Advertisement

ಸುಧಾರಿತ ಗಸ್ತು ಪದ್ಧತಿಯಿಂದ ನಾಗರಿಕ ಸ್ನೇಹಿ ಪೊಲೀಸ್‌ ವ್ಯವಸ್ಥೆ 

11:14 AM Jul 07, 2017 | Team Udayavani |

ಯಲಹಂಕ: ನಾಗರಿಕ ಸ್ನೇಹಿ ಪೊಲೀಸ್‌ ವ್ಯವಸ್ಥೆಗೆ ಸುಧಾರಿತ ಗಸ್ತು ಪದ್ಧತಿ ಹೆಚ್ಚು ಸಹಕಾರಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಮಲ್ಲಿಕಾರ್ಜುನ್‌ ಹೇಳಿದ್ದಾರೆ. 

Advertisement

ಯಲಹಂಕ ಸಮೀಪದ ನಿತ್ಯೋತ್ಸವ ಕಲ್ಯಾಣ ಮಂಟಪದಲ್ಲಿ ರಾಜಾನುಕುಂಟೆ ಪೊಲೀಸ್‌ ಠಾಣೆ ಮತ್ತು ಬೆಂಗಳೂರು ಗ್ರಾಮಾಂತರ ಪೊಲೀಸ್‌ ಕಮಿಷನರೇಟ್‌ ವತಿಯಿಂದ ಆಯೋಜಿಸಿದ್ದ ಸುಧಾರಿತ ಗಸ್ತು ವ್ಯವಸ್ಥೆ ಹಾಗೂ ಗಸ್ತು ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, “ನಾಗರಿಕರಿಗೆ ಉತ್ತಮ ಸ್ಪಂದನೆ ಸಿಗದಿದ್ದರೆ ಪೊಲೀಸ್‌ ಅಧೀಕ್ಷರಿಗೆ ಸಾರ್ವಜನಿಕರು ನೇರವಾಗಿ ದೂರು ಸಲ್ಲಿಸಬಹುದು,’ ಎಂದು ಹೇಳಿದರು.

“ಪೊಲೀಸರು ಮತ್ತು ಗಸ್ತು ಸದಸ್ಯರು ನಾಗರಿಕರೊಂದಿಗೆ ಉತ್ತಮ ಸಂಬಂಧ ಹೊಂದುವ ಮೂಲಕ ಜನಸ್ನೇಹಿಯಾಗಬೇಕು. ಪೊಲೀಸರು ಮತ್ತು ಸಮುದಾಯದ ನಡುವೆ ಭಾಂಧವ್ಯವನ್ನು ವೃದ್ದಿಗೊಳಿಸಲು ಅನುಕೂಲವಾಗುವಂತೆ ರಾಜಾನುಕುಂಟೆ ಠಾಣೆಯಲ್ಲಿ ಈ ಹಿಂದೆ ಹಳೆ 5 ಬೀಟ್‌ಗಳಿಗೆ ಬದಲಾಗಿ 28 ಹೊಸಬೀಟ್‌ ವ್ಯವಸ್ಥೆಯನ್ನು ರೂಪಿಸಿ 1250ಬೀಟ್‌ ಸದಸ್ಯರನ್ನು ನೇಮಿಸಲಾಗಿದೆ,’ ಎಂದರು.

