ಹೊಸದಿಲ್ಲಿ : ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಶಿಬಿರದ ಮೇಲೆ ನಿನ್ನೆ ಭಾನುವಾರ ನಸುಕಿನ ವೇಳೆ ಉಗ್ರ ದಾಳಿ ನಡೆಸಿ ಐವರು ಭದ್ರತಾ ಸಿಬಂದಿಗಳನ್ನು ಹತ್ಯೆಗೈದ ಉಗ್ರರ ಪೈಕಿ ಒಬ್ಟಾತನು ಹತ್ತನೇ ತರಗತಿಯ ವಿದ್ಯಾರ್ಥಿ ಎಂಬ ಆಘಾತಕಾರಿ ವಿಷಯ ಇದೀಗ ಬೆಳಕಿಗೆ ಬಂದಿದೆ.
ಜಮ್ಮು ಕಾಶ್ಮೀರದಲ್ಲಿ ಉಗ್ರವಾದವು ನಿರ್ನಾಮವಾಗುತ್ತಾ ಬಂದಿದೆ ಎಂದು ಈಚೆಗಷ್ಟೇ ಭದ್ರತಾ ದಳ ಹೇಳಿಕೊಂಡಿತ್ತು. ಆದರೆ ಈಗ ಉಗ್ರರ ವಯಸ್ಸನ್ನು ಗಮನಿಸಿದರೆ ಸಣ್ಣ ಸಣ್ಣ ಪ್ರಾಯದವರೂ ಭಯೋತ್ಪಾದಕ ಸಂಘಟನೆಗಳನ್ನು ಸೇರಿಕೊಳ್ಳುತ್ತಿರುವುದು ಅತ್ಯಂತ ಕಳವಳಕಾರಿಯಾದ ಸಂಗತಿಯಾಗಿದೆ.
ಎಲ್ಲಕ್ಕಿಂತ ಮಿಗಿಲಾದ ಸಂಗತಿ ಎಂದರೆ ಸಿಆರ್‌ಪಿಎಫ್ ಶಿಬಿರದ ಮೇಲೆ ದಾಳಿಗೈದ ಉಗ್ರರ ಪೈಕಿ ಒಬ್ಬನಾಗಿರುವ 10ನೇ ತರಗತಿ ಓದುತ್ತಿರುವ ಹುಡುಗನ ತಂದೆ ಜಮ್ಮು ಕಾಶ್ಮೀರ ಪೊಲೀಸ್ ದಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದೇ ಆಗಿದೆ.
ಸಿಆರ್‌ಪಿಎಫ್ ಕ್ಯಾಂಪ್ ಮೇಲೆ ದಾಳಿ ಗೈದ ಉಗ್ರರ ಪೈಕಿ ಇಬ್ಬರನ್ನು ಈಗಾಗಲೇ ಭದ್ರತಾ ಸಿಬಂದಿಗಳು ಕೊಂದಿದ್ದು ಇನ್ನುಳಿದ ಉಗ್ರರಿಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ನಡುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ನಿನ್ನೆ ಭಾನುವಾರ ಸಿಆರ್‌ಪಿಎಫ್ ಶಿಬಿರದ ಮೇಲೆ ದಾಳಿ ನಡೆಸಿದ ಉಗ್ರರು ಕಾಶ್ಮೀರದವರೇ ಆಗಿದ್ದಾರೆ. ಇವರ ಮೂಲಕ ತಾನು ಉಗ್ರ ದಾಳಿ ನಡೆಸಿರುವುದಗಿ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಹೇಳಿಕೊಂಡಿದೆ.