Advertisement

ಮುಲಾಜಿಲ್ಲದೆ ಅಕ್ರಮ ಕಟ್ಟಡಗಳ ತೆರವುಗೊಳಿಸಿ

11:59 PM Sep 12, 2022 | Team Udayavani |

ಮಳೆಯಿಂದ ಪ್ರವಾಹ ಉಂಟಾಗಿ ಐಟಿ ಸಿಟಿ ಬೆಂಗಳೂರು ಮುಳುಗಿತು ಎಂಬಂತೆ ಬಿಂಬಿತವಾಗಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದ ಅನಂತರ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರ ರಾಜಕಾಲುವೆ ಒತ್ತುವರಿದಾರರ ವಿರುದ್ಧ ಕಠಿನ ಕ್ರಮಕ್ಕೆ ಮುಂದಾಗಿರುವುದು ಸ್ವಾಗತಾರ್ಹ.

Advertisement

ಆದರೆ ಇದು ಆರಂಭ ಶೂರತ್ವಕ್ಕೆ ಮಾತ್ರ ಸೀಮಿತವಾಗಬಾರದು. ಯಾರೇ ಒತ್ತುವರಿ ಮಾಡಿದ್ದರೂ ಎಷ್ಟೇ ಪ್ರಭಾವಿಗಳಿದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಇದೊಂದು ರೀತಿಯ ಶಾಶ್ವತ ಪರಿಹಾರದಂತಾಗ ಬೇಕು. ಇಲ್ಲದಿದ್ದರೆ ಸರಕಾರ ಪ್ರತೀ ಬಾರಿ ಮಳೆ ಬಂದು ಪ್ರವಾಹ ಉಂಟಾದಾಗ ಭರವಸೆ ನೀಡುವುದು ಮತ್ತೆ ಮರೆಯುವುದು; ಹೆಸರಿಗೆ ಎಂಬಂತೆ ಒಂದೆರಡು ಕಡೆ ಜೆಸಿಬಿ ನುಗ್ಗಿಸಿ ಕಾರ್ಯಾಚರಣೆ ಮಾಡಿ ಸುಮ್ಮನಾಗುವುದು; ಮತ್ತೊಮ್ಮೆ ಮಳೆ ಬಂದಾಗ ಘರ್ಜಿಸುವುದು ಮಾಡಿದರೆ ಜನತೆಗೆ ನಂಬಿಕೆ ಬಾರದು.

ಬೆಂಗಳೂರಿನ ಒತ್ತುವರಿ ತೆರವು ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಖಡಕ್‌ ನುಡಿಗಳಲ್ಲಿ ಮಾತನಾಡಿ ದ್ದಾರೆ. ಅಷ್ಟೇ ಕಠಿನವಾಗಿ ಕ್ರಮ ಕೈಗೊಂಡರೆ ಸಮಸ್ಯೆ ಬಗೆಹರಿಯಲಿದೆ.

ಮುಖ್ಯಮಂತ್ರಿಯವರು ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಬಿಬಿಎಂಪಿ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಸ್ಥಳಗಳಲ್ಲಿ ಒತ್ತುವರಿ ಕಾರ್ಯಾಚರಣೆ ಆರಂಭವಾಗಿರುವುದು ಒಳ್ಳೆಯ ಲಕ್ಷಣ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಪ್ರದೇಶಗಳನ್ನು ಗುರುತಿಸಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪ್ರಾರಂಭಿಸಿ ಮಹದೇವಪುರ ವಲಯ ವ್ಯಾಪ್ತಿಯಲ್ಲಿ 15 ಒತ್ತುವರಿಗಳನ್ನು ತೆರವುಗೊಳಿಸಿರುವುದು ಶ್ಲಾಘನೀಯ.

