Advertisement

ಅಂಗನವಾಡಿ ಕೇಂದ್ರದ ಸುತ್ತ ಸ್ವಚ್ಛತೆಗೆ ಆಗ್ರಹ

04:45 PM Jun 10, 2022 | Team Udayavani |

ದೋಟಿಹಾಳ: ಸಮೀಪದ ಶಿರಗುಂಪಿ ಗ್ರಾಪಂ ವ್ಯಾಪ್ತಿಯ ಬಳೂಟಗಿ ಗ್ರಾಮದ ಎಸ್‌.ಸಿ. ಕಾಲೋನಿ ಹತ್ತಿರದ ಅಂಗನವಾಡಿ ಕೇಂದ್ರದ ಹಿಂದೆ ಗ್ರಾಮದ ಕೊಳಚೆ ನೀರು ಸಂಗ್ರಹಗೊಂಡು ದೊಡ್ಡ ಚರಂಡಿಯಾಗಿ ಮಾರ್ಪಟ್ಟಿದೆ. ಇದರಿಂದ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಮತ್ತು ಕೇಂದ್ರಕ್ಕೆ ಬರುವ ಗರ್ಭಿಣಿ ಮತ್ತು ತಾಯಂದಿರಿಗೆ ಈ ದುರ್ವಾಸನೆ ಸಾಕಾಗಿ ಹೋಗಿದೆ.

Advertisement

ಇಷ್ಟೇ ಅಲ್ಲದೇ ಈ ಕಾಲೋನಿಗೆ ಹೊಗುವ ಮುಖ್ಯ ರಸ್ತೆ ಕೆಸರು ತುಂಬಿಕೊಂಡು ಚರಂಡಿಗಳಾಗಿ ಮಾರ್ಪಟ್ಟಿವೆ. ರಸ್ತೆಯ ತುಂಬೆಲ್ಲಾ ಕೊಳಚೆ ನೀರು ತುಂಬಿರುವುದರಿಂದ ರಸ್ತೆಯಲ್ಲಿ ಓಡಾಡುವವರ ಪಾಡು ಹೇಳತೀರದಾಗಿದೆ. ಕಾಲೋನಿಯ ವೃದ್ಧರು, ಮಕ್ಕಳು ಈ ರಸ್ತೆಯಲ್ಲಿ ಒಡಾಡಲು ಕಷ್ಟವಾಗುತ್ತಿದೆ.

ಬಳೂಟಗಿ ಗ್ರಾಮದ ಸಾರ್ವಜನಿಕರು ಬಳಸಿದ ಕೊಳಚೆ ನೀರು ಬಂದು ಎಸ್‌.ಸಿ. ಕಾಲೋನಿ ಹತ್ತಿರ ಇರುವ ಅಂಗನವಾಡಿ ಕೇಂದ್ರದ ಹಿಂದುಗಡೆ ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗಿ ಕೆಸರು ಗದ್ದೆಯಂತಾಗಿದೆ. ಇಲ್ಲಿಯ ನಿವಾಸಿಗಳಿಗೆ ಮತ್ತು ಅಂಗನವಾಡಿ ಕೇಂದ್ರದ ಮಕ್ಕಳ ಪಾಡು ಹೇಳ ತೀರದಾಗಿದೆ. ಕೇಂದ್ರದ ಮಕ್ಕಳ ಆಟವಾಡಲು ಈ ಚರಂಡಿ ಹತ್ತಿರ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ.

