Advertisement

ಎಲ್ಲರೂ ಒಟ್ಟುಗೂಡಿದರೆ, ಎಲ್ಲೆಡೆಯೂ ಸ್ವಚ್ಛತೆ ಸಾಧ್ಯ : ಸಚಿವ ಬಿ.ಶ್ರೀರಾಮುಲು

12:53 PM Sep 16, 2019 | Suhan S |

ಬಳ್ಳಾರಿ: ಇದೇ ಸೆ.17ರಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ನಗರದ ವಿಮ್ಸ್ ಆವರಣದಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಸ್ವಚ್ಛತಾ ಕಾರ್ಯ ನಡೆಸುವ ಮೂಲಕ  ಸ್ವಚ್ಛ ಸೇವಾ ಸಪ್ತಾಹವನ್ನು ಸೋಮವಾರ ನಡೆಸಿದರು.

Advertisement

ವಿಮ್ಸ್ ನಿರ್ದೇಶಕರ ಹಳೆಯ ಕಚೇರಿ ಆವರಣದಲ್ಲಿ ಪೌರ ಕಾರ್ಮಿಕರೊಂದಿಗೆ ಕೆಲ ಹೊತ್ತು ಪೊರಕೆ ಹಿಡಿದು ಕಸಗುಡಿಸಿದ ಸಚಿವ ರಾಮುಲು, ಬಳಿಕ ತ್ಯಾಜ್ಯವನ್ನು ಬುಟ್ಟಿಯಲ್ಲಿ ತುಂಬಿ ಬೇರೆಡೆ ಸಾಗಿಸಿ ಸ್ವಚ್ಚತಾ ಕಾರ್ಯ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮುಲು, ಇದೇ ಸೆ.17 ರಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆಯಿದೆ. ಪ್ರಧಾನಿ ನರೇಂದ್ರ ಮೋದಿಯವರು ಸಹ ತಮ್ಮ ಜೀವನವನ್ನೇ ದೇಶ ಸೇವೆಗಾಗಿ ಮುಡುಪಾಗಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಜೆಪಿ ಪಕ್ಷದ ಕಾರ್ಯಕರ್ತರು, ಮುಖಂಡರು ಸೆ.14 ರಿಂದ 21 ರವರೆಗೆ ದೇಶಾದ್ಯಂತ ಸ್ವಚ್ಛ ಸೇವಾ ಸಪ್ತಾಹವನ್ನಾಗಿ ಆಚರಿಸುತ್ತಿದ್ದಾರೆ.

ಪ್ರಧಾನಿ ಮೋದಿ ಹೆಸರಲ್ಲಿ ಕೇಕ್  ಕತ್ತರಿಸಿ ಜನ್ಮದಿನ ಆಚರಿಸಿ ದುಂದುವೆಚ್ಚ ಮಾಡುವ ಬದಲಿಗೆ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುವ ಮೂಲಕ ಮೋದಿಯವರ ಜನ್ಮದಿನವನ್ನು  ನಗರದ ವಿಮ್ಸ್ ಆವರಣದಲ್ಲಿ ಸರಳವಾಗಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡಿದ್ದು, ಸಂಸದ ವೈ.ದೇವೇಂದ್ರಪ್ಪ, ಮಾಜಿ ಸಂಸದ ಸಣ್ಣ ಪಕ್ಕೀರಪ್ಪ, ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು, ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದರು.

ಸೆ.17ರಂದು ಹೈಕ ವಿಮೋಚನಾ ದಿನಾಚರಣೆಯಂದು ಯಾದಗಿರಿ ಜಿಲ್ಲೆಯಲ್ಲಿ ಧ್ವಜಾರೋಹಣ ನೆರವೇರಿಸುವಂತೆ ಪಕ್ಷ ನಿರ್ಣಯ ಕೈಗೊಂಡಿದೆ. ಭವಿಷ್ಯದ ಹಿತದೃಷ್ಟಿಯಿಂದ ಸಿಎಂ ಯಡಿಯೂರಪ್ಪ ಈ ನಿರ್ಣಯ ಕೈಗೊಂಡಿದ್ದಾರೆ. ನಾನು ಬಳ್ಳಾರಿಯಿಂದ ದೂರವಾಗುವ ಪ್ರಶ್ನೆಯೇ ಇಲ್ಲ. ಇಲ್ಲಿನ ಜನರಿಗೆ ರಾಮುಲು ಎಂದರೆ ಏನು ಎಂಬುದು ಗೊತ್ತಾಗಿದೆ. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಬಳ್ಳಾರಿಗೆ ನಿಯೋಜಿಸಲಾಗಿದೆ‌. ಯಾದಗಿರಿ ಸಹ ನಮ್ಮ ರಾಜ್ಯದ ಒಂದು ಜಿಲ್ಲೆ. ಅದು ಬೇರೆಯಲ್ಲ ಎಂದು ತಿಳಿಸಿದರು.