Advertisement

ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮಳೆ ಬಂದಾಗ ಪ್ರವಾಹ ಉಂಟಾಗಿದ್ದ ಪ್ರದೇಶಗಳಲ್ಲಿ ಒತ್ತುವರಿ ತೆರವು ಮಾಡಿರುವುದು ಗಮನಾರ್ಹ. ಭೂಮಾಪಕರು ಗುರುತಿಸಿದಂತಹ ಒತ್ತುವರಿ ಪ್ರದೇಶವನ್ನು ಪಾಲಿಕೆಯ ಅಧಿಕಾರಿಗಳು, ಮಾರ್ಷಲ್‌ಗ‌ಳ ತಂಡವು ಪೊಲೀಸ್‌ ಸಿಬಂದಿ ಸಹಯೋಗದೊಂದಿಗೆ ಜೆಸಿಬಿ ಯಂತ್ರಗಳ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.

ಒತ್ತುವರಿ ತೆರವುಕಾರ್ಯಚರಣೆ ನಡೆಸಿರುವ ಎಲ್ಲ ಕಡೆಗಳಲ್ಲಿಯೂ ಮತ್ತೂಮ್ಮೆ ಒತ್ತುವರಿ ಮಾಡದಂತೆ ಹಾಗೂ ಮಳೆ ನೀರುಗಾಲುವೆಯ ಮೇಲೆ ಕಾಂಪೌಂಡ್‌ ಗೋಡೆ ನಿರ್ಮಿಸದಂತೆ ಎಚ್ಚರಿಕೆ ನೀಡಿರುವುದು ಸರಿಯಾಗಿದೆ.
ಈ ಕಾರ್ಯಾಚರಣೆ ಇಲ್ಲಿಗೆ ನಿಲ್ಲಬಾರದು. ನಿರಂತರವಾಗಿ ಮುಂದುವರಿಯಬೇಕು. ಕೇವಲ ಮಹದೇವಪುರ ವಲಯವಷ್ಟೇ ಅಲ್ಲದೆ ಯಲಹಂಕ, ಬೊಮ್ಮನಹಳ್ಳಿ, ದಾಸರಹಳ್ಳಿ, ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ -ಹೀಗೆ ಎಲ್ಲ ವಲಯಗಳಲ್ಲಿಯೂ ಒತ್ತುವರಿ ಗುರುತಿಸಿ ತೆರವು ಮಾಡಬೇಕು. ಇಲ್ಲದಿದ್ದರೆ ಇಂದು ಮಹದೇವಪುರ ವಲಯದಲ್ಲಿ ಆದದ್ದು ಮುಂದೊಂದು ದಿನ ಮತ್ತೊಂದು ವಲಯದಲ್ಲಿ ಆಗಬಹುದು. ಹೀಗಾಗಿ ಇದೊಂದು ಸಂಕಲ್ಪದಂತೆ ಸರಕಾರ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಸರಕಾರಕ್ಕೂ ಒಳ್ಳೆಯ ಹೆಸರು ಬರಲು ಸಾಧ್ಯ.

ಒತ್ತುವರಿ ವಿಚಾರದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡು ಇರದೆ ಯಾರೇ ಆಗಲಿ, ಯಾವುದೇ ಪಕ್ಷದವರು ಇರಲಿ, ಪ್ರತಿಷ್ಠಿತ ಕಂಪೆನಿ ಇರಲಿ- ಒತ್ತುವರಿ ಕಂಡುಬಂದರೆ ತೆರವು ಮಾಡಬೇಕು. ವಿಪಕ್ಷಗಳು ಕೂಡ ಸರಕಾರದ ಈ ಕಾರ್ಯಕ್ಕೆ ಬೆಂಬಲ ನೀಡಬೇಕು. ಆರೋಪಕ್ಕೆ ಸೀಮಿತವಾಗದೆ ಸರಕಾರದ ಜತೆ ನಿಲ್ಲಬೇಕು. ಆಗ ಮಾತ್ರ ಸ್ಪಷ್ಟ ಸಂದೇಶ ರವಾನೆ ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next