ಹುಣಸೂರು: ಗೋಮಾಳ ಸಾಗುವಳಿ ಮಾಡುತ್ತಿರುವ ಭೂಮಿಯನ್ನು ರೈತರಿಗೆ ವಿತರಿಸಲು ಸರ್ಕಾರ ಮುಂದಾಗಿದ್ದರೂ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಸರ್ಕಾರ ತಡೆಯಾಜ್ಞೆ ತೆರವಿಗೆ ಮುಂದಾಗಿದ್ದು, ಆದೇಶ ಬಂದ ತಕ್ಷಣವೇ ಸಾಗುವಳಿ ಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.
ಕಂದಾಯ ಇಲಾಖೆ ವತಿಯಿಂದ ನಗರದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಸಾಗುವಳಿ ಪತ್ರ ವಿತರಣೆಯಲ್ಲಿ 57 ಮಂದಿಗೆ ಸಾಗುವಳಿ ಪತ್ರ ವಿತರಿಸಿ ಮಾತನಾಡಿದರು. ರಾಜ್ಯದಲ್ಲೇ ರೈತರಿಗೆ ಅತಿಹೆಚ್ಚು ಭೂಮಿಯ ಹಕ್ಕು ಪತ್ರ ವಿತರಿಸಿರುವ ತಾಲೂಕು ಹುಣಸೂರಾಗಿದೆ.
ಈವರೆಗೆ 570 ಕೃಷಿಕರಿಗೆ ಸಾಗುವಳಿ ವಿತರಿಸುವ ಅವಕಾಶ ಸಿಕ್ಕಿರುವುದು ಪುಣ್ಯದ ಕೆಲಸವೆಂದು ಭಾವಿಸಿದ್ದೇನೆ. ತಮ್ಮ ಅವಧಿಯಲ್ಲಿ ಉದ್ದೂರು ಮತ್ತು ಆಸ್ಪತ್ರೆ ಕಾವಲ್ ಸೊಸೈಟಿ ರೈತರಿಗೆ ಹಾಗೂ ಪುನರ್ವಸತಿ ಕೇಂದ್ರದ ಗಿರಿಜನರಿಗೆ ತಮ್ಮ ಅವಧಿಯಲ್ಲಿ ಸಾಗುವಳಿ ಪತ್ರ ಮಂಜೂರು ಮಾಡಿಸಿರುವ ಹೆಮ್ಮೆಯಿದೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಇನ್ನೂ ಸಾವಿರ ಮಂದಿ ರೈತರಿಗೆ ಸಾಗುವಳಿ ಪತ್ರ ವಿತರಿಸಲಾಗುವುದು. ಈ ನಡುವೆ ದಾಖಲಾತಿಗಳು ಕ್ರಮಬದ್ಧವಾಗಿರುವ ಅನೇಕ ರೈತರು ಸರಾìರಕ್ಕೆ ಕಿಮ್ಮತ್ತು ಕಟ್ಟಿ ಸಾಗುವಳಿ ಪತ್ರ ಪಡೆಯಲು ಮುಂದೆ ಬಾರದಿರುವುದು ವಿಪರ್ಯಾಸ. ಆದರೆ, ಸಮಿತಿ ಮುಂದೆ ಬಹುತೇಕ ತಕರಾರಿರುವ ಪ್ರಕರಣಗಳೇ ಬರುತ್ತಿದೆ. ಕೆಲವರಿಗೆ ಭೂ ಮಂಜೂರಾತಿ ಸಂಬಂಧ ಕಾನೂನಿನ ಬಗ್ಗೆ ಅರಿವಿಲ್ಲದೇ ಅಲೆದಾಡುತ್ತಿದ್ದಾರೆಂದರು.
ಎಸಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ: 2008ಕ್ಕಿಂತ ಮೊದಲು ದರ್ಖಾಸ್ತು ಭೂಮಿಗಾಗಿ ಅರ್ಜಿ ಸಲ್ಲಿಸಿದ್ದವರಿಗೆ ಅಧಿಕಾರಿಗಳು ಹಿಂಬರಹ ನೀಡದೇ ಸಮಿತಿ ತಿರಸ್ಕರಿಸುವ ಪ್ರಕರಣದ ಬಗ್ಗೆ ಮೇಲ್ಮನವಿ ಸಲ್ಲಿಸಲಾಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಇದನ್ನು ಅರಿತು ಇದೀಗ ಹಿಂಬರಹ ಕೊಡಿಸಲಾಗಿದ್ದು ಸೂಕ್ತ ದಾಖಲಾತಿ ಇದ್ದವರು ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲಿಂದ ಸಮಿತಿಗೆ ಪುನರ್ ಪರಿಶೀಲನೆಗೆ ಅರ್ಜಿ ಬರಲಿದ್ದು, ಅದನ್ನು ಸಮಿತಿ ಪರಿಶೀಲಿಸಲಿದೆ. ಇದನ್ನು ರೆತರು ಅರ್ಥ ಮಾಡಿಕೊಳ್ಳಬೇಕೆಂದರು.
ತಹಶೀಲ್ದಾರ್ ಎಸ್.ಪಿ.ಮೋಹನ್, ಶಿರಸ್ತೇದಾರ್ ಗುರುರಾಜ್, ರಾಜಸ್ವ ನಿರೀಕ್ಷಕರಾದ ರಾಜ್‌ಕುಮಾರ್, ಪ್ರಭಾಕರ್, ವೆಂಕಟಸ್ವಾಮಿ, ಸಮಿತಿ ಸದಸ್ಯರಾದ ಬನ್ನಿಕುಪ್ಪೆಚಿಕ್ಕಸ್ವಾಮಿ, ಮಮತ, ಶಿವಲಿಂಗಪ್ಪ, ತಾಪಂ ಸದಸ್ಯರಾದ ರವಿಪ್ರಸನ್ನ, ವೆಳ್ಳಂಗಿರಿ, ವಿಷಕಂಠನಾಯ್ಕ, ಗ್ರಾಮಲೆಕ್ಕಾಧಿಕಾರಿಗಳಾದ ಶಿವಕುಮಾರ್, ಶ್ರೀನಿವಾಸ್, ಮಹದೇವ್, ಗುರುಪ್ರಸಾದ್ ಮತ್ತಿತರರಿದ್ದರು.
ಅ.16ಕ್ಕೆ ಮತ್ತೆ ಸಾಗುವಳಿ ಚೀಟಿ ವಿತರಣೆ
ಮುಂದಿನ ದಿನಗಳಲ್ಲಿ ಆಗಾಗ್ಗೆ ಸಮಿತಿ ಸಭೆ ನಡೆಸಿ ಸಾಗುವಳಿ ಪತ್ರ ವಿತರಣೆಗೆ ಕ್ರಮ ವಹಿಸಲಾಗುವುದು. ಇದೀಗ 57 ಮಂದಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ. ಅಲ್ಲದೆ, ಸಭೆಯಲ್ಲಿ 64 ಮಂದಿಗೆ ಸಾಗುವಳಿ ಮಂಜೂರು ಮಾಡಲಾಗುವುದು. ಅ.16ಕ್ಕೆ ಮುಂದಿನ ಸಭೆ ನಡೆಯಲಿದ್ದು, ಅಂದು ಹಕ್ಕುಪತ್ರ ವಿತರಿಸಲಾಗುವುದೆಂದು ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.