಲ್ಜಿಯಂನ 25ನೇ ಶ್ರೇಯಾಂಕದ ಎಲಿಸ್‌ ಮಾರ್ಟೆನ್ಸ್‌ ಅವರನ್ನು 3-6, 6-2, 6-3ರಿಂದ ಮಣಿಸಿದರು.

Advertisement

“ನಾನು ಬಾಲ್ಯದಿಂದಲೂ ಇಂಥದೊಂದು ಕನಸು ಕಾಣುತ್ತಿದ್ದೆ. ಇಂದು ನನಸಾಗಿದೆ. ಗ್ರ್ಯಾನ್‌ಸ್ಲಾಮ್‌ ಸೆಮಿಫೈನಲ್‌ ಪಂದ್ಯವನ್ನು ಬಹಳ ಖುಷಿಯಿಂದ ಆಡಲಿದ್ದೇನೆ’ ಎಂಬುದು ಬೆಲಿಂಡಾ ಬೆನ್ಸಿಕ್‌ ಪ್ರತಿಕ್ರಿಯೆ. ಹಾಲಿ ಚಾಂಪಿಯನ್‌ ನವೋಮಿ ಒಸಾಕಾ ಅವರನ್ನು ಕೂಟದಿಂದ ಹಿಮ್ಮೆಟ್ಟಿಸಿದ ಬೆನ್ಸಿಕ್‌, 2016ರ ಬಳಿಕ ಟಾಪ್‌-10 ರ್‍ಯಾಂಕಿಂಗ್‌ ಯಾದಿಯಲ್ಲಿ ಕಾಣಿಸಿಕೊಳ್ಳುವುದು ಖಚಿತಗೊಂಡಿದೆ.

ಕಿರಿಯ ಸಾಧಕಿ ಬಿಯಾಂಕಾ
19ರ ಹರೆಯದ ಬಿಯಾಂಕಾ ಆ್ಯಂಡ್ರಿಸ್ಕಾ ಕಳೆದೊಂದು ದಶಕದಲ್ಲಿ ಯುಎಸ್‌ ಓಪನ್‌ ಸೆಮಿಫೈನಲ್‌ ತಲುಪಿದ ಅತೀ ಕಿರಿಯ ಆಟಗಾರ್ತಿಯಾಗಿ ಮೂಡಿಬಂದರು. 2009ರಲ್ಲಿ ಕ್ಯಾರೋಲಿನ್‌ ವೋಜ್ನಿಯಾಕಿ ಈ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಕೆನಡಾದ 3ನೇ ಆಟಗಾರ್ತಿ
ಯುಎಸ್‌ ಓಪನ್‌ ಮುಖ್ಯ ಸುತ್ತಿಗೆ ಪದಾರ್ಪಣೆಗೈದ ವರ್ಷದಲ್ಲೇ ಸೆಮಿಫೈನಲ್‌ ತಲುಪಿದ ಕ್ರಿಸ್‌ ಎವರ್ಟ್‌, ಪಾಮ್‌ ಶ್ರಿವರ್‌ ಮತ್ತು ವೀನಸ್‌ ವಿಲಿಯಮ್ಸ್‌ ಸಾಲಿನಲ್ಲಿ ಆ್ಯಂಡ್ರಿಸ್ಕಾ ಕೂಡ ಕಾಣಿಸಿಕೊಂಡರು. 139 ವರ್ಷಗಳ ಯುಎಸ್‌ ಓಪನ್‌ ಚರಿತ್ರೆಯಲ್ಲಿ ಸೆಮಿಫೈನಲ್‌ ತಲುಪಿದ ಕೆನಡಾದ ಕೇವಲ 3ನೇ ಆಟಗಾರ್ತಿ ಎಂಬುದು ಕೂಡ ಆ್ಯಂಡ್ರಿಸ್ಕಾ ಹೆಗ್ಗಳಿಕೆ. 1909ರಲ್ಲಿ ಲೋಯಿಸ್‌ ಮೋಯೆಸ್‌ ಮತ್ತು 1984ರಲ್ಲಿ ಕಾರ್ಲಿಂಗ್‌ ಬಸೆಟ್‌ ಈ ಸಾಧನೆ ಮಾಡಿದ್ದರು.

ರಫೆಲ್‌ ನಡಾಲ್‌ ಎದುರಾಳಿ ಮ್ಯಾಟಿಯೊ ಬೆರೆಟಿನಿ
ಸ್ಪೇನಿನ ದೈತ್ಯ ಆಟಗಾರ ರಫೆಲ್‌ ನಡಾಲ್‌ ಮತ್ತು ಇಟಲಿಯ ಮ್ಯಾಟಿಯೊ ಬೆರೆಟಿನಿ ಯುಎಸ್‌ ಓಪನ್‌ಪುರುಷರ ಸಿಂಗಲ್ಸ್‌ಸೆಮಿ ಫೈನಲ್‌ನಲ್ಲಿ ಪರಸ್ಪರ ಎದುರಾಗಲಿದ್ದಾರೆ.
ಬುಧವಾರ ರಾತ್ರಿಯ ಕ್ವಾರ್ಟರ್‌ ಫೈನಲ್‌ನಲ್ಲಿ 3 ಬಾರಿಯ ಚಾಂಪಿಯನ್‌ ರಫೆಲ್‌ ನಡಾಲ್‌ 6-4, 7-5, 6-2 ಅಂತರದಿಂದ ಆರ್ಜೆಂಟೀನಾದ ಡೀಗೊ ಶಾರ್ಟ್ಸ್ಮನ್‌ ಅವರನ್ನು ಹಿಮ್ಮೆಟ್ಟಿಸಿದರು. ಇದರೊಂದಿಗೆ ಶಾರ್ಟ್ಸ್ ಮನ್‌ ವಿರುದ್ಧ ನಡಾಲ್‌ ಅವರ ಅಜೇಯ ದಾಖಲೆ 8-0 ಅಂತರಕ್ಕೆ ವಿಸ್ತರಿಸಲ್ಪಟ್ಟಿತು.

ದಿನದ ಇನ್ನೊಂದು ಕ್ವಾ. ಫೈನಲ್‌ನಲ್ಲಿ ಬೆರೆಟಿನಿ ಭಾರೀ ಹೋರಾಟದ ಬಳಿಕ ಫ್ರಾನ್ಸ್‌ನ ಗೇಲ್‌ ಮಾನ್‌ಫಿಲ್ಸ್‌ ಅವರನ್ನು 3-6, 6-3, 6-2, 3-6, 7-6 (7-5) ಅಂತರದಿಂದ ಪರಾಭವಗೊಳಿಸಿ ನಿಟ್ಟುಸಿರೆಳೆದರು. ಇನ್ನೊಂದು ಸೆಮಿಫೈನಲ್‌ನಲ್ಲಿ ಮೆಡ್ವಡೇವ್‌-ಡಿಮಿಟ್ರೋವ್‌ ಸೆಣಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next