Advertisement

ನಗರದ ಕೆರೆಗಳು ಕುಡಿಯುವ ನೀರಿನ ಪರ್ಯಾಯ ಮೂಲವಲ್ಲ !

06:26 PM Mar 27, 2023 | Team Udayavani |

ಮಹಾನಗರ: ನಗರ ವ್ಯಾಪ್ತಿಯಲ್ಲಿ ಜೀರ್ಣಾವಾಸ್ಥೆಯಲ್ಲಿದ್ದ ಹಲವು ಕೆರೆಗಳನ್ನು ಮಂಗಳೂರು ಸ್ಮಾರ್ಟ್‌ ಸಿಟಿ, ಮುಡಾ ವತಿಯಿಂದ ಕೋಟ್ಯಂತರ ರೂಪಾಯಿ ವೆಚ್ಚಮಾಡಿ ಅಭಿವೃದ್ಧಿ ಪಡಿಲಾಗಿದೆ. ಆದರೆ ಈ ಕೆರೆಗಳು ಕುಡಿಯುವ ನೀರಿನ ಪರ್ಯಾಯ ಮೂಲವಾಗಿ ಬಳಕೆಯಾಗುವ ಸಾಧ್ಯತೆ ಕಡಿಮೆ. ಪಾಲಿಕೆ ಆಡಳಿತವೂ ಈ ನಿಟ್ಟಿನಲ್ಲಿ ಚಿಂತನೆ ಮಾಡಿಲ್ಲ.

Advertisement

ಈ ಬಾರಿ ಬೇಸಗೆಯಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಬಿಗಡಾಯಿಸುವ ಹಂತಕ್ಕೆ ತಲುಪುವ ಸಾಧ್ಯತೆಗಳು ದಟ್ಟವಾಗಿದೆ. ಆದ್ದ ರಿಂದ ಜಿಲ್ಲಾಡಳಿತ ಪರ್ಯಾಯ ನೀರಿನ ಮೂಲಗಳನ್ನು ಸಿದ್ಧವಾಗಿ ಟ್ಟುಕೊಳ್ಳಲು ಈಗಾಗಲೇ ಸೂಚನೆ ನೀಡಿದೆ. ಬೇಸಗೆ ಮಳೆಯಲ್ಲಿ ವಿಳಂಬವಾದರೆ ಮಂಗಳೂರು ನಗರಕ್ಕೂ ನೀರು ಪೂರೈಕೆಯಲ್ಲಿ ರೇಷನಿಂಗ್‌ ವ್ಯವಸ್ಥೆ ಅಳವಡಿಸುವ ಸಾಧ್ಯತೆಯೂ ಇದೆ. ಇಂತಹ ಸಂದರ್ಭದಲ್ಲಿ ಬಾವಿ, ಕೆರೆಗಳ ನೀರನ್ನು ಪೂರೈಕೆ ಮಾಡುವುದು ಅನಿವಾರ್ಯವಾಗುತ್ತದೆ. ಆದರೆ ನಗರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಕೆರೆಗಳಲ್ಲಿ ನೀರು ತುಂಬಿದ್ದರೂ ಉಪ ಯೋಗಕ್ಕೆ ಇಲ್ಲ ಎನ್ನುವಂತಾಗಿದೆ.

ಕೆರೆಗಳ ನೀರನ್ನು ಕುಡಿಯುವುದಕ್ಕೆ ಉಪಯೋಗಿಸುವ ಆಲೋಚನೆಯನ್ನೇ ಪಾಲಿಕೆ ಹೊಂದಿಲ್ಲ. ಕಾರಣ ನಗರ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳ ಮೂಲಕ ಸಮಗ್ರವಾಗಿ ನೀರನ್ನು ಪೂರೈಸುತ್ತಿ ರುವಾಗ ಕೆರೆಗಳಿಂದ ನೀರು ತೆಗೆದು ಪೂರೈಸಲು ಅವಕಾಶವಿಲ್ಲ. ಬೋರ್‌ವೆಲ್‌ ಕೊರೆಯಿಸುವುದು ಕೂಡ ನಿಷೇಧ. ಗ್ರಾಮೀಣ ಭಾಗದ ಲ್ಲಾದರೆ ಈ ರೀತಿ ಪರ್ಯಾಯ ಮೂಲಗಳಿಂದ ನೀರು ಸರಬರಾಜು ಮಾಡ ಬಹುದಾಗಿದೆ. ಕೆರೆ ಸುತ್ತಮುತ್ತಲಿನ ಪ್ರದೇಶದ ಅಂತರ್ಜಲ ಹೆಚ್ಚಳ, ಪರಿಸರ ಸಂರಕ್ಷಣೆ, ಒತ್ತುವರಿ ಆಗದಂತೆ ತಡೆಯುವುದೇ ಕೆರೆ ಅಭಿವೃದ್ಧಿ ಉದ್ದೇಶ ಎನ್ನುತ್ತಾರೆ ಪಾಲಿಕೆ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ.

