Advertisement

ಅಕ್ರಮ ಅಂಗಡಿ ಮಳಿಗೆಗಳ ತೆರವು

12:33 PM Nov 03, 2018 | Team Udayavani |

ಮೈಸೂರು: ನ್ಯಾಯಾಲಯದ ಆದೇಶದ ಮೇರೆಗೆ ಮೈಸೂರಿನ ವಿಜಯನಗರ ಮೊದಲನೇ ಹಂತದಲ್ಲಿನ ಖಾಸಗಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಅಂಗಡಿ ಮಳಿಗೆಗಳನ್ನು ಪೊಲೀಸ್‌ ಭದ್ರತೆ ನಡುವೆ ಶುಕ್ರವಾರ ತೆರವುಗೊಳಿಸಲಾಯಿತು. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ನಡೆದ ಕಾರ್ಯಾಚರಣೆಯಲ್ಲಿ ಖಾಸಗಿ ವ್ಯಕ್ತಿಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ 16 ಅಂಗಡಿ ಮಳಿಗೆಗಳನ್ನು ತೆರವುಗೊಳಿಸಲಾಯಿತು.

Advertisement

ವಿಜಯನಗರ ಮೊದಲನೇ ಹಂತದ ದೊಡ್ಡತಮ್ಮಯ್ಯ ವೃತ್ತದ ಬಳಿಯ 13 ಗುಂಟೆ ಜಾಗದಲ್ಲಿ ಅಕ್ರಮವಾಗಿ ಟೀ ಅಂಗಡಿ, ಹೋಟೆಲ್‌, ಕೋಳಿ ಅಂಗಡಿ, ಹಣ್ಣಿನ ಅಂಗಡಿ, ವರ್ಕ್‌ ಶಾಪ್‌ ಸೇರಿದಂತೆ 15ಕ್ಕೂ ಹೆಚ್ಚು ವ್ಯಾಪಾರಿಗಳು ತಾತ್ಕಾಲಿಕ ಮಳಿಗೆಗಳನ್ನು ಹಾಕಿಕೊಂಡು ವ್ಯಾಪಾರ ನಡೆಸುತ್ತಿದ್ದರು. ಆದರೆ ನ್ಯಾಯಾಲಯದ ಆದೇಶದ ಮೇರೆಗೆ ಕೋರ್ಟ್‌ ಅಮೀನ್‌ ನೇತೃತ್ವದಲ್ಲಿ ಜಾಗದ ಮಾಲಿಕರು ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಿದರು. 

ವಿವಾದ ಸ್ಥಳ: ಅಕ್ರಮವಾಗಿ ಅಂಗಡಿ ಮಳಿಗೆಗಳನ್ನು ನಿರ್ಮಿಸಿದ್ದ ಜಾಗಕ್ಕೆ ಸಂಬಂಧಿಸಿದ ಪ್ರಕರಣ ಕಳೆದ ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿತ್ತು. ಸದರಿ ಜಾಗಕ್ಕೆ ಸಂಬಂಧಿಸಿದಂತೆ ಶ್ರೀರಂಗಪಟ್ಟಣದ ಪಾಲಳ್ಳಿಯ ಗಂಗಾಧರ್‌ ಪತ್ನಿ ಪುಟ್ಟಲಕ್ಷ್ಮೀ ಹಾಗೂ ಕುಂಬಾರಕೊಪ್ಪಲಿನ ಲೇಟ್‌ ಸುಬ್ಬೇಗೌಡ ಪುತ್ರ ದೇವಣ್ಣ ನಡುವೆ ವಿವಾದವಿತ್ತು. ಈ ಕುರಿತಂತೆ ಪುಟ್ಟಲಕ್ಷ್ಮೀ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. 

ಈ ನಡುವೆ ಸದರಿ ಜಾಗ ಒತ್ತುವರಿ ಮಾಡಿಕೊಂಡಿದ್ದ ಕೆಲವರು, ಅಕ್ರಮವಾಗಿ ಅಂಗಡಿ ಮಳಿಗೆಗಳನ್ನು ನಿರ್ಮಿಸಿದ್ದರು. ಈ ನಡುವೆ ಪುಟ್ಟಲಕ್ಷ್ಮೀ ಪರವಾಗಿ ತೀರ್ಪು ನೀಡಿದ ನ್ಯಾಯಾಲಯ, ಸದರಿ ಜಾಗದಲ್ಲಿ ನಿರ್ಮಿಸಿರುವ ಅಂಗಡಿ ಮಳಿಗೆಗಳ ತೆರವಿಗೆ ಆದೇಶ ನೀಡಿತ್ತು. ಈ ಆದೇಶದಂತೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಿದರು. 

ಜೆಸಿಬಿ ಸಹಾಯದಿಂದ ಅಂಗಡಿಗಳನ್ನು ತೆರವುಗೊಳಿಸುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಂಗಡಿ ಮಾಲೀಕರು ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಲು ಯತ್ನಿಸಿದರು. ಜಾಗಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯ ನೀಡಿರುವ ಆದೇಶ ಪ್ರತಿ ನಮಗೆ ದೊರೆತಿಲ್ಲ.

Advertisement

ಹೀಗಾಗಿ ಅಂಗಡಿಗಳನ್ನು ತೆರವುಗೊಳಿಸಬೇಡಿ ಎಂದು ಮನವಿ ಮಾಡಿದರು. ಆದರೆ ಇದಕ್ಕೊಪ್ಪದ ಕೋರ್ಟ್‌ ಅಮೀನ್‌, ಪೊಲೀಸ್‌ ಭದ್ರತೆಯಲ್ಲಿ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿದರು. ಈ ವೇಳೆ ವಿಜಯನಗರ ಪೊಲೀಸ್‌ ಠಾಣೆ ಇನ್ಸಪೆಕ್ಟರ್‌ ಡಿ.ಜಿ.ಕುಮಾರ್‌ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next