Advertisement

CJI: ಮಹಿಳಾ ಜಡ್ಜ್‌ಗೇ ಕಿರುಕುಳ- ವರದಿ ಕೇಳಿದ ಸುಪ್ರೀಂ ಸಿಜೆಐ

08:22 PM Dec 15, 2023 | Pranav MS |

ನವದೆಹಲಿ: ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಮಹಿಳಾ ನ್ಯಾಯಾಧೀಶರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪದ ವಿಚಾರ ಈಗ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ವರೆಗೆ ತಲುಪಿದೆ. “ನನಗೆ ಸಾಯಲು ಅನುಮತಿ ಕೊಡಿ” ಎಂದು ಪ್ರಧಾನವಾಗಿ ಉಲ್ಲೇಖೀಸಿ ಬರೆಯಲಾಗಿರುವ ಎರಡು ಪುಟಗಳ ಪತ್ರ ಜಾಲತಾಣಗಳಲ್ಲಿ ವೈರಲ್‌ ಆಗಿರುವಂತೆಯೇ, ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಲಹಾಬಾದ್‌ ಹೈಕೋರ್ಟ್‌ನಿಂದ ಪ್ರಕರಣದ ತನಿಖೆಯ ಬಗ್ಗೆ ಯಥಾ ಸ್ಥಿತಿ ವರದಿಯನ್ನು ಕೇಳಿದ್ದಾರೆ.

Advertisement

ಮೂಲತಃ ಬಂದಾ ಜಿಲ್ಲೆಯ ಮಹಿಳಾ ನ್ಯಾಯಾಧೀಶೆಗೆ ಬಾರಾಬಂಕಿಯಲ್ಲಿ ಆರು ತಿಂಗಳ ಹಿಂದೆ ಕರ್ತವ್ಯದಲ್ಲಿ ಇದ್ದಾಗ ಪುರುಷ ನ್ಯಾಯಾಧೀಶರೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. “ನನಗೆ ಇನ್ನು ಜೀವಿಸಬೇಕಾದ ಅಗತ್ಯ ಕಾಣುವುದಿಲ್ಲ. ಜೀವತ್ಛವವಾಗಿ ಒಂದೂವರೆ ವರ್ಷದಿಂದ ಇದ್ದೇನೆ. ಹೀಗಾಗಿ ಆತ್ಮವಿಲ್ಲದ ಮತ್ತು ಜೀವವಿಲ್ಲದ ದೇಹವನ್ನು ಗೌರವಯುತವಾಗಿ ಮುಕ್ತಾಯಗೊಳಿಸಲು ಅನುಮತಿ ನೀಡಿ’ ಎಂದು 2 ಪುಟಗಳ ಪತ್ರದಲ್ಲಿ ಬರೆದಿದ್ದಾರೆ.

ಈ ಹಿನ್ನೆಲೆಯಲ್ಲಿ ಖುದ್ದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್‌ ಅವರೇ ಅಲಹಾಬಾದ್‌ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ಗೆ ಪತ್ರ ಬರೆದು ಆಂತರಿಕ ದೂರು ಸಮಿತಿ (ಐಸಿಸಿ) ನಡೆಸುತ್ತಿರುವ ತನಿಖೆಯ ಯಥಾ ಸ್ಥಿತಿಯನ್ನು ನೀಡುವಂತೆ ಸೂಚನೆ ನೀಡಿದ್ದಾರೆ. ಅದರ ಆಧಾರದಲ್ಲಿ ಮುಂದಿನ ಕ್ರಮವನ್ನು ಸಿಜೆಐ ಕೈಗೊಳ್ಳುವ ಸಾಧ್ಯತೆಗಳಿವೆ.

ಇದೇ ವೇಳೆ, ಪ್ರಕರಣದ ಬಗ್ಗೆ ನ್ಯಾ. ಹೃಷಿಕೇಶ್‌ ರಾಯ್‌ ನೇತೃತ್ವದ ನ್ಯಾಯಪೀಠದ ಮುಂದೆ ಮಹಿಳಾ ನ್ಯಾಯಾಧೀಶೆ ಸಲ್ಲಿಸಿರುವ ಅರ್ಜಿಯೂ ಡಿ.13ರಂದು ವಿಚಾರಣೆಗೆ ಬಂದಿತ್ತು. ಈ ಸಂದರ್ಭದಲ್ಲಿ ಐಸಿಸಿ ವಿಚಾರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಯಾವ ಆದೇಶ ನೀಡುವುದಿಲ್ಲ ಎಂದು ಹೇಳಿತು.

Advertisement

Udayavani is now on Telegram. Click here to join our channel and stay updated with the latest news.

Next