Advertisement

ಕುವೆಂಪು ಜಯಂತಿ: ಮಾತೃಮಂಡಲಿ ವೃತ್ತದಲ್ಲಿ 2 ಬಣ ಮಧ್ಯೆ ಜಟಾಪಟಿ

04:12 PM Dec 30, 2021 | Team Udayavani |

ಮೈಸೂರು: ನಗರದ ಪ್ರಮುಖ ವೃತ್ತವೊಂದರಲ್ಲಿ ಕುವೆಂಪು ಜನ್ಮದಿನಾಚರಣೆ ಮಾಡುವ ಸಂಬಂಧ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಘಟನೆ ಬುಧವಾರ ಸಂಜೆ ನಡೆಯಿತು.

Advertisement

ನಗರದ ವಿವಿ ಮೊಹಲ್ಲಾದ ಟೆಂಪಲ್‌ ರಸ್ತೆಯ ಮಾತೃಮಂಡಲಿ ವೃತ್ತದ ಬಳಿ ಬುಧವಾರ ಸಂಜೆ ಸಂಘಟನೆಯೊಂದರ ಸದಸ್ಯರು, ವೃತ್ತದಲ್ಲಿ ಕುವೆಂಪು ಅವರ ಭಾವಚಿತ್ರ ಇರಿಸಿ ಕುವೆಂಪು ಜನ್ಮ ದಿನಾಚರಣೆ ಆಚರಿಸಲು ಮುಂದಾಗಿದ್ದರು. ಈ ವೇಳೆ ಮತ್ತೂಂದು ಗುಂಪೊಂದು ಆಚರಣೆಗೆ ವಿರೋಧ ವ್ಯಕ್ತಪಡಿಸಿದೆ. ಇದರಿಂದ ಎರಡು ಗುಂಪುಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಎರಡು ಗುಂಪಿನವರು ರಸ್ತೆ ಬಂದ್‌ ಮಾಡುವ ಮೂಲಕ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ವಿಷಯ ತಿಳಿದು  ಸ್ಥಳಕ್ಕಾಗಮಿಸಿದ ಡಿಸಿಪಿ ಪ್ರದೀಪ್‌ ಗುಂಟಿ ಮತ್ತು ವಿವಿ ಪುರಂ ಠಾಣೆ ಪೊಲೀಸರು ಎರಡು ಗುಂಪಿನ ಸದಸ್ಯರನ್ನು ಸಮಧಾನಗೊಳಿಸುವ ಪ್ರಯತ್ನ ಮಾಡಿದರು. ಸ್ಥಳದಿಂದ ಎರಡು ಗುಂಪಿನವರನ್ನು ತೆರವುಗೊಳಿಸಿ, ಹೆಚ್ಚಿನ ಅನಾಹುತವಾಗದಂತೆ ಬಿಗಿ ಪೊಲೀಸ್‌ ಬಂದೋ ಬಸ್ತ್ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ಜರುಗದಂತೆ ಕಟ್ಟೆಚ್ಚರ ವಹಿಸಲಾಗಿದೆ.

15 ದಿನಗಳ ಹಿಂದೆ ಇದೇ ವೃತ್ತದಲ್ಲಿ ಕೆಲವರು ರಾತ್ರೋರಾತ್ರಿ ಅಂಬೇಡ್ಕರ್‌ ಪ್ರತಿಮೆ ಸ್ಥಾಪಿಸಲು ಮುಂದಾಗಿದ್ದರು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಪ್ರತಿಮೆಯನ್ನು ತೆರವು ಮಾಡಿದ್ದರು. ಇದರಿಂದ ದಲಿತ ಸಂಘಟನೆಗಳು ಪ್ರತಿಭಟನೆಯನ್ನೂ ನಡೆಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next