ದೊಡ್ಡಬಳ್ಳಾಪುರ ಉಪವಿಭಾಗದ ಪೊಲೀಸ್‌ ಉಪಅಧೀಕ್ಷಕ ನಾಗರಾಜು ಮಾತನಾಡಿ, “ಜನಸ್ನೇಹಿ ಪೋಲಿಸ್‌ ವ್ಯವಸ್ಥೆಯನ್ನು ಸಾಕಾರಗೊಳಿಸುವ ದೃಷ್ಟಿಯಿಂದ ಪೊಲೀಸ್‌ ಕಾನ್ಸ್‌ಟೇಬಲ್‌ ಮತ್ತು ಹೆಡ್‌ ಕಾನ್ಸ್‌ಟೇಬಲ್‌ಗ‌ಳಿಗೆ ಭೌಗೋಳಿಕ ಸರಹದ್ದನ್ನು ನಿಗದಿಗೊಳಿಸಲಾಗಿದೆ. ಆ ಬೀಟಿನ ಎಲ್ಲಾ ರೀತಿಯ ಪೊಲೀಸ್‌ ಕರ್ತವ್ಯದ ಅಧಿಕಾರವನ್ನು ಮತ್ತು ಸಂಪೂರ್ಣ ಜವಾಬ್ದಾರಿಯನ್ನು ಒಬ್ಬ ಕಾನ್ಸ್‌ಟೇಬಲ್‌ ಮತ್ತು ಹೆಡ್‌ ಕಾನ್ಸ್‌ಟೇಬಲ್‌ಗೆ ನಿಗಿದಿ ಪಡಿಸಲಾಗಿದೆ. ಇದಲ್ಲದೆ ಪ್ರತಿ ಬೀಟ್‌ನಲ್ಲಿ ಸಾರ್ವಜನಿಕರನ್ನು ಬೀಟ್‌ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳುವ ವ್ಯವಸ್ಥೆಯನ್ನು ವಿಸ್ತರಿಸಲಾಗಿದೆ,’ ಎಂದರು.

“ನಾಗರಿಕರು ಉತ್ಸಾಹದಿಂದ, ಸ್ನೇಹಪೂರ್ವಕವಾಗಿ ಪೊಲೀಸರ ಕಾರ್ಯಗಳಿಗೆ ಮಾಹಿತಿ ಮತ್ತು ಸಹಾಯ ನೀಡುವುದರಿಂದ ಅಪರಾಧ ತಡೆಯಲು ಹಾಗೂ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಸಾಧ್ಯ. ಸುಧಾರಿತ ಗಸ್ತು ವ್ಯವಸ್ಥೆ ಉತ್ತಮ ರೀತಿಯಿಂದ ಕಾರ್ಯನಿರ್ವಹಿಸಲು ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳನ್ನು ರಚಿಸಲಾಗಿದೆ. ಅದರಲ್ಲಿ ಎಲ್ಲಾ ಮಾಹಿತಿಗಳನ್ನು ತಿಳಿಸಬಹುದು ಮತ್ತು ಪ್ರತಿ ಗ್ರಾಮಗಳಲ್ಲಿ ಗಸ್ತು ಪೊಲೀಸ್‌ ಮತ್ತು ಮೇಲಾಧಿಕಾರಿಗಳ ಮೊಬೈಲ್‌ ಸಂಖ್ಯೆಯುಳ್ಳ ಮಾಹಿತಿಯ ಫ‌ಲಕ ಹಾಕಲು ಕ್ರಮ ತೆಗೆದುಕೊಳ್ಳಲಾಗಿದೆ,’ ಎಂದರು.

Advertisement

ಗಸ್ತು ಸದಸ್ಯರ ದೂರು: ರಾಜಾನುಕುಂಟೆ ಠಾಣಾ ವ್ಯಾಪ್ತಿಯ ಕಾರ್ಲಾಪುರ, ಬ್ಯಾತ, ಸಿಂಗನಾಯಕನಹಳ್ಳಿ ಸೇರಿದಂತೆ ಗ್ರಾಮಗಳಲ್ಲಿ ಕಿರಾಣಿ ಅಂಗಡಿಗಳಲ್ಲಿ ಮಧ್ಯ ಮಾರಾಟ ಮಾಡಲಾಗುತ್ತಿದೆ. ಪೊಲೀಸರಿಗೆ ದೂರು ನೀಡಿದರೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ರಾತ್ರಿ ಹೊತ್ತು ಹೆಣ್ಣು ಮಕ್ಕಳಿಗೆ ತೊಂದರೆಯಾಗಿದೆ. ತಿಮ್ಮಸಂದ್ರ ಮತ್ತು ರಾಜಾನುಕುಂಟೆ ಭಾಗದಲ್ಲಿ ವಾರದಿಂದ 2 ಭಾರಿ ಕಳ್ಳತನಗಳಾಗಿದ್ದರೂ ಕ್ರಮ ತೆಗೆದುಕೊಂಡಿಲ್ಲ.

