Advertisement

ಗಜೇಂದ್ರಗಡಕ್ಕೆ ಸ್ವಚ್ಛ ನಗರ ಪ್ರಶಸ್ತಿ ಗರಿ

11:41 AM Oct 06, 2022 | Team Udayavani |

ಗಜೇಂದ್ರಗಡ: ಕೇಂದ್ರ ಸರ್ಕಾರ ನಡೆಸಿದ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ 2022ರ ಫಲಿತಾಂಶ ಪ್ರಕಟಗೊಂಡಿದ್ದು, ಕೋಟೆ ನಾಡು ಗಜೇಂದ್ರಗಡ ಪುರಸಭೆ ರಾಜ್ಯಕ್ಕೆ 16ನೇ ರ್‍ಯಾಂಕ್‌ ಪಡೆಯುವ ಮೂಲಕ ಸ್ವತ್ಛ ನಗರ ಖ್ಯಾತಿಗೆ ಪಾತ್ರವಾಗಿದೆ.

Advertisement

ಜಿಲ್ಲೆಯಲ್ಲಿಯೇ ಎರಡನೇ ದೊಡ್ಡ ಪಟ್ಟಣದ ಜೊತೆಗೆ ವಾಣಿಜ್ಯ ನಗರಿ ಖ್ಯಾತಿಯ ಗಜೇಂದ್ರಗಡ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪಟ್ಟಣವಾಗಿದೆ. ಜನದಟ್ಟಣೆ, ವಾಹನ ಸಂಚಾರದ ಮಧ್ಯೆಯೂ ಪುರಸಭೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸ್ವಚ್ಛ ಹಾಗೂ ಸುಂದರ ಪಟ್ಟಣವನ್ನಾಗಿ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಡೆಸಿದ ಸ್ವತ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ದೇಶಕ್ಕೆ 89 ನೇ ರ್‍ಯಾಂಕ್‌, ರಾಜ್ಯಕ್ಕೆ 16 ನೇ ರ್‍ಯಾಂಕ್‌ ಗಳಿಸಿ ಉತ್ತಮ ಸಾಧನೆಗೈದಿದೆ.

ಪೌರಕಾರ್ಮಿಕರ ಶ್ರಮ ಅಮೋಘ: ಐತಿಹಾಸಿಕ ಹಿನ್ನೆಲೆ ಹೊಂದಿದ್ದಲ್ಲದೇ, ಪ್ರವಾಸಿಗರು ಮತ್ತು ಸಿನಿಮಾ ಚಿತ್ರೀಕರಣದ ಕೇಂದ್ರ ಬಿಂದುವಾಗಿರುವ ಗಜೇಂದ್ರಗಡ ಪಟ್ಟಣವನ್ನು ಸ್ವತ್ಛವಾಗಿಡುವಲ್ಲಿ ಪುರಸಭೆ ಪೌರಕಾರ್ಮಿಕರ ಶ್ರಮ ಅಮೋಘವಾಗಿದೆ. 42 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಪಟ್ಟಣ 23 ವಾರ್ಡ್‌ಗಳನ್ನು ಒಳಗೊಂಡಿದೆ. ಆದರೆ, ಪುರಸಭೆಯಲ್ಲಿ ಕೇವಲ 38 ಪೌರ ಕಾರ್ಮಿಕರು ಇದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಪೌರಕಾರ್ಮಿಕರ ಸಂಖ್ಯೆ ಕಡಿಮೆ ಇದೆ. ಈ ಮಧ್ಯೆಯೂ ಗಜೇಂದ್ರಗಡ ಪುರಸಭೆ ಪಟ್ಟಣದ ಸ್ವತ್ಛತೆ ಕಾಯ್ದುಕೊಳ್ಳುವಲ್ಲಿ ಕೈಗೊಂಡಿರುವ ಯೋಜನೆಗಳಿಂದಾಗಿ ಈ ಸಾಧನೆ ಮಾಡಲು ಸಹಕಾರಿಯಾಗಿದೆ.