Advertisement

ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಈಗಾಗಲೇ ಸಿದ್ದಗೊಂಡಿದೆ ಎಂದು ನನಗೆ ಅನ್ನಿಸುತ್ತದೆ ಎಂದ ಸಚಿವ ರಾಮುಲು, ಸಿಎಂ ಯಡಿಯೂರಪ್ಪ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಸಿದ್ದಪಡಿಸಿ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿದ್ದಾರೆ. ರಾಜ್ಯಪಾಲರ ಅವಧಿ ಮುಗಿದ ಹಿನ್ನೆಲೆಯಲ್ಲಿ ಅದು ವಿಳಂಬವಾಗಬಹುದು. ಹೊಸ ರಾಜ್ಯಪಾಲರು ಬಂದಾಕ್ಷಣ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗಲಿದೆ. ಬಳ್ಳಾರಿ ಜಿಲ್ಲೆಯ ಉಸ್ತುವಾರಿ ನನಗೆ ಸಿಗುವುದು ಬಿಡುವುದು ಪಕ್ಷದ ನಿರ್ಣಯಕ್ಕೆ ಬಿಟ್ಟ ವಿಚಾರ. ಪಕ್ಷದ ನಿರ್ಣಯದಂತೆ ನಾನು ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕುಂಠಿತವಾಗಿಲ್ಲ‌. ಇತ್ತೀಚೆಗಷ್ಟೇ ಜಿಲ್ಲೆಯಲ್ಲಿ ಬರ, ನೆರೆ ಹಾವಳಿ ಪ್ರದೇಶಕ್ಕೆ ಭೇಟಿ ನೀಡಿ ಸಮಗ್ರ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಜಿಲ್ಲಾಧಿಕಾರಿಗಳೊಂದಿಗೂ ಚರ್ಚಿಸಿದ್ದೇವೆ. ಅಭಿವೃದ್ಧಿ ಕುಂಠಿತವಾಗಿಲ್ಲ ಎಂದರು.

ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿಸುವ ಸಲುವಾಗಿ ಹೋರಾಟಕ್ಕೆ ಸಿದ್ಧವಾಗುತ್ತಿದೆ ಎಂಬುದು ನನ್ನ ಗಮನಕ್ಕಿದೆ. ಆದರೆ ಈ ಬಗ್ಗೆ ನಾನು ವೈಯಕ್ತಿಕ ಅಭಿಪ್ರಾಯ ಕೊಡುವುದಿಲ್ಲ‌. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಚರ್ಚಿಸುತ್ತೇನೆ. ಇನ್ನು ವಿಮ್ಸ್ ನಲ್ಲಿ ಸಾಕಷ್ಟು ಸಮಸ್ಯೆಗಳು ಇವೆ. ಮುಖ್ಯವಾಗಿ ತುರ್ತು ನಿಗಾ ಘಟಕದಲ್ಲಿ ಸಿಬ್ಬಂದಿ ಕೊರತೆ ಇದೆ. ಸ್ಕ್ಯಾನಿಂಗ್, ಎಕ್ಸ್ ರೇ ಸಮಸ್ಯೆಗಳು ಇವೆ. ಈ ಎಲ್ಲವೂ ಸರಿಯಾಗಲಿವೆ. ಎಂಆರ್ ಐ ಸ್ಕ್ಯಾನ ಉಪಕರಣಗಳು ಇದ್ದರೂ ಅದನ್ನು ಬಳಕೆ ಮಾಡಲಾಗುತ್ತಿಲ್ಲ. ಈ ಎಲ್ಲದರ ಬಗ್ಗೆ ನಿರ್ದೇಶಕರನ್ನು ಸೇರಿಸಿಕೊಂಡು ನಾಲ್ಕೈದು ದಿನಗಳಲ್ಲಿ ಸಭೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈ ವೇಳೆ ವಿಮ್ಸ್ ನಿರ್ದೇಶಕ ಲಕ್ಷ್ಮಿನಾರಾಯಣ ರೆಡ್ಡಿ, ಅಧೀಕ್ಷ ಮರಿರಾಜ್ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next