ದೊಡ್ಡಬಳ್ಳಾಪುರ: ಚರ್ಮಗಂಟು ರೋಗ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಘಾಟಿ ಕ್ಷೇತ್ರದಲ್ಲಿ ದನಗಳ ಜಾತ್ರೆ ನಿಷೇಧಿಸಿ ಜಿಲ್ಲಾಧಿ ಕಾರಿ ಆದೇಶ ನೀಡಿದ್ರೂ, ಸೇರಿದ್ದ ರಾಸುಗಳು ಹಾಗೂ ರೈತರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ವಾಪಸ್ ಕಳುಹಿಸಲಾಯಿತು.
ಜ.31ರವರೆಗೆ ಜಾನುವಾರು ಜಾತ್ರೆ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರೂ, ರೈತರು ಪೆಂಡಾಲ್ ಹಾಕಿ ರಾಸುಗಳನ್ನು ಕರೆ ತಂದಿದ್ದರು. ಮೂರು ದಿನಗಳಿಂದ ಜಾತ್ರೆ ನಡೆಯುತ್ತಿದ್ದು, ರಾಸುಗಳ ವ್ಯಾಪಾರ ಸಹ ಆರಂಭವಾಗಿತ್ತು. ಘಾಟಿ ದೇವಾಲಯದ ಇಒ, ಉಪತಹಶೀಲ್ದಾರ್, ಪಶು ವೈದ್ಯರು, ಅಧಿ ಕಾರಿಗಳು ಮನವಿ ಮಾಡಿದ್ದರೂ ರೈತರು ಪಟ್ಟು ಸಡಿಲಿಸಿರಲಿಲ್ಲ. ತಾಲೂಕು ಆಡಳಿತ ನೀಡುವ ಮೂಲ ಸೌಕರ್ಯ ನಮಗೆ ಬೇಡ, ರಾಸುಗಳನ್ನು ಮಾರಾಟ ಮಾಡಲು ಅವಕಾಶ ಕೊಡಬೇಕೆಂಬುದು ರೈತರ ವಾದವಾಗಿ, ಜಾತ್ರೆ ನಡೆಸಿಯೇ ತೀರುತ್ತೇವೆ ಎಂದು ಜಮಾಯಿಸಿದ್ದರು.
ಪಶು ವೈದ್ಯರಿಂದ ದೂರು ದಾಖಲು: ಜಾತ್ರೆಗೆ ನಿಷೇಧವಿದ್ದರೂ ರೈತರು ರಾಸುಗಳನ್ನು ಕರೆತಂದ ಹಿನ್ನೆಲೆಯಲ್ಲಿ ಪಶು ವೈದ್ಯರು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದ್ದರು. ಜಾನುವಾರು ಜಾತ್ರೆ ತಡೆದು, ತೆರವು ಮಾಡುವಂತೆ ಜಿಲ್ಲಾಧಿಕಾರಿ ಆರ್.ಲತಾ ಅವರು ಗುರುವಾರ ರಾತ್ರಿ ಅಧಿಕಾರಿಗಳಿಗೆ ಸೂಚಿಸಿದ್ದರು. ಅಲ್ಲದೇ, ದೂರು ದಾಖಲಿಸುವಂತೆ ಸಲಹೆ ನೀಡಿದ್ದರು. ಅದರಂತೆ ಪಶು ಇಲಾಖೆ ಉಪನಿರ್ದೇಶಕ ಡಾ.ನಾಗರಾಜು, ಸಹಾಯಕ ನಿರ್ದೇಶಕ ಡಾ.ವಿಶ್ವನಾಥ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರನ್ವಯ ಶುಕ್ರವಾರ ಬೆಳಗ್ಗೆ ಡಿವೈಎಸ್ಪಿ ನಾಗರಾಜ್ ನೇತೃತ್ವದಲ್ಲಿ ನೂರಾರು ಪೊಲೀಸರು ಶ್ರೀಕ್ಷೇತ್ರ ಘಾಟಿಗೆ ಆಗಮಿಸಿ ರೈತರನ್ನು ವಾಪಸ್ ಕಳುಹಿಸಿದರು.
