Advertisement
ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿ ನಡೆಸುವ ಪಿಯುಸಿ ತತ್ಸಮಾನ ವಿದ್ಯಾರ್ಹತೆಗೆ ಅನುಗುಣವಾಗಿ ಪಿಸಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಪಿಯುಸಿ ವಿದ್ಯಾರ್ಹತೆ. ಸಿಬಿಎಸ್‌ಸಿ, ಐಸಿಎಸ್‌ಇ ವಿಷಯದಲ್ಲಿ 12ನೇ ತರಗತಿ ಕಲಿತವರಿಗೆ, ಎನ್‌ಐಒಸಿಯಲ್ಲಿ ಹೈಯರ್ ಸೆಕೆಂಡರಿ ಪ್ರಮಾಣ ಪತ್ರ ಪಡೆದವರಿಗೆ ಸಮಸ್ಯೆಯಿಲ್ಲ. ಡಿಪ್ಲೊಮಾ ಅಭ್ಯರ್ಥಿಗಳಿಗೆ ಸಮಸ್ಯೆಯಾಗಿದೆ.
ಎನ್‌ಐಒಎಸ್ ಪ್ರಮಾಣ ಪಡೆದಿರಬೇಕೆಂಬ ಕಡ್ಡಾಯ ನಿಯಮದಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಸಾಧ್ಯವಾಗುತ್ತಿಲ್ಲ. ಎನ್‌ಐಒಎಸ್ ಕಾಲಂ ಭರ್ತಿ ಮಾಡದೆ ಪ್ರಕ್ರಿಯೆ ಮುಂದೆ ಹೋಗುತ್ತಿಲ್ಲ. ಇದರಿಂದಾಗಿ ರಾಜ್ಯದ 1 ಲಕ್ಷಕ್ಕೂ ಮಿಕ್ಕ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಕೆ ಹಂತದಲ್ಲೇ ಹೊರಗುಳಿಯುತ್ತಿದ್ದಾರೆ.
Related Articles
ಎನ್‌ಐಒಎಸ್ ಪ್ರಮಾಣ ಪತ್ರ ಕುರಿತು ಮತ್ತು ಹೊಂದುವ ಬಗ್ಗೆ ವಿದ್ಯಾರ್ಥಿಗಳಲ್ಲಿ ಸರಿಯಾದ ಮಾಹಿತಿ ಇಲ್ಲ. ಡಿಪ್ಲೊಮಾ ಕಾಲೇಜು ಸಂಸ್ಥೆಗಳ ಮುಖ್ಯಸ್ಥರಲ್ಲಿ ಕೂಡ ಎನ್‌ಐಒಎಸ್ ಬಗ್ಗೆ ಸ್ಪಷ್ಟತೆಯಿಲ್ಲ. ನಮ್ಮಲ್ಲಿ ಎನ್‌ಐಒಎಸ್ ಪ್ರಮಾಣ ಪತ್ರ ನೀಡುವ ಕ್ರಮವಿಲ್ಲ. ಡಿಪ್ಲೊಮಾ ಸರ್ಟಿಫಿಕೆಟ್ ತಾಂತ್ರಿಕ ಬೋರ್ಡ್ ನೀಡುವುದಾದ ಕಾರಣ ಅದರ ಆವಶ್ಯಕತೆ ಇರುವುದಿಲ್ಲ ಎನ್ನುವುದು ನಿಟ್ಟೆ ರುಕ್ಮಿಣಿ ಅಡ್ಯಂತಾಯ ಮೆಮೋರಿಯಲ್ ಪಾಲಿಟೆಕ್ನಿಕ್ ಸಂಸ್ಥೆಯ ಪ್ರಾಂಶುಪಾಲ ಪ್ರಶಾಂತ್ ಕುಮಾರ್ ಹೊಳ್ಳ ಅವರ ಅಭಿಪ್ರಾಯ.
Advertisement
ತಾಂತ್ರಿಕ ಸಂಸ್ಥೆಗಳ ಹಲವು ಮುಖ್ಯಸ್ಥರಲ್ಲೂ ಎನ್‌ಐಒಎಸ್ ಬಗ್ಗೆ ಸ್ಪಷ್ಟ ಉತ್ತರ ಇಲ್ಲ. ಆದ್ದರಿಂದ ಈ ವಿಚಾರ ವಿದ್ಯಾರ್ಥಿಗಳಿಗಂತೂ ತಿಳಿದಿರಲು ಸಾಧ್ಯವೇ ಇಲ್ಲ. ಪೊಲೀಸ್ ಪರೀಕ್ಷೆ ಈಗ ಸಾಮಾನ್ಯ ವಿಷಯವಲ್ಲ. ಯಾಕೆಂದರೆ ಪದವಿ, ಸ್ನಾತಕೋತ್ತರ ಪದವಿ, ಬಿಇ ಆದವರೂ ಇದಕ್ಕೆ ಬರುತ್ತಿದ್ದಾರೆ. ಸರಕಾರ ನಿಯಮ ತರುವ ಸಾಕಷ್ಟು ಮುಂಚಿತವಾಗಿ ಈ ಬಗ್ಗೆ ನಮಗೆ ಮಾಹಿತಿ ನೀಡಿದ್ದರೆ ನಾವದನ್ನು ಪಾಲಿಸುತ್ತಿದ್ದೆವು ಎನ್ನುವುದು ವಿದ್ಯಾರ್ಥಿಗಳ ಅಭಿಪ್ರಾಯ.
