ಶಿಗ್ಗಾವಿ: ಪ್ರತಿಪಕ್ಷ ಕಾಂಗ್ರೆಸ್ ಮೊದಲು ಅಧಿಕಾರ, ಜಾತಿ, ಕುಟುಂಬ ಎನ್ನುತ್ತದೆ. ಆದರೆ, ಭಾರತೀಯ ಜನತಾ ಪಕ್ಷ ದೇಶ ಮೊದಲು ಎನ್ನುತ್ತದೆ. ಇದೇ ಕಾರಣಕ್ಕಾಗಿ ದೇಶ ಹಾಗೂ ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅತ್ಯಂತ ದೊಡ್ಡ ಜನ ಬೆಂಬಲದೊಂದಿಗೆ ವಿಜಯಸಂಕಲ್ಪ ಯಾತ್ರೆ ಮೂಲಕ ನಾಲ್ಕು ವಿಭಾಗಗಳಾಗಿ ಸರ್ಕಾರದ ಸಾಧನೆಗಳನ್ನು ತಿಳಿಸುತ್ತಿದ್ದೇವೆ. ವಿರೋಧ ಪಕ್ಷಗಳ ಅಧಿಕಾರ ದಾಹ ಮನಸ್ಥಿತಿ ಏನೆಂದು ಜನರಿಗೆ ತಿಳಿಸುವ ಜತೆಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತರುತ್ತೇವೆ. ಮತ್ತೆ ಆಡಳಿತ ಚುಕ್ಕಾಣಿ ಹಿಡಿಯುತ್ತೇವೆ ಎಂದರು.
ಈಗಾಗಲೇ ವಿಜಯ ಸಂಕಲ್ಪ ಯಾತ್ರೆ ಅಂತಿಮ ಘಟ್ಟಕ್ಕೆ ಬಂದಿದ್ದು, ಮಾ.25ರಂದು ದಾವಣಗೆರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ದೇಶ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಜಾತಿ ತಾರತಮ್ಯ ಮಾಡಿಲ್ಲ. ರಾಜ್ಯದ ಎಲ್ಲ ವರ್ಗದ ಕಟ್ಟಕಡೆಯ ವ್ಯಕ್ತಿಗಳಿಗೂ ಯೋಜನೆಯ ಫಲ ಸಿಗುವಂತೆ ಮಾಡಿದ್ದೇವೆ. ಬಡವರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳು, ಶೌಚಾಲಯ, ವಿದ್ಯುತ್ ಸಂಪರ್ಕ, ಮನೆ ನಿರ್ಮಿಸಲು ಸಹಾಯ ನೀಡಿದ್ದೇವೆ. ರೈತರ ಮಕ್ಕಳಿಗೆ ವಿದ್ಯಾನಿಧಿ , ರೈತರಿಗೆ ಸಂಜೀವಿನಿ ಯೋಜನೆ, ಕುಡಿಯುವ ನೀರು, ಕೈಗೆ ಕೆಲಸ ನೀಡಿದ್ದೇವೆ. ಅಲ್ಲದೇ, ಸ್ವತ್ಛ ಆಡಳಿತ ನಡೆಸಿದ್ದೇವೆ ಎಂದರು.
ಕಳೆದ ಎಪ್ಪತ್ತು ವರ್ಷಗಳಲ್ಲಿ ಕಾಂಗ್ರೆಸ್ ಉತ್ತಮ ಆಡಳಿತ ನಡೆಸುವ ಗೋಜಿಗೆ ಹೋಗಲಿಲ್ಲ. ಬದಲಾಗಿ ಕೆಲ ವರ್ಗಗಳನ್ನು ಕತ್ತಲೆಯಲ್ಲಿಟ್ಟು ಕೇವಲ ಮತಬ್ಯಾಂಕ್ ಆಗಿ ಬಳಕೆ ಮಾಡಿಕೊಂಡಿದೆ. ಕಾಂಗ್ರೆಸ್ ನಾಯಕರಿಗೆ ದೇಶ ಮೊದಲು ಎನ್ನುವ ತತ್ವದಲ್ಲಿ ನಂಬಿಕೆಯಿಲ್ಲ. ಅವರಿಗೆ ಕೇವಲ ಅ ಧಿಕಾರ ಮತ್ತು ಕುಟುಂಬ ಎನ್ನುವ ನಂಬಿಕೆಯಿದೆ ಎಂದರು.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಚಿವ ಸಿ.ಸಿ. ಪಾಟೀಲ, ಮಾಜಿ ಶಾಸಕ ಶಿವರಾಜ ಸಜ್ಜನ, ಸಿದ್ದರಾಜ ಕಲಕೋಟಿ, ಅರುಣ ಶಹಾಪುರ, ವಿವೇಕಾನಂದ ಗಡ್ಡಿ, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ, ಶಶಿಧರ ಹೊಸಳ್ಳಿ, ಪ್ರಕಾಶ ಗೀಳಂಜಿ, ಶೋಭಾ ನಿಸ್ಸೀಮಗೌಡ್ರ, ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ, ಸದಸ್ಯೆ ಸಂಗೀತಾ ವಾಲ್ಮೀಕಿ ಮತ್ತು ಬಿಜೆಪಿ ಮುಖಂಡರು ಇದ್ದರು.