Advertisement
ಪಟ್ಟಣದಲ್ಲಿ ಅಂರ್ತಜಲ ಕುಸಿತ ಹೆಚ್ಚಳದಿಂದ ಪ್ಲೊರೈಡ್‌ಯುಕ್ತ ನೀರು ಮಾರಕ ರೋಗಗಳಿಗೆ ಕಾರಣವಾಗಲಿದೆ ಎಂಬುವ ದೃಷ್ಟಿದಿಂದ ಅಸ್ತಿತ್ವಕ್ಕೆ ತರಲಾದ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿದ್ದು, ನೀರಿಗಾಗಿ ಪ್ಲೊರೈಡ್‌ಯುಕ್ತ ನೀರು ಬಳಕೆ ಮಾಡುವುದು ಅನಿವಾರ್ಯವಾಗಿದೆ. ಪಟ್ಟಣದ ಪುರಸಭೆ ಆವರಣದಲ್ಲಿರುವ ನೀರಿನ ಘಟಕ ಸ್ಥಗಿತಗೊಂಡು ಸುತ್ತಮುತ್ತಲಿನ ಜನ ಕುಡಿಯುವ ನೀರಿಗಾಗಿ ಪರದಾಡುವಂತಾಗಿದ್ದು, ಪುರಸಭೆ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ.
Related Articles
Advertisement
ಬೇಸಿಗೆಗೆ ಹೆಚ್ಚಿದ ನೀರಿನ ಬೇಡಿಕೆ: ಬೇಸಿಗೆ ಪ್ರಾರಂಭವಾಗಿದ್ದು ಕುಡಿಯುವ ನೀರಿಗೆ ಬೇಡಿಕೆ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಘಟಕ ಸ್ಥಗಿತವಾಗಿರುವುದರಿಂದ ಜನ ತೊಂದರೆ ಅನುಭವಿಸುವಂತಾಗಿದ್ದು, ಅದನ್ನು ತುರ್ತಾಗಿ ದುರಸ್ತಿ ಮಾಡಿಸಿ ಮರು ಚಾಲನೆ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ಪ್ಲೊರೈಡ್ ಅಂಶ ಪತ್ತೆ: ಅಂರ್ತಜಲ ಕುಸಿದಿರುವ ಪರಿಣಾಮ ಕುಡಿಯುವ ನೀರಿನಲ್ಲಿ ಅತ್ಯಧಿಕ ಪ್ರಮಣದಲ್ಲಿ ಪ್ಲೊರೈಡ್ ಅಂಶ ಕಾಣಿಸಿಕೊಳ್ಳುತ್ತದೆ. ಕೊಳವೆಬಾವಿಯಲ್ಲಿ ನೀರು 1200ರಿಂದ 1500 ಅಡಿ ಆಳಕ್ಕೆ ಇಳಿದ ಕಾರಣದಿಂದ ಲಭ್ಯ ನೀರಿನಲ್ಲಿ ಅಪಾಯಕಾರಿ ಪ್ಲೊರೈಡ್ ಅಂಶ ಪತ್ತೆಯಾಗುತ್ತದೆ. ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚಿನ ಮಳೆ ಬಿದ್ದಿದ್ದರಿಂದ ಕೆರೆಗಳಿಗೆ ಹೆಚ್ಚಿನ ನೀರು ಬಂದಿದೆ. ನಾಗವಾರ ಮತ್ತು ಹೆಬ್ಟಾಳ ಕೆರೆಗಳ ಶುದ್ಧೀಕರಿಸಿದ ನೀರು ಕೆರೆಗಳಿಗೆ ಹರಿಸಿರುವುದರಿಂದ ಸುತ್ತಮುತ್ತಲಿನ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ.
ದೇವನಹಳ್ಳಿ ಹೃದಯ ಭಾಗದಲ್ಲಿರುವ ಪುರಸಭೆಯಲ್ಲಿ ಕಳೆದ 11ದಿನಗಳಿಂದ ಶುದ್ಧ ನೀರಿನ ಘಟಕ ಸ್ಥಗಿತಗೊಂಡಿದೆ. ಇದರಿಂದ ಬೇರೆ ಕಡೆ ಹೋಗಿ ನೀರನ್ನು ತೆಗೆದುಕೊಂಡು ಬರುವ ಸ್ಥಿತಿ ಬಂದಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಗೊಂಡು ಸ್ಥಗಿತಗೊಂಡಿರುವ ನೀರಿನ ಘಟಕವನ್ನು ಪುನಃ ಪ್ರಾರಂಭಿಸಬೇಕು. -ಶ್ರೀನಿವಾಸ್, ನಾಗರಿಕ
ಘಟಕವನ್ನು ನಿರ್ವಹಣೆಗೆ ನೀಡಲಾಗಿತ್ತು. ಆದರೆ, ಎನ್‌ಜಿಒ ಸಂಸ್ಥೆಯವರು ಜಿಲ್ಲಾಧಿಕಾರಿ ಕಚೇರಿಯ ನಗರಾಭಿವೃದ್ಧಿಕೋಶದ ಕಚೇರಿ ಅಧಿಕಾರಿಗಳಿಗೆ ಬೀಗ ಕೊಟ್ಟು ಹೋಗಿದ್ದಾರೆ. ಯೋಜನಾ ನಿರ್ದೇಶಕರು ಬೀಗವನ್ನು ಹಸ್ತಾಂತರಿಸಿದ ನಂತರ ಟೆಂಡರ್ ಕರೆದು ನೀರಿನ ಘಟಕದ ನಿರ್ವಹಣೆ ಮಾಡಲಾಗುವುದು. – ಎ.ಎಚ್.ನಾಗರಾಜ್, ಪುರಸಭಾ ಮುಖ್ಯಾಧಿಕಾರಿ
– ಎಸ್.ಮಹೇಶ್