ಅಂಗನವಾಡಿ ಕೇಂದ್ರದ ಸುತ್ತಲೂ ಗಬ್ಬು ನಾರುತ್ತಿದ್ದು, ಸಮೀಪದ ಮನೆಗಳವರೆಗೆ ಗಬ್ಬು ವಾಸನೆ ಪಸರಿಸುತ್ತಿರುವುದರಿಂದ ಜನರು ವಾಸನೆ ಸಹಿಸದೇ ನರಕಯಾತನೆ ಅನುಭವಿಸುತ್ತಿದ್ದಾರೆ. ಅಲ್ಲದೇ ಚರಂಡಿ ನೀರು ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಈ ಬಗ್ಗೆ ಹಲವಾರು ಬಾರಿ ಶಿರಗುಂಪಿ ಗ್ರಾಮ ಪಂಚಾಯತ್‌ ಅಧಿಕಾರಿಗಳಿಗೆ ಮತ್ತು ಗ್ರಾಪಂ ಸದಸ್ಯರಿಗೆ ಗ್ರಾಮದ ಮುಖ್ಯ ರಸ್ತೆಗಳ ಕೊಳಚೆ ನೀರು ನಿಂತು ರಸ್ತೆಗಳು ಚರಂಡಿಯಾಗಿರುವುದು ಮತ್ತು ಎಸ್‌ಸಿ ಕಾಲೋನಿಯಲ್ಲಿರುವ ಅಂಗನವಾಡಿ ಕೇಂದ್ರದ ಹತ್ತಿರ ಕೊಳಚೆ ನೀರು ಸಂಗ್ರಹದಿಂದ ದೊಡ್ಡ ಚರಂಡಿಯಾಗಿ ಮಾರ್ಪಟ್ಟಿರುವುದು ಗಮನಕ್ಕೆ ತಂದರೂ ಈ ಅವ್ಯವಸ್ಥೆಯನ್ನು ಸರಿಪಡಿಸುವಲ್ಲಿ ಗ್ರಾಪಂನವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಇಲ್ಲಿನ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

Advertisement

ಕೇಂದ್ರದಲ್ಲಿ ಒಂದೆರಡು ಗಂಟೆಗಳ ಕಾಲ ಕೂಡಲು ಆಗುತ್ತಿಲ್ಲ. ಹಿಂದುಗಡೆ ಚರಂಡಿಯಿಂದ ದುರ್ವಾಸನೆ ಬರುತ್ತದೆ. ಇಂತಹ ಸ್ಥಿತಿಯಲ್ಲಿ ಕೇಂದ್ರದ ಮಕ್ಕಳಿಗೆ ಹಾಗೂ ತಾಯಂದಿರಿಗೆ ನಿತ್ಯ ಊಟ ನೀಡಬೇಕು. ಈ ಬಗ್ಗೆ ಬಾಲವಿಕಾಸ ಸಮಿತಿಯಿಂದ ಕೇಂದ್ರದ ಸುತ್ತಲೂ ಸ್ವತ್ಛತೆ ಮಾಡಲು ಮತ್ತು ಚರಂಡಿ ನೀರು ಮುಂದೇ ಹೋಗುವ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರ ಸಲ್ಲಿಸಿದರು ಗ್ರಾಪಂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರು ತಿಳಿಸಿದ್ದಾರೆ.

ಇನ್ನಾದರೂ ಗ್ರಾಪಂ ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಿ ಅಂಗನವಾಡಿ ಕೇಂದ್ರದ ಸುತ್ತಲೂ ಮತ್ತು ಗ್ರಾಮದ ಮುಖ್ಯ ರಸ್ತೆಯನ್ನು ಸ್ವತ್ಛತೆ ಮಾಡಬೇಕು ಎಂಬುದು ಗ್ರಾಮಸ್ಥರ ಆಗ್ರಹಿಸಿದ್ದಾರೆ. ಬಳೂಟಗಿ ಗ್ರಾಮದ ಸಮಸ್ಯೆಯ ಬಗ್ಗೆ ವಿಚಾರಿಸಲು ಶಿರಗುಂಪಿ ಗ್ರಾಪಂ ಪಿಡಿಒ ಅವರಿಗೆ ಕರೆ ಮಾಡಿದರು ಅವರು ಕರೆ ಸ್ವೀಕರಿಸುತ್ತಿಲ್ಲ.

ಬಳೂಟಗಿ ಗ್ರಾಮದ ಮುಖ್ಯ ರಸ್ತೆಗಳ ಸ್ವ ಸ್ವಚ್ಛತೆ ಮತ್ತು ಅಂಗನವಾಡಿ ಕೇಂದ್ರದ ಹಿಂದುಗಡೆ ನಿಂತಿರುವು ಕೊಳಚೆ ನೀರನ್ನು ಸ್ವಚ್ಛತೆ ಮಾಡಲು ಸೂಕ್ತ ಕ್ರಮಕೈಗೊಳ್ಳಲು ಅಲ್ಲಿಯ ಗ್ರಾಪಂ ಪಿಡಿಒ ಅವರಿಗೆ ಕೂಡಲೇ ತಿಳಿಸುತ್ತೇನೆ.  –ಶಿವಪ್ಪ ಸುಬೇದಾರ್‌, ಕುಷ್ಟಗಿ ತಾಪಂ ಇಒ

 

Advertisement

Udayavani is now on Telegram. Click here to join our channel and stay updated with the latest news.

Next