ಬುಡುಮನಹಳ್ಳಿಯಲ್ಲಿ ಮಧ್ಯಪಾನ ಮತ್ತು ಇಸ್ಪೀಟ್‌ಗೆ ಯುವಕರು ದಾರಿತಪ್ಪುತ್ತಿದ್ದಾರೆ. ಇದನ್ನು ತಡೆಯಲು ಗ್ರಾಮದಲ್ಲಿ ಪೊಲೀಸರಿಗೆ ದೂರು ನೀಡಿದರೆ ರಾಜಿ ಸಂಧಾನ ನಡೆಸಿ ಬಿಡುಗಡೆ ಮಾಡುತ್ತಾರೆ. ಇದರಿಂದ ದುಶ್ಚಟಗಳು ಹೆಚ್ಚಾಗಿದೆ. ಗಾಂಜಾ ಮಾರಾಟವೂ ನಡೆಯುತ್ತಿದೆ,’ ಎಂದು ಸಭೆಗೆ ಬಂದಿದ್ದ ಗಸ್ತು ಸದಸ್ಯರು ದೂರಿದರು. 

“ಸಿಂಗನಾಯಕನಹಳ್ಳಿಯ ಯಡಿಯೂರಪ್ಪ ಬಡಾವಣೆಯಲ್ಲಿ ಹಣದಾಸೆಗಾಗಿ ಅಪರಿಚತರಿಗೆಲ್ಲ ಬಾಡಿಗೆ ಮನೆ ನೀಡಲಾಗುತ್ತಿದೆ. ಈ ಭಾಗದಲ್ಲಿ ಕಳ್ಳತನಗಳು ಹೆಚ್ಚಾಗುತ್ತಿವೆ. ಗಾಂಜಾ ಮಾರಾಟ ನಡೆಯುತ್ತಿದೆ. ಮಹಿಳೆಯರು ಮಕ್ಕಳು ರಾತ್ರಿ ಸಮಯ ಓಡಾಡಲು ಸಾಧ್ಯವಾಗುತ್ತಿಲ್ಲ. ಇಲ್ಲಿಗೆ ಬಾಡಿಗೆ ಬರುವವರ ಬಗ್ಗೆ ದಾಖಲೆ ಸಂಗ್ರಹಿಸಿ ನಿಗಾ ಇಡಬೇಕು,’ ಎಂದು ಸದಸ್ಯರು ಮನವಿ ಮಾಡಿದರು.  

ಬುಲೆಟ್‌ ಸೌಂಡ್‌ ಸಹಿಸಲು ಅಸಾಧ್ಯ: ಇತ್ತೀಚೆಗೆ ರಾಜಾನುಕುಂಟೆ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ ಬುಲೇಟ್‌ ಬೈಕ್‌ಗಳ ಹಾವಳಿ ಜಾಸ್ತಿಯಾಗಿದೆ. ಹಲವು ಯುವರು ತಮ್ಮ ಬೈಕ್‌ನ ಸೈಲೆನ್ಸರ್‌ ಅಲ್ಟರೇಷನ್‌ ಮಾಡಿಸಿಕೊಂಡು ಓಡಾಡುತ್ತಿದ್ದಾರೆ. ಹೀಗಾಗಿ ವಿಪರೀತ ಶಬ್ಧವಾಗುತ್ತಿದೆ. ಹಿರಿಯ ನಾಗರಿಕರಿಗೆ ಇದರಿಂದ ತೊಂದರೆಯಾಗುತ್ತಿದೆ. ಇಂತಹವರ ವಿರುದ್ದ ಕ್ರಮ ತೆಗೆದುಕೊಳ್ಳಿ,’ ಎಂದು ನಾಗರಿಕರು ಗಸ್ತು ಸಭೆಯಲ್ಲಿ ಒತ್ತಾಯಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next