ಪೊಲೀಸ್ ಭದ್ರತೆಯಲ್ಲಿ ಪೆಂಡಾಲ್‌ಗಳನ್ನು ತೆರವು ಮಾಡುತ್ತಿದ್ದು, ಒಬ್ಬೊಬ್ಬರೇ ರೈತರು ಜಾನುವಾರುಗಳೊಂದಿಗೆ ತೆರಳುತ್ತಿದ್ದ ದೃಶ್ಯ ಕಂಡು ಬಂತು.
Related Articles
ಜಾತ್ರೆಯಲ್ಲಿ ಚರ್ಮಗಂಟಿ ರಾಸುಗಳು ಪತ್ತೆ: ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸೇರಿದ್ದ ನಾಲ್ಕೈದು ಜಾನುವಾರುಗಳಿಗೆ ಚರ್ಮಗಂಟು ಕಾಯಿಲೆಯ ಲಕ್ಷಣಗಳಿರುವುದು ಪತ್ತೆಯಾಗಿದ್ದು, ಇದನ್ನು ಗಮನಿಸಿದ ಪಶುವೈದ್ಯರು ರೈತರಿಗೆ ತಿಳಿ ಹೇಳಿ ತೆರವು ಮಾಡಿಸಿದ್ದಾರೆ.
ಮೊದಲೇ ಮಾಡಬೇಕಿತ್ತು: ಜಿಲ್ಲಾಡಳಿತ ರಾಸುಗಳ ಜಾತ್ರೆ ಮಾಡಬಾರದೆಂದು ಆದೇಶ ಬಂದಿತ್ತು. ಆದರೂ, ರೈತರೆಲ್ಲ ಸೇರಿ ದನಗಳ ಜಾತ್ರೆ ಮಾಡಿದ್ದಾರೆ. ಜಾತ್ರೆಯಲ್ಲಿ ಚರ್ಮ ಗಂಟು ಕಾಯಿಲೆ ಇರುವುದು ಪತ್ತೆಯಾಗುವುದು ನಮ್ಮೆಲ್ಲರ ದುರಾದೃಷ್ಟ. ಆದರೆ, ಮೊದಲ ದಿನವೇ ಜಿಲ್ಲಾಡಳಿತ ಈ ಕೆಲಸ ಮಾಡಿದ್ದರೆ, ಬೇರೆ ಕಡೆಯಿಂದ ರೈತರು ಬರುತ್ತಿರಲಿಲ್ಲ ಎನ್ನುತ್ತಾರೆ ರೈತ ಚಂದ್ರಶೇಖರ್. ಬಳ್ಳಾರಿ ಹಾಗೂ ಸುತ್ತಮುತ್ತ ಜಿಲ್ಲೆಗಳಿಂದ 100 ಜನ ಬಂದಿದ್ದೇವೆ. ನಮಗೆ ಗೊತ್ತಿದ್ದರೆ ಜಾತ್ರೆಗೆ ಬರುತ್ತಿಲ್ಲ. ಆದರೆ, ಜಾತ್ರೆಗೆ ಬಂದಿದ್ದೇವೆ. ಇದೀಗ ಚರ್ಮ ಗಂಟು ಇರುವುದರಿಂದ ಜಾತ್ರೆಯನ್ನು ಜಿಲ್ಲಾಡಳಿತ ರದ್ದು ಮಾಡಿಸುತ್ತಿದ್ದಾರೆ. ಇದರಿಂದ ನಮಗೆ ಸಹಸ್ರಾರು ರೂ. ನಷ್ಟವಾಗಿದೆ ಎನ್ನುತ್ತಾರೆ ರೈತ ಲಿಂಗಪ್ಪ.