ವಾಷಿಂಗ್ಟನ್: ಬಸ್ ವೇಗವಾಗಿ ಚಲಿಸುತ್ತಿರುವ ಸಂದರ್ಭದಲ್ಲಿ ಏಕಾಏಕಿ ಚಾಲಕ ಪ್ರಜ್ಞಾಹೀನನಾಗಿದ್ದು, ಈ ಸಂದರ್ಭದಲ್ಲಿ 7ನೇ ತರಗತಿ ವಿದ್ಯಾರ್ಥಿಯೊಬ್ಬ ತಕ್ಷಣವೇ ಪರಿಸ್ಥಿತಿಯನ್ನು ಗಮನಿಸಿ ಬಸ್ ಅನ್ನು ನಿಲ್ಲಿಸಿದ ಪರಿಣಾಮ ತನ್ನ ಸಹಪಾಠಿಗಳ ಜೀವವನ್ನು ಉಳಿಸಿರುವ ಘಟನೆ ಅಮೆರಿಕಾದ ಮಿಚಿಗನ್ ನಲ್ಲಿ ನಡೆದಿದೆ.
ಇದನ್ನೂ ಓದಿ:ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ʻ22-ಡಿಗ್ರಿ ಹ್ಯಾಲೋʼ ಗೋಚರ…ಏನಿದು ಸೌರಮಂಡಲ ಕೌತುಕ?
ವಾರೆನ್ ಕನ್ಸಾಲಿಡೇಟೆಡ್ ಶಾಲೆ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಬಸ್ ಚಲಾಯಿಸುತ್ತಿದ್ದ ಚಾಲಕ ಅಸ್ವಸ್ಥಗೊಂಡಿದ್ದು, ಆ ಸಂದರ್ಭದಲ್ಲಿ ವಿದ್ಯಾರ್ಥಿ ದಿಲ್ಲೊನ್ ರೀವ್ಸ್ ಚಾಲಕನ ಬಳಿ ಬಂದಿರುವ ದೃಶ್ಯ ಸೆರೆಯಾಗಿದೆ. ಪರಿಸ್ಥಿತಿಯ ಗಂಭೀರತೆ ಅರಿತ ವಿದ್ಯಾರ್ಥಿ ಸ್ಟೀಯರಿಂಗ್ ಹಿಡಿದು ಬಸ್ ಅನ್ನು ಮೇಸೋನಿಕ್ ಬೌಲೆವಾರ್ಡ್ ರಸ್ತೆ ಸಮೀಪ ಸುರಕ್ಷಿತವಾಗಿ ನಿಲುಗಡೆ ಮಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ ಎಂದು ಫಾಕ್ಸ್ 2 ಡೆಟ್ರಾಯಿಟ್ ವರದಿ ಮಾಡಿದೆ.
ಬಸ್ ನಲ್ಲಿ ಸುಮಾರು 66 ಪ್ರಯಾಣಿಕರಿದ್ದು, ಇತರ ವಿದ್ಯಾರ್ಥಿಗಳ ಕಿರುಚಾಟ ಕೇಳಿ ಯಾರೋ 911ಗೆ ಕರೆ ಮಾಡಿ ವಿಷಯ ತಿಳಿಸಿರುವುದಾಗಿ ಫಾಕ್ಸ್ ವರದಿ ತಿಳಿಸಿದೆ.
ವಿದ್ಯಾರ್ಥಿ ದಿಲ್ಲೋನ್ ಸಮಯೋಚಿತ ಕಾರ್ಯ ಮತ್ತು ಧೈರ್ಯದ ಪರಿಣಾಮ ಎಲ್ಲರು ಪ್ರಾಣಾಪಾಯದಿಂದ ಪಾರಾಗಿರುವುದಕ್ಕೆ ಶಾಲಾ ಆಡಳಿತ ಮಂಡಳಿ ಮತ್ತು ಪೊಲೀಸ್ ಇಲಾಖೆ ಶ್ಲಾಘನೆ ವ್ಯಕ್ತಪಡಿಸಿದೆ.