Advertisement

ಶಹಾಬಾದದಲ್ಲಿ ಸ್ಮಶಾನ ಸ್ವಚ್ಛತೆ‌

12:58 PM Jan 18, 2022 | Team Udayavani |

ಶಹಾಬಾದ: ಸ್ಮಶಾನದಲ್ಲಿ ತುಂಬಿಕೊಂಡಿರುವ ಹೊಲಸು, ಎಲ್ಲೆಂದರಲ್ಲಿ ಬೆಳೆದಿರುವ ಗಿಡ-ಗಂಟಿ ಸ್ವಚ್ಛಗೊಳಿಸುವ ಮೂಲಕ ಇಲ್ಲಿನ ಸ್ಥಳೀಯ ಮುಖಂಡರು ಇನ್ನೊಬ್ಬರಿಗೆ ಮಾದರಿಯಾಗಿದ್ದಾರೆ.

Advertisement

ಕಳೆದ ಮೂರು ವರ್ಷಗಳಿಂದ ಮಳೆ ಹೆಚ್ಚಾದ ಪರಿಣಾಮ ಸ್ಮಶಾನದಲ್ಲಿ ಗಿಡ-ಗಂಟಿಗಳು ಬೆಳೆದು ಶವಸಂಸ್ಕಾರ ಮಾಡಲು ತೊಂದರೆಯಾಗುತ್ತಿತ್ತು. ಅಲ್ಲದೇ ಸ್ಮಶಾನದಲ್ಲಿ ಸ್ವತ್ಛತೆಯಿಲ್ಲದ ಕಾರಣ ಬಹಳ ಕೆಟ್ಟ ವಾತಾವರಣ ಮೂಡಿತ್ತು. ಅದನ್ನು ಮನಗಂಡು ಸ್ಥಳೀಯ ಎಲ್ಲ ಸಮಾಜದ ಮುಖಂಡರು ಒಟ್ಟಾಗಿ ಶ್ರಮದಾನ ಮಾಡುವ ಮೂಲಕ ನಗರದ ಸಾರ್ವಜನಿಕ ಸ್ಮಶಾನ ಸ್ವಚ್ಛಗೊಳಿಸಿದ್ದಾರೆ. ಇದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ನಗರದ ಸಾರ್ವಜನಿಕ ಸ್ಮಶಾನ ಭೂಮಿ ಹಳ್ಳಕ್ಕೆ ಹತ್ತಿಕೊಂಡಿರುವುದರಿಂದ ಮಳೆ ಬಂದಾಗಲೊಮ್ಮೆ ನೀರು ಸ್ಮಶಾನದೊಳಗೆ ಹರಿದು ನೀರಿನಲ್ಲಿರುವ ಎಲ್ಲ ಕಸ-ಕಡ್ಡಿ, ಬಟ್ಟೆ, ಪ್ಲಾಸ್ಟಿಕ್‌ ತ್ಯಾಜ್ಯಗಳು ಹರಡುತ್ತದೆ. ಅಲ್ಲದೇ ಗಿಡಗಂಟಿಗಳು ಎಲ್ಲೆಂದರಲ್ಲಿ ಬೆಳೆದು ಸ್ಮಶಾನದೊಳಗೆ ಪ್ರವೇಶಿಸಲು ಭಯ ಪಡಬೇಕಾದ ಪರಿಸ್ಥಿತಿ ಇಲ್ಲಿ ಕಾಣುತ್ತಿತ್ತು. ಹಂದಿಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿತ್ತು. ಆದ್ದರಿಂದ ಇದನ್ನು ಸ್ವಚ್ಛಗೊಳಿಸಲು ನಗರಸಭೆಯ ಅಧಿಕಾರಿಗಳಿಗೆ ತಿಳಿಸಿದರೂ ಕ್ಯಾರೇ ಎನ್ನದ ಕಾರಣ ನಾವೇ ಖುದ್ದಾಗಿ ಮಾಡಿದರೇ ಹೇಗೆ ಎಂಬ ಪರಿಕಲ್ಪನೆ ನಮ್ಮಲ್ಲಿ ಮೂಡಿ, ಎಲ್ಲ ಸ್ಥಳೀಯ ಸಮಾನ ಮನಸ್ಕರು ಸೇರಿಕೊಂಡು ಸ್ಮಶಾನ ಸ್ವತ್ಛಗೊಳಿಸಲು ಮುಂದಾದೆವು ಎಂದು ಸಾರ್ವಜನಿಕ ರುದ್ರಭೂಮಿ ಅಧ್ಯಕ್ಷ ಕಾಶಿನಾಥ ಜೋಗಿ ತಿಳಿಸಿದರು.

ಸಭೆ ನಡೆಸಿ, ಎಲ್ಲರೂ ಸೇರಿ ಬೆಳಿಗ್ಗೆ ವ್ಯಾಯಾಮ, ವಾಯು ವಿಹಾರ ಬದಲು ಶ್ರಮದಾನ ಮಾಡುವ ಮೂಲಕ ಇಡೀ ಸಾರ್ವಜನಿಕ ಸ್ಮಶಾನವನ್ನು ಸ್ವಚ್ಛಗೊಳಿಸಿ, ನೋಡುಗರ ಕಣ್ಮನ ಸೆಳೆಯುವಂತೆ ಮಾಡಿದ್ದಾರೆ. ಇನ್ನುಮುಂದೆ ಇದೇ ರೀತಿ ಶ್ರಮದಾನ ಮಾಡುವ ಮೂಲಕ ಸ್ಮಶಾನವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅವರ ಉದ್ದೇಶವಾಗಿದೆ. ಗಿಡ-ಮರಗಳನ್ನು ಬೆಳೆಸುವ ಉದ್ದೇಶವೂ ಹೊಂದಿದ್ದು, ಅದಕ್ಕಾಗಿಯೂ ಯೋಜನೆ ರೂಪಿಸುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಸುನೀಲ ಭಗತ್‌, ಶಿವಾಜಿ ಪವಾರ, ಶಿವಾಜಿ ಪವಾರ, ಅನಿಲ ಹಿಬಾರೆ, ನನ್ನಾವರೆ ನರಸಿಂಗ, ಮಹಾವೀರ ಸುಗಂ, ನರಸಿಂಗ ಕೊಂಗಳೆ, ದತ್ತಾ ಫಂಡ್‌, ಶಶಿಕಾಂತ ಸಿಂಧೆ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next