ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ, ಶೌಚಗುಂಡಿ ಹಾಗೂ ಒಳಚರಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುವ ಸ್ವಚ್ಛತಾ ಸಿಬ್ಬಂದಿಗಳಿಗೆ ಅಗತ್ಯ ರಕ್ಷಣಾ ಸಾಮಗ್ರಿಗಳು ಮತ್ತು ಸುರ ಕ್ಷತಾ ಸಲಕರಣೆಗಳನ್ನು ಒದಗಿಸಲು ವಿಫಲರಾದವರ ವಿರುದ್ಧ “ದಂಡಾಸ್ತ್ರ’ ಪ್ರಯೋಗಿಸಲು ಸರ್ಕಾರ ಮುಂದಾಗಿದೆ.
ಸ್ವಚ್ಛತಾ ಸಿಬ್ಬಂದಿಗೆ ಅಗತ್ಯ ರಕ್ಷಣಾ ಸಾಮಗ್ರಿ ಮತ್ತು ಸುರಕ್ಷತಾ ಸಲಕರಣೆಗಳನ್ನು ಒದಗಿಸಲು ವಿಫಲರಾಗುವ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಏಜೆನ್ಸಿಗಳು ಇನ್ನೂ ಮುಂದೆ ದಂಡ ತೆರಬೇಕಾಗುತ್ತದೆ. 2018ರಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಾರಿಯಲ್ಲಿರುವ ದಂಡಾಸ್ತ್ರವನ್ನು ಇನ್ನು ಮುಂದೆ ಗ್ರಾಪಂ, ತಾಪಂ ಹಾಗೂ ಜಿಪಂಗಳಲ್ಲೂ ಜಾರಿಗೆ ತರಲಾಗುತ್ತಿದೆ.
ಜಿಪಂ, ತಾಪಂ ಹಾಗೂ ಗ್ರಾಪಂಗಳ ವ್ಯಾಪ್ತಿಯಲ್ಲಿ ಸ್ವಚ್ಛತಾ ಸಿಬ್ಬಂದಿಗಳಿಗೆ ಅಗತ್ಯ ರಕ್ಷಣಾ ಸಾಮಗ್ರಿ ಮತ್ತು ಸುರಕ್ಷತಾ ಸಲಕರಣೆಗಳಿಲ್ಲದೆ ಶೌಚಾಲಯ, ಶೌಚ ಗುಂಡಿ ಹಾಗೂ ಒಳಚರಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ನಿಯೋಜಿಸಿದ್ದು ಕಂಡು ಬಂದ ಪ್ರಕರಣಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಏಜೆನ್ಸಿಗಳಿಗೆ 50 ಸಾವಿರೂ ರೂ. ಹಾಗೂ ಸ್ವಚ್ಛತಾ ಕೆಲಸಗಾರರು, ಅಗತ್ಯ ಸುರಕ್ಷತಾ ಪರಿಕರಗಳಾದ ಹ್ಯಾಂಡ್ ಗ್ಲೌಸ್, ಗಮ್ ಬೂಟ್ಸ್, ಹೆಲ್ಮೆಟ್, ಗಾಗಲ್ಸ್, ಮಾಸ್ಕ್, ಸ್ಯಾನಿಟೈಸರ್ ಉಪಯೋಗಿಸದೇ ಕಾರ್ಯನಿರ್ವ ಹಿಸುತ್ತಿರುವ ಸ್ವಚ್ಛತಾ ಕಾರ್ಯಗಳ ವೈಫಲ್ಯ ಪ್ರಕರಣ ಗಳಲ್ಲಿ 10 ಸಾವಿರ ರೂ. ದಂಡ ವಿಧಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಆದೇಶ ಹೊರಡಿಸಿದೆ.
