Advertisement

ಕುಂದಾಪುರ: ನಗರದ ರಸ್ತೆಗಳು ಹೊಂಡಮಯ

09:24 AM Nov 28, 2022 | Team Udayavani |

ಕುಂದಾಪುರ: ಪುರಸಭೆ ವ್ಯಾಪ್ತಿಯಲ್ಲಿ ನಗರದ ಹಾಗೂ ನಗರದ ಒಳಗಿನ ರಸ್ತೆಗಳಲ್ಲಿ ಹೊಂಡ ಗುಂಡಿ ತುಂಬಿದ್ದು ಜನ ಪುರಸಭೆಗೆ ಶಾಪ ಹಾಕುತ್ತಿದ್ದಾರೆ. ನಗರದ ಪ್ರಮುಖ ರಸ್ತೆಯಲ್ಲಿಯೇ ಅಲ್ಲಲ್ಲಿ ಬಿದ್ದ ಹೊಂಡವನ್ನು ಸರಿಪಡಿಸುವ ತುರ್ತು ಇನ್ನೂ ಪುರಸಭೆಗೆ ಕಂಡುಬಂದಿಲ್ಲ. ಪುರಸಭೆ ಕಚೇರಿಗೆ ಅನತಿ ದೂರದಲ್ಲಿ ಇರುವ ಪನ್ನೀರ್‌ ಜುವೆಲರ್ಸ್‌ ಬಳಿ ಮುಖ್ಯರಸ್ತೆ ಹಾಗೂ ಕಾಂಕ್ರೀಟ್‌, ಡಾಮರು ನಡುವಿನ ಕಾಮಗಾರಿ ವ್ಯತ್ಯಾಸ ದಿಂದ ಬಿದ್ದ ಹೊಂಡದಿಂದಾಗಿ ದಿನಕ್ಕೆ ನಾಲ್ಕು$R ಅಪಘಾತಗಳು ಸಂಭವಿಸುತ್ತಿವೆ. ಆದರೆ ಸಂಬಂಧಪಟ್ಟವರು ಯಾರೂ ಮಾತನಾಡುತ್ತಿಲ್ಲ. ಇಂತದ್ದು ಒಂದೆರಡಲ್ಲ, ಹತ್ತಾರಿವೆ, ನೂರೆಂಟಿವೆ. ಆದರೆ ಆಡಳಿತ ವ್ಯವಸ್ಥೆ ಗಪ್‌ಚುಪ್‌!

Advertisement

ಎಲ್ಲೆಲ್ಲಿ

ಜೆಎಲ್‌ಬಿ ವಾರ್ಡ್‌, ನಾನಾಸಾಹೇಬ್‌ ವಾರ್ಡ್‌, ಮದ್ದುಗುಡ್ಡೆ ವಾರ್ಡ್‌, ಫೆರ್ರಿ ವಾರ್ಡ್‌, ಸೆಂಟ್ರಲ್‌ ವಾರ್ಡ್‌, ಚಿಕ್ಕನ್‌ಸಾಲ್‌ ವಾರ್ಡ್‌, ಚರ್ಚ್‌ರೋಡ್‌ ವಾರ್ಡ್‌, ವೆಸ್ಟ್‌ ಬ್ಲಾಕ್‌ ವಾರ್ಡ್‌, ಈಸ್ಟ್‌ ಬ್ಲಾಕ್‌ ವಾರ್ಡ್‌ ಮೊದಲಾದ ಎಲ್ಲ ವಾರ್ಡ್‌ಗಳಲ್ಲಿ ರಸ್ತೆ ಹೊಂಡ ಕಣ್ಣಿಗೆ ರಾಚುವಂತಿದೆ. ವಾಹನಗಳು ಅಪಘಾತಕ್ಕೆ ಈಡಾಗುವಂತಿದೆ. ಜೆಎಲ್‌ಬಿ ರಸ್ತೆ, ಭಂಡಾರ್‌ ಕಾರ್ಸ್‌ ಕಾಲೇಜು ಹಿಂಬದಿಯ ರಸ್ತೆ, ಎಲ್‌ಐಸಿ ರಸ್ತೆ, ವ್ಯಾಸರಾಜ ಮಠದ ಬಳಿಯ ರಸ್ತೆ, ವೆಸ್ಟ್‌ಬ್ಲಾಕ್‌ ರೋಡ್‌, ಒಂಬತ್ತುದಂಡಿಗೆ ರಸ್ತೆ, ಸೂರ್ನಳ್ಳಿ ರಸ್ತೆ, ಮದ್ದುಗುಡ್ಡೆ ರಸ್ತೆ, ರಿಂಗ್‌ರೋಡ್‌, ಅಂಬೇಡ್ಕರ್‌ ಭವನ ಬಳಿಯ ತಿರುವು, ಕೋಡಿ ರಸ್ತೆಗಳು ಹೀಗೆ ಬಹುತೇಕ ರಸ್ತೆಗಳಲ್ಲಿ ಹೊಂಡ ಪುರಸಭೆ ಆಡಳಿತವನ್ನು ಅಣಕಿಸುತ್ತಿದೆ.