ಪ್ರತಿ ವರ್ಷ ಕೇಂದ್ರ ಸರ್ಕಾರದ ಈ ಸಮೀಕ್ಷಾ ಫಲಿತಾಂಶದಲ್ಲಿ ಕಳೆದ ವರ್ಷ ಪುರಸಭೆ ದೇಶಕ್ಕೆ 128ನೇ ರ್‍ಯಾಂಕ್‌ ಪಡೆದಿತ್ತು. ರಾಜ್ಯದ ಪಟ್ಟಿಯಲ್ಲಿ ಕಡಿಮೆ ರ್‍ಯಾಂಕ್‌ ಸಹ ಪಡೆಯದೇ ಹಿನ್ನಡೆ ಅನುಭವಿಸಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಪುರಸಭೆ ಅಧಿಕಾರಿಗಳು ಪಟ್ಟಣದಲ್ಲಿ ಸ್ವಚ್ಛತೆಗಾಗಿ ಜನಜಾಗೃತಿ ಸಭೆ, ಅರಿವು ಮೂಡಿಸುವುದರ ಜೊತೆಗೆ ಮನೆ, ಮನೆಗೆ ತೆರಳಿ ಕಸ ಸಂಗ್ರಹಣೆ ಮಾಡಿ, ಇದೀಗ ಸ್ವಚ್ಛ ನಗರ ಖ್ಯಾತಿಗೆ ಒಳಗಾಗಿದ್ದಾರೆ.

ಗಜೇಂದ್ರಗಡಕ್ಕೆ ಮತ್ತೂಂದು ಮುಕುಟ: ಗಜೇಂದ್ರಗಡಕ್ಕೆ ಮತ್ತೂಂದು ಮುಕುಟಪಾಯದಂತೆ ಸ್ವಚ್ಛತಾ ನಗರ ಖ್ಯಾತಿಗೆ ಕೋಟೆ ನಾಡು ಒಳಗಾಗಿದೆ. ಕೇಂದ್ರ ಸರ್ಕಾರ ಪ್ರಕಟಿಸಿರುವ ಸಮೀಕ್ಷಾ ಫಲಿತಾಂಶದಿಂದಾಗಿ ರಾಜ್ಯಕ್ಕೆ 19ನೇ ರ್‍ಯಾಂಕ್‌ ಗಳಿಸುವ ಮೂಲಕ ಪುರಸಭೆ ಸ್ವಚ್ಛತೆಯಲ್ಲಿ ಹಿರಿಮೆ ಸಾಧಿಸಿದೆ. ಇದಕ್ಕೆ ಪುರಸಭೆ ಮುಖ್ಯಾಧಿಕಾರಿಗಳು, ಆರೋಗ್ಯ ಅಧಿಕಾರಿ ಮತ್ತು ಪೌರಕಾರ್ಮಿಕರ ಶ್ರಮವೇ ಪ್ರಮುಖ ಕಾರಣ.

Advertisement

ಏನಿದು ಸ್ವಚ್ಛ ಸರ್ವೇಕ್ಷಣೆ?: ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರತಿ ವರ್ಷ ಸ್ವಚ್ಛ ಸರ್ವೇಕ್ಷಣೆ ನಡೆಸುತ್ತದೆ. ಸ್ವಚ್ಛ ಭಾರತ ಅಭಿಯಾನದ ಭಾಗವಾಗಿ ಇದನ್ನು ಆರಂಭಿಸಲಾಗಿದ್ದು, ಪ್ರತಿ ವರ್ಷ ದೇಶಾದ್ಯಂತ ಸ್ವಚ್ಛತಾ ಸಮೀಕ್ಷೆ ನಡೆಸಲಾಗುತ್ತದೆ. ಸಮೀಕ್ಷೆ ಆಧರಿಸಿ ದೇಶದ ವಿವಿಧ ರಾಜ್ಯಗಳಿಗೆ ಈ ಶ್ರೇಯಾಂಕದ ಆಧಾರದ ಮೇಲೆ ಶ್ರೇಣಿ ನೀಡಲಾಗುತ್ತದೆ. ನಗರಗಳ ಆರೋಗ್ಯ ಮತ್ತು ತ್ಯಾಜ್ಯ ನೀರಿನ ವಿಲೇವಾರಿ ಮುಂತಾದ ಇತರ ಪ್ರಮುಖ ಮಾನದಂಡಗಳ ಆಧಾರದ ಮೇಲೆ ಪಾಯಿಂಟ್ಸ್‌ ನೀಡಲಾಗುತ್ತದೆ. ಇದು ಈ ಬಾರಿಯ (2022) ಸ್ವಚ್ಛ ಸರ್ವೇಕ್ಷಣೆಯ 6ನೇ ಆವೃತ್ತಿಯಾಗಿದೆ. ಹೆಚ್ಚು ಅಂಕಕ್ಕೆ ಬೇಕಾದ ಅಂಶಗಳು: 1) ರಸ್ತೆ ಸ್ವಚ್ಛತೆ 2) ಬೀದಿಗಳ ಸ್ವಚ್ಛತೆ, 3) ಸಾರ್ವಜನಿಕರ ಅಭಿಪ್ರಾಯ 4) ಘನತ್ಯಾಜ್ಯ ವಿಲೇವಾರಿ, 5) ಹಸಿ ಮತ್ತು ಒಣ ಕಸ ವಿಂಗಡಿಸಲು ಡಸ್ಟ್‌ಬಿನ್‌ ವಿತರಣೆ, 6) ವಾಹನ ಮೂಲಕ ಕಸ ಸಂಗ್ರಗಣೆ, 6) ಎರೆಹುಳು ಗೊಬ್ಬರ, 7) ಪೌರಕಾರ್ಮಿಕರಿಗೆ ಬೆಳಿಗ್ಗೆ ತಿಂಡಿ ವಿತರಣೆ ಹೀಗೆ ಅನೇಕ ನಿಯಮಗಳನ್ನು ರೂಪಿಸಲಾಗಿದೆ.