ಇದಲ್ಲದೆ, ಈ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಖಾಯಂ ಅಥವಾ ತಾತ್ಕಾಲಿಕವಾಗಿ ನೇಮಕಗೊಂಡಿರುವ ಸ್ವಚ್ಛತಾ ಸಿಬ್ಬಂದಿಗಳಿಗೆ ಅಗತ್ಯ ರಕ್ಷಣಾ ಸಾಮಗ್ರಿಗಳು ಮತ್ತು ಸುರಕ್ಷತಾ ಸಲಕರಣೆಗಳಿಲ್ಲದೆ ಕಾರ್ಯನಿರ್ವ ಹಿಸುತ್ತಿರುವುದು ಕಂಡು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು. ಜೊತೆಗೆ ಈ ಅಂಶಗಳನ್ನು ಉಲ್ಲಂ ಸಿದರೆ “ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ (ಮನುಷ್ಯರಿಂದ ಮಲಗುಂಡಿ ಸ್ವಚ್ಛಗೊಳಿಸುವ) ವೃತ್ತಿ ನಿಷೇಧ ಮತ್ತು ಅವರ ಪುನರ್‌ವಸತಿ ಕಾಯ್ದೆ-2013’ರಂತೆ ದಂಡ ಪ್ರಕ್ರಿಯಾ ಸಂಹಿತೆಯ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಎಚ್ಚರಿಕೆ ಕೊಟ್ಟಿದೆ. “ಮನುಷ್ಯರಿಂದ ಮಲಗುಂಡಿಗಳನ್ನು ಸ್ವಚ್ಛಗೊಳಿಸುವ ವೃತ್ತಿ ನಿಷೇಧ ಮತ್ತು ಅವರ ಪುನರ್‌ವಸತಿ ಕಾಯ್ದೆ-2013ರನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತು. ಅದರಂತೆ, ರಾಜ್ಯದಲ್ಲಿ ಕಾಯ್ದೆಯನ್ನು ಅನುಷ್ಠಾನಕ್ಕೆ ತಂದು 2014ರಲ್ಲಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತು. ಕಾಯ್ದೆಯ ಸೆಕ್ಷನ್ 7ರಡಿ “ಯಾವುದೇ ವ್ಯಕ್ತಿ, ಸ್ಥಳೀಯ ಪ್ರಾಧಿಕಾರ ಅಥವಾ ಯಾವುದೇ ಸಂಸ್ಥೆ ಗಳು ವ್ಯಕ್ತಿಗಳನ್ನು ಸೆಪ್ಟಿಕ್ ಟ್ಯಾಂಕ್ ಮತ್ತು ಚರಂಡಿಯಂತಹ ಅಪಾಯಕಾರಿ ಸ್ಥಳಗಳನ್ನು ಸ್ವತ್ಛಗೊಳಿಸುವ ಕಾರ್ಯಕ್ಕೆ ದೈಹಿಕವಾಗಿ ತೊಡಗಿಸಿಕೊಳ್ಳಬಾರದು ಹಾಗೂ ನಿಯೋಜಿಸಿಕೊಳ್ಳಬಾರದು ಎಂದು ಹೇಳಲಾಗಿದೆ.
ಆದರೆ, ಒಂದೊಮ್ಮೆ ಈ ಕಾರ್ಯಕ್ಕೆ ಆಧುನಿಕ ಯಂತ್ರಗಳನ್ನು ಬಳಸುವ ಮೂಲಕ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮನುಷ್ಯರನ್ನು ನಿಯೋಜಿಸಬೇಕಾದರೆ ಅಂತಹವರಿಗೆ ಒದಗಿಸಬೇಕಾದ ಅಗತ್ಯ ರಕ್ಷಣಾ ಸಾಮಾಗ್ರಿಗಳು ಮತ್ತು ಸುರಕ್ಷತಾ ಸಲಕರಣೆಗಳನ್ನುಒದಗಿಸುವ ಹಾಗೂ ಸ್ವತ್ಛಗೊಳಿಸುವ ವಿಧಾನದಬಗ್ಗೆಯೂ ಕಾಯ್ದೆಯಲ್ಲಿ ವಿವರಿಸಲಾಗಿದೆ. ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಇಲಾಖೆ ನಿರ್ಧರಿಸಿದೆ. ಫೆ.19ಕ್ಕೆ ಇಲಾಖೆಯ ಪ್ರ.ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಂಡು ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.
ಕೋರ್ಟ್ ಚಾಟಿ ಬೀಸಿತ್ತು :
ರಾಜ್ಯದಲ್ಲಿ ಮನುಷ್ಯರಿಂದ ಮಲಗುಂಡಿಗಳನ್ನು ಸ್ವಚ್ಛಗೊಳಿಸುವ ವೃತ್ತಿ ನಿಷೇಧ ಮತ್ತು ಅವರ ಪುನರ್ ವಸತಿ ಕಾಯ್ದೆ-2013ನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಮತ್ತು ಕೋವಿಡ್-19 ಅವಧಿಯಲ್ಲಿ ಸ್ವಚ್ಛತಾ ಕಾರ್ಮಿಕರಿಗೆ ಅಗತ್ಯ ಸುರಕ್ಷತಾ ಸಾಮಗ್ರಿಗಳನ್ನು ಒದಗಿಸಬೇಕು ಎಂದು ಕೋರಿ ಸಲ್ಲಿಸಲಾದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ವೇಳೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿತ್ತು.
ಸ್ವಚ್ಛತಾ ಸಿಬ್ಬಂದಿ ರಕ್ಷಣಾ ಸಾಮಗ್ರಿ ಮತ್ತು ಸುರಕ್ಷತಾ ಸಲಕರಣೆಗಳಿಲ್ಲದೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಕಂಡು ಬಂದಲ್ಲಿ ಸಂಬಂಧ ಪಟ್ಟ ಅಧಿಕಾರಿ, ಗುತ್ತಿಗೆದಾರ ಅಥವಾ ಏಜೆನ್ಸಿಗಳಿಗೆ ದಂಡ ವಿಧಿಸುವ ಸಂಬಂಧ ಸುತ್ತೋಲೆ ಹೊರಡಿಸಲಾಗಿದೆ.
–ಪ್ರಿಯಾಂಕಾ ಮೇರಿ ಫ್ರಾನ್ಸಿಸ್,ಆಯುಕ್ತರು, ಪಂಚಾಯತ್‌ರಾಜ್ ಆಯುಕ್ತಾಲಯ.
–ರಫೀಕ್ ಅಹ್ಮದ್