Advertisement

ಹವಾಮಾನ ವೈಪರೀತ್ಯ: ಮಲೇರಿಯಾ, ಡೆಂಗ್ಯೂ ಭೀತಿ

01:28 AM Nov 25, 2021 | Team Udayavani |

ಮಂಗಳೂರು/ಉಡುಪಿ: ಹವಾಮಾನ ವೈಪರೀತ್ಯದಿಂದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಆಗಾಗ್ಗೆ ಬಿಸಿಲು ಮತ್ತು ಮಳೆಯ ವಾತಾವರಣ ಇರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಎದುರಾಗಿವೆ.

Advertisement

ಕೊರೊನಾದಿಂದ ಜನರು ನಿಧಾನವಾಗಿ ಚೇತರಿಸುತ್ತಿದ್ದು, ಈಗ ಬಿಟ್ಟು ಬಿಟ್ಟು ಮಳೆ ಬರುವುದರಿಂದ ಅಲ್ಲಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಆಗಿ ಮಲೇರಿಯಾ, ಡೆಂಗ್ಯೂ, ನೋರಾ ಮತ್ತು ಇತರ ವೈರಲ್‌ ಜ್ವರದ ಭೀತಿ ಇದೆ.

ಜಿಲ್ಲೆಯ ಗ್ರಾಮಾಂತರ ಭಾಗದ ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ, ಬಂಟ್ವಾಳ ತಾ|ಗಳಲ್ಲಿ ಡೆಂಗ್ಯೂ ಜಾಸ್ತಿ ಇದ್ದರೆ, ಮಂಗಳೂರು ನಗರದಲ್ಲಿ ಮಲೇರಿಯಾ ಜಾಸ್ತಿ ಇದೆ.

2021ರಲ್ಲಿ ಜಿಲ್ಲೆಯಲ್ಲಿ ಕಳೆದ 10 ತಿಂಗಳಲ್ಲಿ (ಅಕ್ಟೋಬರ್‌ ಅಂತ್ಯಕ್ಕೆ) 665 ಮಲೇರಿಯಾ ಮತ್ತು 247 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.

ಶೇ. 85 ಮಲೇರಿಯಾ ಪ್ರಕರಣಗಳು ಮಂಗಳೂರು ನಗರದಲ್ಲಿ ಹಾಗೂ ಶೇ. 85 ಡೆಂಗ್ಯೂ ಜ್ವರ ಗ್ರಾಮಾಂತರ ತಾಲೂಕುಗಳಲ್ಲಿ ಕಂಡು ಬರುತ್ತಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಕಚೇರಿ ಮೂಲಗಳು ತಿಳಿಸಿವೆ.

Advertisement

ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಲೇಯಾ ಪ್ರಮಾಣ ಶೇ. 30ರಷ್ಟು ಕಡಿಮೆ. ಡೆಂಗ್ಯೂ ಪ್ರಕರಣಗಳು ಕಳೆದ ವರ್ಷದಷ್ಟೇ ಇವೆ. ರಾಜ್ಯ ಮಟ್ಟದಲ್ಲಿ ಈ ವರ್ಷ ಡೆಂಗ್ಯೂ ಜಾಸ್ತಿ ಆಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ .

ಈ ವರ್ಷ ಡೆಂಗ್ಯೂ ಮಂಗಳೂರು ನಗರದಲ್ಲಿ 54, ಮಂಗಳೂರು ಗ್ರಾಮಾಂತರ 56, ಬಂಟ್ವಾಳ 58, ಪುತ್ತೂರು 32, ಸುಳ್ಯ 26, ಬೆಳ್ತಂಗಡಿ 20 ಪ್ರಕರಣಗಳು ವರದಿಯಾಗಿವೆ.

ಇದನ್ನೂ ಓದಿ:ಸಿಂಹದೊಂದಿಗೆ ಕುಚೇಷ್ಟೆ ಮಾಡಲು ಹೋಗಿ ಪೇಚಿಗೆ ಸಿಲುಕಿದ ಯುವಕ-ವಿಡಿಯೋ ವೈರಲ್‌

ಕರ್ತವ್ಯ ನಿರತ ಸಿಬಂದಿ
ಜಿಲ್ಲೆಯಲ್ಲಿ ಕೇವಲ ಮಲೇರಿಯಾ ನಿಯಂತ್ರಣಕ್ಕಾಗಿ 46 ಮಂದಿ ಸಿಬಂದಿ ನಿಯೋಜಿಸಲಾಗಿದ್ದು, ಅವರಿಗೆ ಮಲೇ ರಿಯಾ ಹೊರತು ಪಡಿಸಿ ಬೇರೆ ಯಾವುದೇ ಕರ್ತವ್ಯದ ಹೊರೆ ವಹಿಸಲಾಗುತ್ತಿಲ್ಲ. 3 ವರ್ಷಗಳ ಹಿಂದೆ 30ರಷ್ಟಿದ್ದ ಸಿಬಂದಿ ಈಗ 46ಕ್ಕೇರಿದೆ. ಅವರ ಸತತ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಲೇರಿಯಾ ಬಾಧಿತ ಪ್ರದೇಶಗಳಾದ ಬಂದರು, ಕುದ್ರೋಳಿ, ಕಸ್ಬಾ ಬೆಂಗ್ರೆ, ಮಣ್ಣಗುಡ್ಡೆ ಮುಂತಾದ ಕಡೆ ಈಗ ಈ ಕಾಯಿಲೆ ಬಹಳಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ ಎನ್ನುತ್ತಾರೆ ದ.ಕ. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ನವೀನ್‌ಚಂದ್ರ ಕುಲಾಲ್‌.

