Advertisement

ತೀವ್ರ ವಿರೋಧದ ನಡುವೆ ಕಟ್ಟಡ ತೆರವು

12:47 PM Oct 26, 2021 | Team Udayavani |

ಬೆಂಗಳೂರು: ತೀವ್ರ ವಿರೋಧದ ನಡುವೆ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಡಾ.ಶಿವರಾಮ ಕಾರಂತ ಬಡಾವಣೆಯಲ್ಲಿ ತಲೆಯೆತ್ತಿರುವ ಕಟ್ಟಡಗಳನ್ನು ತೆರವು ಕಾರ್ಯಾಚರಣೆಗೆ ಸೋಮವಾರಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಚಾಲನೆ ನೀಡಿದೆ.

Advertisement

ಉದ್ದೇಶಿತ ಈ ಬಡಾವಣೆಯಲ್ಲಿನ ನಾಲ್ಕು ಕಟ್ಟಡಗಳು ಮತ್ತು ಮೂರು ಎಸಿ ಶೀಟ್‌ನ ಶೆಡ್‌ಗಳನ್ನು ಜೆಸಿಬಿ ಮೂಲಕ ಬಿಡಿಎ ಅಧಿಕಾರಿಗಳ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ಈ ಮೂಲಕ ತೆರವುಕಾರ್ಯಾಚರಣೆಗೆ ಚಾಲನೆ ದೊರಕಿದಂತಾಗಿದೆ. ಸುಪ್ರೀಂ ಕೋರ್ಟ್‌ ರಚಿಸಿರುವ ನ್ಯಾಯಮೂರ್ತಿ ಚಂದ್ರಶೇಖರ್‌ ಸಮಿತಿಗೆ ಅರ್ಜಿ ಸಲ್ಲಿಸಿರುವ ಕಟ್ಟಡಗಳನ್ನು ಹೊರತುಪಡಿಸಿ, 2018ರ ಆಗಸ್ಟ್‌ 3ರನಂತರ ನಿರ್ಮಾಣಗೊಂಡ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಬಿಡಿಎ ಕೈಹಾಕಿದೆ.

ಇದರಲ್ಲಿ ನಿರ್ಮಾಣಗೊಂಡ ಮತ್ತು ನಿರ್ಮಾಣ ಹಂತದಲ್ಲಿರುವ ಎರಡೂ ಪ್ರಕಾರದ ಕಟ್ಟಡಗಳಿವೆ. ಸೋಮವಾರ ನಾಲ್ಕು ಆರ್‌ಸಿಸಿ ಕಟ್ಟಡಗಳು (1 ನೆಲ ಮತ್ತು 2 ಅಂತಸ್ತಿನ ಹಾಗೂ 3 ನೆಲ ಮತ್ತು ಒಂದುಅಂತಸ್ತಿನ) ಹಾಗೂ ಮೂರು ಎಸಿ ಶೀಟ್‌ನ ಶೆಡ್‌ಗಳನ್ನು ತೆರವುಗೊಳಿಸಲಾಯಿತು. ತೆರವು ಕಾರ್ಯಾಚರಣೆಗೆ ಕೈಹಾಕಿದ ಬೆನ್ನಲ್ಲೇ ತೀವ್ರ ಪ್ರತಿರೋಧ ವ್ಯಕ್ತವಾಗಿದ್ದು, ದಾಸರಹಳ್ಳಿ ಶಾಸಕ ಮಂಜುನಾಥ್‌ ನೇತೃತ್ವದಲ್ಲಿ ಪ್ರತಿಭಟನೆ ಕೂಡ ನಡೆಯಿತು. ನಂತರ ಅವರನ್ನು ಪೊಲೀಸರು ವಶಕ್ಕೆ ಪಡೆದರು.

