ಉಡುಪಿ: ಕೋವಿಡ್ 19 ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರು, ಸೈನಿಕರಿಗೆ ಪ್ರೋತ್ಸಾಹ ನೀಡಲು ಪ್ರಧಾನಿಯವರು ನೀಡಿದ ಕರೆ ಮೇರೆಗೆ ಶ್ರೀಕೃಷ್ಣಮಠದ ಮುಂಭಾಗವಿರುವ ಪರ್ಯಾಯ ಶ್ರೀ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರು ಮಹಾಗಂಟೆಯನ್ನು ನುಡಿಸುವ ಮೂಲಕ ವೈದ್ಯರು, ಸೈನಿಕರಿಗೆ ಕೃತಜ್ಞತೆ ಸಲ್ಲಿಸಿದರು. ಇವರೊಂದಿಗೆ ಸಿಬಂದಿ ಶಂಖ ಊದಿದರು, ಜಾಗಟೆಗಳನ್ನು ನುಡಿಸಿದರು. ನಗರದ ವಿವಿಧೆಡೆ ಚಪ್ಪಾಳೆ, ಜಾಗಟೆ ಸದ್ದೂ ಕೇಳಿಬಂತು.
ಶ್ರೀ ಅದಮಾರು ಮಠದಲ್ಲಿ ಹಿರಿಯ ಶ್ರೀಪಾದರಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಗಂಟೆಯನ್ನು ಬಾರಿಸಿದರು. ಶ್ರೀ ಕಾಣಿಯೂರು ಮಠದ ಹೊರಗೆ ಶ್ರೀವಿದ್ಯಾವಲ್ಲಭತೀರ್ಥ ಶ್ರೀ ಪಾದರು ಕೈಚಪ್ಪಾಳೆ ಹೊಡೆಯುವ ಮೂಲಕ ಸಂದೇಶ ನೀಡಿದರು. ಹೊರಗೆ ಗಂಟೆ ಬಾರಿಸಿದ ಬಳಿಕ ಗರ್ಭಗುಡಿಯ ಹೊರಗೆ ಗಂಟೆ, ಶಂಖ, ತಾಳಗಳನ್ನು ನುಡಿಸಲಾಯಿತು. ಪಲಿಮಾರು ಮಠದಲ್ಲಿ ಗುರುಕುಲದ ವಿದ್ಯಾರ್ಥಿಗಳು ಜಾಗಟೆಯನ್ನು ನುಡಿಸಿದರು.
ಶ್ರೀ ನಿತ್ಯಾನಂದ ಮಂದಿರದಲ್ಲಿ ಗಂಟೆ, ಜಾಗಟೆ, ನಗಾರಿ ಬಾರಿಸಲಾಯಿತು. ಜಿಲ್ಲಾ ಮತ್ತು ನಗರಗಳಲ್ಲಿರುವ ದೊಡ್ಡ ದೊಡ್ಡ ಅಪಾರ್ಟುಮೆಂಟ್‌ಗಳಲ್ಲಿದ್ದವರೂ ಜಾಗಟೆ, ತಮಟೆಗಳನ್ನು ನುಡಿಸಿದರು. ಕೆಲವರು ಕೈ ಚಪ್ಪಾಳೆ ತಟ್ಟಿ ಬೆಂಬಲ ಸೂಚಿಸಿದರು. ಗ್ರಾಮಾಂತರದಲ್ಲಿಯೂ ಮನೆ ಮುಂಭಾಗ ಶಂಖ, ಜಾಗಟೆಗಳ ಸದ್ದು ಕೇಳಿಬಂತು.
ಶ್ರೀ ಕೃಷ್ಣಮಠ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಅರ್ಚಕರು, ಸಿಬಂದಿ ಹೊರತುಪಡಿಸಿ ಮತ್ಯಾರೂ ಇರಲಿಲ್ಲ. ಶ್ರೀ ಕೃಷ್ಣಮಠದಲ್ಲಿ ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆ ನಡೆಸಿದ ಬಳಿಕ ಏಕಾಂತದಲ್ಲಿ ಪಾರಾಯಣಗಳನ್ನು ನಡೆಸಿದರು. ಸನಾತನ ಸಂಸ್ಥೆಯವರ ಮನವಿ ಮೇರೆಗೆ ವಿವಿಧ ಮನೆಗಳಲ್ಲಿ ಚಂಡೆ, ಜಾಗಟೆ, ಗಂಟೆಗಳನ್ನು ನುಡಿಸಲಾಯಿತು.
ಸಂತೆಕಟ್ಟೆಯಲ್ಲಿ ಪಂಚನಾದ!
ಕೋವಿಡ್ 19 ಸೋಂಕು ತಡೆಗಟ್ಟಲು ನರೇಂದ್ರ ಮೋದಿಯವರು ರವಿವಾರ ಕರೆ ನೀಡಿದ ಜನತಾ ಕರ್ಫ್ಯೂ ಸಂಜೆ ಅವರಿಗೆ ಘಂಟಾನಾದದಿಂದ ಬೆಂಬಲ ವ್ಯಕ್ತಪಡಿಸಲು ಸನಾತನ ಸಂಸ್ಥೆಯವರು ಸಲಹೆ ನೀಡಿದಂತೆ ಸಂತೆಕಟ್ಟೆಯಲ್ಲಿ ಘಂಟಾನಾದದೊಂದಿಗೆ ಕೃತಜ್ಞತೆ ಸಲ್ಲಿಸಲಾಯಿತು.
ನಯಂಪಳ್ಳಿಯ ಕಲಾವತಿ ದಿನಕರ ಗಾಂವ್ಕರ್, ಸಂತೆಕಟ್ಟೆಯ ಲಕ್ಷ್ಮೀದೇವಿ ಗಾಂವ್ಕರ್ ಮನೆಗಳಲ್ಲಿ ಶಂಖ, ಜಾಗಂಟೆ, ತಾಳ, ಚಂಡೆ ಹೀಗೆ ಅನೇಕ ವಾದ್ಯೋ ಪಕರಣಗಳನ್ನು ನುಡಿಸಲಾಯಿತು.