ಜಿಲ್ಲೆಗೆ ಪ್ರಥಮ: ಗದಗ ಜಿಲ್ಲೆಯಲ್ಲಿ 1 ನಗರಸಭೆ, 5 ಪುರಸಭೆ, 3 ಪಪಂ ಕಾರ್ಯಾಲಯಗಳಿವೆ. ಆದರೆ, ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಗಜೇಂದ್ರಗಡ ಪುರಸಭೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲೆಯಲ್ಲಿಯೇ ಉತ್ತಮ ಸಾಧನೆಗೈದಿದೆ. ದೇಶದಲ್ಲಿ 25 ಸಾವಿರ ಜನಸಂಖ್ಯೆ ಮೇಲ್ಪಟು 50 ಸಾವಿರ ಒಳಗಿನ ಜನಸಂಖ್ಯೆ ಹೊಂದಿರುವ ಪುರಸಭೆಗಳಲ್ಲಿ ಗಜೇಂದ್ರಗಡ 89 ಸ್ಥಾನ ಪಡೆದುಕೊಂಡಿದೆ. ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಗಜೇಂದ್ರಗಡ ಪುರಸಭೆ ರಾಜ್ಯಕ್ಕೆ 16ನೇ ರ್‍ಯಾಂಕ್‌ ಪಡೆದಿದೆ. ಪೌರಕಾರ್ಮಿಕರ ನಿರಂತರ ಶ್ರಮ, ಸಾರ್ವಜನಿಕರ ಸಹಕಾರ ಮತ್ತು ಸಹಭಾಗಿತ್ವವೇ ಈ ಸಾಧನೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲೂ ಸ್ವಚ್ಛತೆ ಕಾಪಾಡುವ ಮೂಲಕ ಸುಂದರ ಪಟ್ಟಣವನ್ನಾಗಿಸಲು ನಮ್ಮ ಜೊತೆ ಸಾರ್ವಜನಿಕರು ಕೈ ಜೋಡಿಸಬೇಕಿದೆ.  –ಮಹಾಂತೇಶ ಬೀಳಗಿ, ಪುರಸಭೆ ಮುಖ್ಯಾಧಿಕಾರಿ

ಜಿಲ್ಲೆಯ ದೊಡ್ಡ ಪಟ್ಟಣ ಗಜೇಂದ್ರಗಡಕ್ಕೆ ಸ್ವಚ್ಛತೆಯ ಗರಿ ದೊರೆತಿರುವುದು ನಮ್ಮಗಳ ಕರ್ತವ್ಯಕ್ಕಿಂತ, ಪೌರಕಾರ್ಮಿಕರ ಶ್ರಮದ ಫಲವಾಗಿದೆ. ಇನ್ನಷ್ಟು ಸ್ವಚ್ಛವಾಗಿಡಲು ಸಾರ್ವಜನಿಕರ ಸಹಭಾಗಿತ್ವ ಬೇಕಿದೆ.  –ರಾಘವೇಂದ್ರ ಮಂತಾ, ಪುರಸಭೆ ಆರೋಗ್ಯ ಅಧಿಕಾರಿ

 

Advertisement

Udayavani is now on Telegram. Click here to join our channel and stay updated with the latest news.

Next