Advertisement

ಪುರಸಭೆಯಿಂದ ಅಂಗಡಿಗಳ ಆಂಗ್ಲ ನಾಮಫಲಕ ತೆರವು

01:26 PM Jun 18, 2022 | Team Udayavani |

ಆಳಂದ: ಪಟ್ಟಣದಲ್ಲಿ ಪುರಸಭೆ ಮುಖ್ಯಾಧಿಕಾರಿ ವಿಜಯ ಮಹಾಂತೇಶ ಹೂಗಾರ ನೇತೃತ್ವದಲ್ಲಿ ಸಿಬ್ಬಂದಿ ಒಳಗೊಂಡ ತಂಡ ಹೋಟೆಲ್‌, ಅಂಗಡಿಗಳ ಮೇಲೆ ಶುಕ್ರವಾರ ಹಠಾತ್‌ ದಾಳಿ ನಡೆಸಿದರು.

Advertisement

ಬಸ್‌ ನಿಲ್ದಾಣ ಮುಂಭಾಗದ ಮುಖ್ಯರಸ್ತೆಯಲ್ಲಿನ ಅಂಗಡಿಗಳ ಮೇಲೆ ಕನ್ನಡ ಫಲಕವಿಲ್ಲದೇ ಆಂಗ್ಲಫಲಕ ಹಾಕಿರುವುದನ್ನು ತೆರವುಗೊಳಿಸಿದರು. ಅಲ್ಲದೇ, ಸ್ಥಳದಲ್ಲೇ ಹಾಜರಿದ್ದ ಪರಿಸರ ಅಭಿಯಂತರ ರವಿಕಾಂತ ಮಿಸ್ಕಿನ್‌ ಮೂಲಕ ಅಂಗಡಿಗಳ ಮಾಲೀಕರಿಗೆ ನೋಟಿಸ್‌ ನೀಡಿದರು.

ಪಟ್ಟಣದ ಬಸ್‌ ನಿಲ್ದಾಣದ ಹೋಟೆಲ್‌ಗೆ ಲಗ್ಗೆ ಹಾಕಿದ್ದ ಮುಖ್ಯಾಧಿಕಾರಿಗಳ ತಂಡ ಕೈ ತೊಳೆಯುವ ಜಾಗದಲ್ಲಿ ಅಸ್ವತ್ಛತೆ, ಸಾಬೂನಿಲ್ಲದೆ ಇರುವುದು, ಕುಡಿಯಲು ನೀರಿನ ಅವ್ಯವಸ್ಥೆ, ಅಡುಗೆ ಕೋಣೆಯಲ್ಲಿ ಹೊಲಸು ಇದ್ದಿದ್ದನ್ನು ಕಂಡು ಸಿಡಿಮಿಡಿಗೊಂಡು, ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಮಾಲೀಕರಿಗೆ ಎಚ್ಚರಿಸಿದರು. ಈ ಹೋಟೆಲ್‌ಗ‌ಳಲ್ಲಿ ವಾಣಿಜ್ಯ ಗ್ಯಾಸ್‌ ಬಳಸುವ ಬದಲು ಗೃಹ ಬಳಕೆ ಗ್ಯಾಸ್‌ಯಿಟ್ಟಿರುವುದು ಏಕೆ ಎಂದು ಪ್ರಶ್ನಿಸಿದರು.

ಪಟ್ಟಣದ ಎಲ್ಲ ಅಂಗಡಿ, ಸಂಘ, ಸಂಸ್ಥೆಯ ಫಲಕಗಳನ್ನು ಕನ್ನಡಕ್ಕೆ ಆದ್ಯತೆ ನೀಡದೇ ಬರೀ ಆಂಗ್ಲದಲ್ಲೇ ಹಾಕಿದ್ದರೆ ಅಂಥ ಎಲ್ಲ ಮಾಲೀಕರಿಗೆ ನೋಟಿಸ್‌ ಜಾರಿಗೊಳಿಸಿ, ಕಡ್ಡಾಯವಾಗಿ ಕನ್ನಡ ನಾಮಫಲಗಳನ್ನು ಅಳವಡಿಸಬೇಕು ಎಂದು ಸೂಚಿಸಿದರು. ಅಕ್ರವಾಗಿ ಮಾರಾಟ ಮಾಡುತ್ತಿದ್ದ ಪ್ಲಾಸ್ಟಿಕ್‌ ಗ್ಲಾಸ್‌, ಚೀಲಗಳನ್ನು ಜಪ್ತಿಮಾಡಿದರು. ಆನಂತರ ವಾರಗಟ್ಟಲೆ ನಿರಂತರವಾಗಿ ಈ ಕಾರ್ಯಾಚರಣೆ ನಡೆಸಬೇಕು ಎಂದು ಸಿಬ್ಬಂದಿಗಳಿಗೆ ವಿಜಯ ಮಹಾಂತೇಶ ಸೂಚಿಸಿದರು. ಪುರಸಭೆ ವ್ಯವಸ್ಥಾಪಕ ಶಂಭುಲಿಂಗ ಕನ್ನೆ, ಪರಿಸರ ಅಭಿಯಂತರ ರವಿಕಾಂತ ಮಿಸ್ಕಿನ್‌, ಎಸ್‌ಐ ರಾಘವೇಂದ್ರ, ಸಿಬ್ಬಂದಿ ಮೋಸಿನ್‌ ಹಾಗೂ ಇನ್ನಿತರರು ಹಾಜರಿದ್ದರು.

ಸಾರ್ವಜನಿಕರು ತಮ್ಮ ಅಂಗಡಿ ಮುಂಗಟ್ಟುಗಳ ಮೇಲೆ ಹಾಕುವ ನಾಮಫಲಕಗಳಲ್ಲಿ ಮೊದಲು ಕನ್ನಡವಿರಬೇಕು. ಆಂಗ್ಲ ಫಲಕ ಹಾಕಿದವರಿಗೆ ನೋಟಿಸ್‌ ಜಾರಿಗೊಳಿಸಲಾಗುತ್ತದೆ. ಇದಕ್ಕೆ ಜಗ್ಗದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ತಮ್ಮ ನೆರೆ, ಹೊರೆಗಳಲ್ಲಿ ಸ್ವತ್ಛತೆಗೆ ಆದ್ಯತೆ ನೀಡಬೇಕು. ಸಮಸ್ಯೆಗಳಿದ್ದರೆ ಗಮನಕ್ಕೆ ತರಬೇಕು. -ವಿಜಯ ಮಹಾಂತೇಶ ಹೂಗಾರ, ಮುಖ್ಯಾಧಿಕಾರಿ, ಪುರಸಭೆ

Advertisement
Advertisement

Udayavani is now on Telegram. Click here to join our channel and stay updated with the latest news.

Next