ಕೆಇಸಿ ಪರೀಕ್ಷೆ ಸರ್ಟಿಫಿಕೆಟ್ ಬರಲು 3-4 ತಿಂಗಳ ತೆಗೆದುಕೊಳ್ಳುವುದರಿಂದ ಈ ಬಾರಿಗೆ ಅದು ಸಾಧ್ಯವಿಲ್ಲ. ಸರಕಾರದ ಗಮನ ಸೆಳೆದು ನೊಟಿಫಿಕೇಶನ್‌ನಲ್ಲಿ ಬದಲಾವಣೆ ತರುವುದೊಂದೇ ದಾರಿ. ಅದಕ್ಕೂ ಸಮಯವಿಲ್ಲದ್ದರಿಂದ ವಿದ್ಯಾರ್ಥಿ ಸಂಘಟನೆಗಳು, ಜನಪ್ರತಿನಿಧಿಗಳು ಪ್ರಯತ್ನಿಸಿದರೆ ನೊಟಿಫಿಕೇಶನ್‌ನಲ್ಲಿ ಸಣ್ಣ ಬದಲಾವಣೆ ತಂದು ಸರಿಪಡಿಸಬಹುದು. ಗೃಹ ಸಚಿವರ ಗಮನ ಸೆಳೆಯುವ ಪ್ರಯತ್ನ ಆಗಬೇಕು ಎನ್ನುತ್ತಾರೆ ಕೆಇಸಿ ಗೈಡ್ ನೀಡುವ ಸಂಸ್ಥೆಯ ಮುಖ್ಯಸ್ಥರೊಬ್ಬರು.
ಕರ್ನಾಟಕ ಅಡ್ಮಿಸ್ಟ್ರೇಟ್ ಟ್ರಿಬ್ಯೂನಲ್ (ಕೆಇಟಿ)ಯಲ್ಲಿ ಕೂಡ ನ್ಯಾಯ ಕೇಳಲು ಅವಕಾಶವಿದೆ. ನಮಗೆ ಮಾಹಿತಿ ಇಲ್ಲದೆ ನೋಟಿಫಿಕೇಶನ್ ಮಾಡಿರುವುದು ಸಮಂಜಸವಲ್ಲ. ಇದರಿಂದ ನಾವು ವಂಚಿತರಾಗುತ್ತಿದ್ದೇವೆ. ನಮಗೂ ಅವಕಾಶ ಕೊಡಿ ಎನ್ನಬಹುದು. ಅಲ್ಲಿ ನ್ಯಾಯ ಸಿಕ್ಕರೂ ಸಿಗಬಹುದು ಎನ್ನುವ ಅಭಿಪ್ರಾಯ ಶಿಕ್ಷಣ ಸಂಸ್ಥೆಯ ತಜ್ಞರದ್ದು.
ಸದ್ಯಕ್ಕೆ ಏನು ಮಾಡಬಹುದು?ರಾಜ್ಯ ಸರಕಾರದ ಮಾನ್ಯತೆ ಇರುವ ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಪ್ರಮಾಣ ಪತ್ರ ಪಡೆದ ಅಭ್ಯರ್ಥಿಗೆ ಸಿಪಿಎಸ್ ಪರೀಕ್ಷೆಗೆ ಅನುವು ಮಾಡಿಕೊಡಬೇಕು. ಪ್ರಸ್ತುತ ಮಾರ್ಗಸೂಚಿಯಲ್ಲಿ ಬದಲಾವಣೆಗಳಾಗಬೇಕು. ಡಿಪ್ಲೊಮಾ ಅಭ್ಯರ್ಥಿಗಳಿಗೆ ಈ ವಿಷಯಕ್ಕೆ ಸಂಬಂಧಿಸಿ ನೇಮಕಾತಿ ಸಂದರ್ಭ ಪ್ರತ್ಯೇಕ ಪರೀಕ್ಷೆ ನಡೆಸಿ ಅವಕಾಶ ಕಲ್ಪಿಸಿಕೊಡುವುದು. ಪ್ರೊಬೆಷನರಿ ಒಳಗಡೆ ಸರ್ಟಿಫಿಕೆಟ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು ಎನ್ನುವುದು ವಂಚಿತ ಅಭ್ಯರ್ಥಿಗಳ ಬೇಡಿಕೆ. – ಬಾಲಕೃಷ್ಣ ಭೀಮಗುಳಿ