ಕೆರೆಗಳಲ್ಲಿರುವುದು ಶುದ್ಧ ನೀರಲ್ಲ ನಗರದ ಬಹುತೇಕ ಕೆರೆಗಳಲ್ಲಿ ಇರುವುದು ಶುದ್ಧ ನೀರಲ್ಲ. ಗುಜ್ಜರ ಕೆರೆಗೆ ಒಳಚರಂಡಿ ನೀರು ಸೇರುವುದನ್ನು ತಡೆಯುವ ನಿಟ್ಟಿನಲ್ಲಿ ಸಾಕಷ್ಟು ಕ್ರಮ ವಹಿಸಲಾಗಿದ್ದರೂ ಅದು ಸಾಧ್ಯವಾಗಿಲ್ಲ. ಒಳಚರಂಡಿ ನೀರು ಸೇರುತ್ತಿರುವ ಪರಿಣಾಮ, ಪರೀಕ್ಷೆಗೆ ಒಳಪಡಿಸಿದಾಗ ನೀರಿನಲ್ಲಿ ಮಾನವರಿಗೆ ಅಪಾಯಕಾರಿ ಯಾದ ಅಂಶಗಳು ಪತ್ತೆಯಾಗಿವೆ. ಉಳಿದಂತೆ ಇತರ ಕೆರೆಗಳ ನೀರೂ ಒಂದಲ್ಲ ಒಂದು ಕಾರಣದಿಂದ ಕಲುಷಿತಗೊಂಡಿದೆ. ಒಂದು ವೇಳೆ ಪೂರೈಸಬೇಕಾದ ಸಂದರ್ಭ ಬಂದರೂ, ಶುದ್ಧೀಕರಣ ಘಟಕಗಳನ್ನು ಅಳವಡಿಸದೆ ನೀರು ಸರಬರಾಜು ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

ನೀರು ಸಂಸ್ಕರಣೆ ಘಟಕ ಸ್ಥಾಪನೆ ಸದ್ಯಕ್ಕಿಲ್ಲ
ನಗರದಲ್ಲಿ ಅಭಿವೃದ್ಧಿ ಮಾಡಲಾಗಿರುವ ಕೆರೆಗಳ ನೀರನ್ನು ಕುಡಿಯಲು ಬಳಕೆ ಮಾಡುವ ನಿಟ್ಟಿನಲ್ಲಿ ಪಾಲಿಕೆ ಯಾವುದೇ ಚಿಂತನೆ ನಡೆಸಿಲ್ಲ. ನೀರು ಸಂಸ್ಕರಣೆ ಘಟಕಗಳನ್ನು ನಿರ್ಮಿಸುವ ಉದ್ದೇಶವೂ ಸದ್ಯಕ್ಕಿಲ್ಲ ಇಲ್ಲ.
– ಚನ್ನಬಸಪ್ಪ ಕೆ., ಮನಪಾ ಆಯುಕ್ತ

Advertisement

ನೀರಿಗಾಗಿ ಬಾವಿಗಳ ಅಭಿವೃದ್ಧಿ 
ಕುಡಿಯುವ ನೀರಿಗಾಗಿ ಪ್ರತ್ಯೇಕ ಬಾವಿಗಳನ್ನು ಗುರುತಿಸಲಾಗಿದೆ. ಕೆಲವು ವರ್ಷಗಳ ಹಿಂದೆಯೂ ತುಂಬೆಯಲ್ಲಿ ನೀರು ಕಡಿಮೆಯಾಗಿ ರೇಷನಿಂಗ್‌ ಮಾಡಿದ ಸಂದರ್ಭದಲ್ಲಿ ಬಾವಿಗಳಿಂದ ನೀರು ತೆಗೆದು ಟ್ಯಾಂಕರ್‌ ಮೂಲಕ ಪೂರೈಸಲಾಗಿದೆ. ಬಾವಿಗಳ ನೀರನ್ನು ಟೆಸ್ಟ್‌ ಮಾಡಿಸಿಯೇ ಪೂರೈಸಲಾಗುತ್ತಿದೆ. ಈ ಬಾರಿಯೂ ಅಂತಹ ಸಂದರ್ಭ ಬಂದರೆ ಬಾವಿಗಳ ಮೊರೆ ಹೋಗಲು ಮನಪಾ ಅಧಿಕಾರಿಗಳು ಉದ್ದೇಶಿಸಿದ್ದಾರೆ.

ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next