ಸಮಸ್ಯೆ

Advertisement

ಯುಜಿಡಿ ಯೋಜನೆ ಸಮಸ್ಯೆಗೆ ಕಾರಣ ಎಂದು ಬಿಂಬಿಸಲಾಗುತ್ತದೆ. ಅಸಲಿ ಇದು ಸ್ವಲ್ಪ ಸತ್ಯವೂ ಹೌದು. ಏಕೆಂದರೆ ಹೊಚ್ಚ ಹೊಸದಾಗಿ ಲಕ್ಷಾಂತರ ರೂ., ಕೋಟ್ಯಂತರ ರೂ. ಖರ್ಚು ಮಾಡಿ ಕಾಂಕ್ರೀಟ್‌ ಹಾಕಿದ ಕೆಲವೇ ತಿಂಗಳಲ್ಲಿ ನಟ್ಟ ನಡುವಿನಿಂದ ರಸ್ತೆಯನ್ನು ಪೈಪ್‌ಲೈನ್‌ಗಾಗಿ ಅಗೆಯಲಾಗಿತ್ತು. ಅದಾದ ಬಳಿಕ ಬೇರೆ ಬೇರೆ ಯೋಜನೆಗಳಿಗೆ ಇದೇ ಮಾದರಿಯಲ್ಲಿ ರಸ್ತೆ ಅಗೆತ ನಡೆಯಿತು. ಅದನ್ನು ಪೂರ್ಣ ಸಮಗೊಳಿಸುವ ಪ್ರಯತ್ನ ನಡೆಯಲೇ ಇಲ್ಲ.

ಇಂಟರ್‌ಲಾಕ್‌

ಪುರಸಭೆ ವ್ಯಾಪ್ತಿಯಲ್ಲಿ ಇಂಟರ್‌ಲಾಕ್‌ ಎನ್ನುವುದು ದುಡ್ಡಿನ ಮರ ಇದ್ದಂತೆ. ಹೊಸದಾಗಿ ಇಂಟರ್‌ಲಾಕ್‌ ಅಳವಡಿಕೆ ಸಂದರ್ಭ ತೆಗೆದ ಹಳೆ ಇಂಟರ್‌ಲಾಕ್‌ಗಳನ್ನು ಏನು ಮಾಡಲಾಗುತ್ತದೆ ಎನ್ನುವುದು ಯಕ್ಷಪ್ರಶ್ನೆ. ಪದೇ ಪದೇ ಇಂಟರ್‌ಲಾಕ್‌ ಅಳವಡಿಸಿದ ಜಾಗದಲ್ಲೇ ಮತ್ತೆ ಅಳವಡಿಸುವುದು ಯಾಕೆ ಎನ್ನುವುದು ಉತ್ತರ ಸಿಗದ ಪ್ರಶ್ನೆ.

ಲಭ್ಯ ಅನುದಾನ ದುರಸ್ತಿಗೆ ಇಡಲಾಗಿದೆ: ನಗರೋತ್ಥಾನ ಯೋಜನೆಯಲ್ಲಿ ಮಂಜೂರಾಗಿ ದೊರೆತ ಅನುದಾನದಲ್ಲಿ ಲಭ್ಯ ಅನುದಾನವನ್ನು ರಸ್ತೆ ದುರಸ್ತಿಗೆ ಇಡಲಾಗಿದೆ. ಯುಜಿಡಿಯವರಿಗೆ ರಸ್ತೆ ದುರಸ್ತಿಗೆ ಮೊದಲೇ ಪೈಪ್‌ಲೈನ್‌ ಕೆಲಸ ಮುಗಿಸುವಂತೆ ಸೂಚನೆ ನೀಡಲಾಗಿದೆ. -ವೀಣಾ ಭಾಸ್ಕರ ಮೆಂಡನ್‌, ಅಧ್ಯಕ್ಷೆ, ಪುರಸಭೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next