ಉಡುಪಿ: ಡೆಂಗ್ಯೂ ಏರಿಕೆ
ಆಗಸ್ಟ್‌ನಿಂದ ಅಕ್ಟೋಬರ್‌ ತಿಂಗಳವರೆಗೆ ಮಲೇರಿಯಾ ಉಡುಪಿ ಜಿಲ್ಲೆಯಲ್ಲಿ ಇಳಿಕೆ ಕಂಡಿದ್ದರೂ ಡೆಂಗ್ಯೂ ಮಾತ್ರ ಏರುತ್ತಿದೆ. ಆಗಸ್ಟ್‌ ತಿಂಗಳಲ್ಲಿ ಮಲೇರಿಯಾ 6, ಸೆಪ್ಟಂಬರ್‌ನಲ್ಲಿ 2, ಅಕ್ಟೋಬರ್‌ನಲ್ಲಿ 3 ದಾಖಲಾಗಿದೆ.

ಡೆಂಗ್ಯೂ ಆಗಸ್ಟ್‌ ನಲ್ಲಿ 20, ಸೆಪ್ಟಂಬರ್‌ನಲ್ಲಿ 20, ಅಕ್ಟೋಬರ್‌ನಲ್ಲಿ ಇದುವರೆಗೆ 22 ಪ್ರಕರಣಗಳು ವರದಿಯಾಗಿವೆ. ಜಿಲ್ಲೆ ಯಾದ್ಯಂತ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವ ಬಗ್ಗೆ ಸರ್ವೆ ಮಾಡಲಾಗುತ್ತಿದೆ. ಐಇಸಿ ಮೂಲಕ ಈಗಾಗಲೇ ಹಲವಾರು ಕಡೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.

ಸಾಂಕ್ರಾಮಿಕ ಕಾಯಿಲೆಗಳ ವಿರುದ್ಧ ಆರೋಗ್ಯ ಇಲಾಖೆ ತನ್ನ ಕಾರ್ಯವನ್ನು ಮಾಡುತ್ತಿದೆ. ಆದರೆ ಮುಂದೆ ಇದು ಹೆಚ್ಚಳವಾಗದಂತೆ ನೋಡಿ ಕೊಳ್ಳುವುದು ಜನರ ಜವಾಬ್ದಾರಿ. ಸೊಳ್ಳೆಗಳ ನಿಯಂತ್ರಣದಲ್ಲಿ ಜನ ಸಹಕರಿಸಬೇಕು; ಮನೆ, ಕಟ್ಟಡಗಳ ಸುತ್ತ ನೀರು ನಿಲ್ಲದಂತೆ ನೋಡಿ ಕೊಳ್ಳಬೇಕು.
– ಡಾ| ನವೀನ್‌ ಚಂದ್ರ ಕುಲಾಲ್‌,
ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ, ದ.ಕ. ಜಿಲ್ಲೆ

ಉಡುಪಿ ಜಿಲ್ಲೆಯಲ್ಲಿ ಮಲೇರಿಯಾ ಹಾಗೂ ಡೆಂಗ್ಯೂ ನಿಯಂತ್ರಣಕ್ಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಸದ್ಯದ ಮಳೆಯಿಂದ ಸಾಂಕ್ರಾಮಿಕ ರೋಗ ಹರಡುವುದಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಸ್ಥಳದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ನಗರ, ಗ್ರಾಮೀಣ ಭಾಗದಲ್ಲಿ ಪ್ರತಿ ವಾರ್ಡ್‌ಗಳು, ಗ್ರಾ.ಪಂ.ವ್ಯಾಪ್ತಿಯಲ್ಲಿ ಕಾಲಕಾಲಕ್ಕೆ ಘನತ್ಯಾಜ್ಯ ವಿಲೇವಾರಿ ಮಾಡಿ ಸೊಳ್ಳೆ ಉತ್ಪತ್ತಿಗೆ ಅವಕಾಶ ನೀಡಬಾರದು.
-ಡಾ| ಪ್ರಶಾಂತ್‌ ಭಟ್‌,
ಜಿಲ್ಲಾ ಮಲೇರಿಯಾ ರೋಗ ನಿಯಂತ್ರಣಾಧಿಕಾರಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next