ಅಂದು ಹೋರಾಟ; ಇಂದು ತೆರವು- ಎಚ್‌ಡಿಕೆ ಖಂಡನೆ: ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಕಟ್ಟಡಗಳ ನೆಲಸಮಗೊಳಿಸಿರುವುದು ಹಾಗೂ ಶಾಸಕ ಮಂಜುನಾಥ್‌ ವಶಕ್ಕೆ ಪಡೆದಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. “ನ್ಯಾಯಾಲಯದಲ್ಲಿ ಸರಿಯಾಗಿ ವಾದ ಮಂಡನೆ ಮಾಡದೆ, ಸಮರ್ಪಕ ಮಾಹಿತಿಯನ್ನೂ ನೀಡದೆ ಅಧಿಕಾರಿಗಳು ಮತ್ತು ಸರ್ಕಾರ ಅಮಾಯಕರ ಜೀವನದ ಜತೆ ಚೆಲ್ಲಾಟ ಆಡ್ತಿದ್ದಾರೆ. ಅಷ್ಟಕ್ಕೂ ಬಿಡಿಎ ಈಗಿನ ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್‌ ಅವರೇ ಈ ಜನರ ಪರ ಹೋರಾಟ ಮಾಡಿದ್ದರು. ಈಗ ನೋಡಿದರೆ ಅವರೇ ಮನೆಗಳನ್ನು ನೆಲಸಮ ಮಾಡಿಸುತ್ತಿದ್ದಾರೆ. ಸರ್ಕಾರ ನಿಜಕ್ಕೂ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಗ ನಾನು ಅಧ್ಯಕ್ಷ ಆಗಿರಲಿಲ್ಲ; ವಿಶ್ವನಾಥ್‌: ಬೆನ್ನಲ್ಲೇ ಇದಕ್ಕೆ ಪ್ರತಿಕ್ರಿಯಿಸಿರುವ ಬಿಡಿಎ ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್‌, “ನಾನೂ 2017-18ರಲ್ಲಿ ಅಲ್ಲಿನ ರೈತರಿಗೆ ಬೆಂಬಲ ನೀಡಿದ್ದೆ. ಆಗ, ಸುಪ್ರೀಂ ಕೋರ್ಟ್‌ ಆದೇಶ ಇರಲಿಲ್ಲ. ಹಿಂದಿನ ಸರ್ಕಾರಗಳೇ ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದಂತೆ

Advertisement

ಬಿಡಿಎಯಿಂದ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಹಾಕಿಸಿದ್ದವು. ಇದಾದ ನಂತರ ಎಲ್ಲ ಪ್ರಕ್ರಿಯೆಗಳು ಮುಗಿದ ಮೇಲೆ ನಾನು ಅಧ್ಯಕ್ಷನಾಗಿದ್ದು. ಬಡಾವಣೆ ಮಾಡಬೇಕು ಎಂಬುದು ನಾನು ಅಧ್ಯಕ್ಷನಾದ ನಂತರ ಬಂದ ಆದೇಶವಾಗಿದೆ. ಯಾವುದೇ ಕಾರಣಕ್ಕೂನಾನು ರೈತ ವಿರೋಧಿ ಕೆಲಸ ಮಾಡುವುದಿಲ್ಲ. ಆದರೆ, ಆದೇಶ ಪಾಲನೆ ನಮ್ಮ ಕರ್ತವ್ಯ. ರೈತರೂ 1,500ಎಕರೆ ಜಾಗವನ್ನು ನೀಡಲು ಒಪ್ಪಿಗೆ ನೀಡಿದ್ದಾರೆ’ ಎಂದು ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.

“ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಿ ಇತ್ತೀಚೆಗೆ ಕೂಡ ಶಿವರಾಮ ಕಾರಂತ ಬಡಾವಣೆಯಲ್ಲಿ ಕಟ್ಟಡಗಳನ್ನು ನಿರ್ಮಿಸಿದ್ದು ಕಂಡುಬಂದಿದೆ. ನ್ಯಾಯಾಲಯದ ಆದೇಶದ ಅನ್ವಯ ಬಿಡಿಎ ಅಧಿಕಾರಿಗಳು ಕಟ್ಟಡಗಳನ್ನು ತೆರವುಗೊಳಿಸುತ್ತಿದ್ದಾರೆ. ಇದರಲ್ಲಿ ಬಿಡಿಎ ಅಧಿಕಾರಿಗಳು ಲೋಪ ಎಸಗಿದ್ದರೆ, ಖಂಡಿತ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಆದರೆ, ಕೋರ್ಟ್‌ ಆದೇಶದ ಪಾಲನೆಗೆ ಶಾಸಕರು ಸಹಕರಿಸಬೇಕು’ ಎಂದರು.

“ಸುಪ್ರೀಂ ಕೋರ್ಟ್‌ ಪ್ರತಿ 15 ದಿನಗಳಿಗೊಮ್ಮೆ ಪರಿಶೀಲನೆ ಮಾಡಿ, ಸೂಚನೆ ನೀಡುತ್ತಿದೆ. ಶೀಘ್ರ ಮಾದರಿ ಬಡಾವಣೆಯಾಗಿ ನಿರ್ಮಿಸಲಾಗುವುದು. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು. ನಿವೇಶನ ಮಾಡಿ ಮಾರಾಟ ಮಾಡಿದವರ ಕೈವಾಡ ಇದರಲ್ಲಿ ಹೆಚ್ಚಿದೆ. ಇದು ಸರಿ ಅಲ್ಲ. ಕೋರ್ಟ್‌ ರೈತರ ಪರ ತೀರ್ಪು ನೀಡಿದೆ. ಬೇಕಾಬಿಟ್ಟಿ ಆಪಾದನೆ ಮಾಡುವುದು ಸಲ್ಲದು. ಕಾನೂನು ವಿರುದ್ಧವಾದ ಯಾವುದೇ ಪ್ರಕ್ರಿಯೆಯನ್ನು ಶಿವರಾಮ ಕಾರಂತ ಬಡಾವಣೆಯಲ್ಲಿ ಮಾಡುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next