Advertisement
ರಸ್ತೆಯ ಮಣ್ಣು ರಸ್ತೆಗೆ!?ಉಕ್ಕಿನಡ್ಕ-ಚೆರ್ಕಳ ರಸ್ತೆಯನ್ನು ಅಗಲಗೊಳಿಸುವ ವೇಳೆ ಬಾಕಿ ಉಳಿದ ಮಣ್ಣನ್ನು ಬದಿಯಡ್ಕದಿಂದ ನೆಲ್ಲಿಕಟ್ಟೆಯವರೆಗೆ ರಸ್ತೆಯ ಬದಿಯಲ್ಲಿ ರಾಶಿ ಹಾಕಲಾಗಿದೆ. ಬದಿಯಡ್ಕ-ಚೆರ್ಕಳ ರಸ್ತೆಯ ಎರಡೂ ಭಾಗಗಳಲ್ಲಿ ಮಣ್ಣು ರಾಶಿ ಹಾಕಿರುವುದು ಅಪಾಯಕ್ಕೆ ಕಾರಣವಾಗಲಿದೆ. ಇದು ಮಳೆಗಾಲದಲ್ಲಿ ನೀರಿನೊಂದಿಗೆ ರಸ್ತೆಗೆ ಹರಿದು ಬಂದು ಅಪಾಯ ಸƒಷ್ಟಿಸಲಿದೆ ಎಂದು ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ. ಮೆಕ್ಕಡಾಂ ಡಾಮರೀಕರಣ ಅಂಗವಾಗಿ ಉಕ್ಕಿನಡ್ಕದಿಂದ ಬದಿಯಡ್ಕದವರೆಗೆ ರಸ್ತೆ ಅಗಲಗೊಳಿಸಲಾಗಿತ್ತು. 9 ಮೀಟರ್ ಅಗಲದಲ್ಲಿ ಡಾಮರೀಕರಣ ಮಾಡಬೇಕಿದ್ದು ಆನಗತ್ಯವಾಗಿ ಸುಮಾರು 15 ಮೀಟರ್ ಅಗಲದಲ್ಲಿ ಮಣ್ಣು ತೆಗೆಯಲಾಗಿದೆ. ಈ ಮಣ್ಣನ್ನು ಅನಂತರ ಲಾರಿಗಳಲ್ಲಿ ತುಂಬಿಸಿ ಬದಿಯಡ್ಕದ ಕೆಡೆಂಜಿಯಿಂದ ನೆಲ್ಲಿಕಟ್ಟೆವರೆಗೆ ರಸ್ತೆ ಬದಿಯಲ್ಲಿ ಹಾಕಲಾಗಿದೆ. ಇದು ಮಳೆಗಾಲದಲ್ಲಿ ರಸ್ತೆಗೆ ಹರಿದು ಬರಲಿದ್ದು, ವಾಹನ ಸಂಚಾರ ಮೊಟಕುಗೊಳ್ಳುವ ಸಾಧ್ಯತೆಯಿದೆಯೆನ್ನಲಾಗಿದೆ. ಬದಿಯಡ್ಕ ಪೆಟ್ರೋಲ್ ಪಂಪ್ ಬಳಿ, ಬಾಂಜತ್ತಡ್ಕ ತಿರುವು, ನೆಕ್ರಾಜೆ, ಚರ್ಲಡ್ಕ ನೆಲ್ಲಿಕಟ್ಟೆ ಎಂಬೆಡೆಗಳಲ್ಲಿ ಮಣ್ಣು ತುಂಬಿಸಲಾಗಿದೆ.
ಮಳೆಗಾಲದ ಮೊದಲು ಉಕ್ಕಿನಡ್ಕ-ಚೆರ್ಕಳ ರಸ್ತೆಯ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಯಿಲ್ಲ. ಆಮೆಗತಿಯಲ್ಲಿ ನಡೆಯುವ ಉಕ್ಕಿನಡ್ಕದಿಂದ ಪಳ್ಳತ್ತಡ್ಕದವರೆಗೆ ಡಾಮರೀಕರಣ ಮಳೆಗಾಲದ ಮೊದಲು ಇಲ್ಲಿಂದ 2 ಕಿಲೋ ಮೀಟರ್ ದೂರದ ಕಾಡಮನೆ ಅಥವಾ ಕರಿಂಬಿಲದ ವರೆಗೆ ಮಾತ್ರ ತಲುಪಲಿದೆ. ಮುಂದಿನ ಕಾಮಗಾರಿ ಮಳೆಗಾಲದ ಅನಂತರವೇ ನಡೆಯಲಿದೆಯೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ರಸ್ತೆ ಬದಿಯಲ್ಲಿ ಮಣ್ಣು ರಾಶಿ ಹಾಕಿರುವುದರಿಂದ ಹಾಗೂ ಅದು ಮಳೆಗಾಲದಲ್ಲಿ ರಸ್ತೆಗೆ ಕೆಸರಾಗಿ ಹರಿದು ಬರುವ ಸಾಧ್ಯತೆ ಇರುವುದರಿಂದ ಕೆಲವು ಚಾಲಕರು ಲೋಕೋಪಯೋಗಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಆದರೆ ಅವರು ಈ ಬಗ್ಗೆ ಗಮನ ಹರಿಸಿಲ್ಲವೆನ್ನಲಾಗಿದೆ.
Related Articles
ಜನರ ಬಹುಕಾಲದ ಬೇಡಿಕೆಯಂತೆ ಈ ರಸ್ತೆಯ ಕಾಮಗಾರಿ ಪ್ರಾರಂಭವಾಗಿದ್ದು ಮಣ್ಣಿನ ಸಮಸ್ಯೆಯಿಂದ ಚೆರ್ಕಳ-ಪೆರ್ಲ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡರೆ ಅದು ಇನ್ನೊಂದು ಸಮಸ್ಯೆಯಾಗಿ ಕಾಡಲಿದೆ. ಸದಾ ಒಂದಲ್ಲ ಒಂದು ಸಮಸ್ಯೆಯ ಆಗರವಾಗಿರುವ ಈ ರಸ್ತೆಯ ಸಮಸ್ಯೆ ಪೂರ್ಣವಾಗಿ ಕೊನೆಯಾಗುವ ದಿನಗಳು ಇನ್ನೂ ದೂರವಿದೆ ಎಂಬುದು ಇದರಿಂದ ಸಾಬೀತಾದಂತಾಗಿದೆ.
Advertisement
– ಅಖೀಲೇಶ್ ನಗುಮುಗಂ