Advertisement

ಪುರಭವನದ ಆವರಣ ಡಂಪಿಂಗ್‌ ಯಾರ್ಡ್‌?

06:25 PM Feb 02, 2023 | Team Udayavani |

ಮಹಾನಗರ: ನಗರದ ಕುದ್ಮುಲ್‌ ರಂಗರಾವ್‌ ಪುರಭವನದ ಆವರಣ ಅಕ್ಷರಶಃ ಡಂಪಿಂಗ್‌ ಯಾರ್ಡ್‌ ಅಗಿ ಪರಿವರ್ತನೆಯಾಗಿದ್ದು, ದಿನದಿಂದ ದಿನಕ್ಕೆ ಬಂದು ಬೀಳುವ ತ್ಯಾಜ್ಯದ ಪ್ರಮಾಣ ಹೆಚ್ಚಾಗುತ್ತಿದೆ. ಪರಿಣಾಮ ಮಿನಿ ಪಚ್ಚನಾಡಿಯಾಗಿ ಪರಿವರ್ತನೆಯಾಗಿದೆ.

Advertisement

ಪುರಭವನದ ನಗರದ ಪ್ರಮುಖ ಸಭಾಂಗಣಗಳಲ್ಲಿ ಒಂದಾಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಸರಕಾರಿ, ಖಾಸಗಿ ಕಾರ್ಯಕ್ರಮಗಳು ಇಲ್ಲಿ ಆಯೋಜನೆಗೊಳ್ಳುತವೆ. ಇಂತಹ ಕಾರ್ಯಕ್ರಮಗಳಲ್ಲಿ ದೇಶ ವಿದೇಶಗಳಿಂದ ಬರುವ ಜನರು ಪಾಲ್ಗೊಳ್ಳುವುದರಿಂದ, ಆವರಣದಲ್ಲಿರುವ ತ್ಯಾಜ್ಯ ರಾಶಿ ಅವರಲ್ಲಿ ನಗರದ ಸೌಂದರ್ಯದ ಬಗ್ಗೆ ತಪ್ಪು ಕಲ್ಪನೆ ಮೂಡಿಸಬಹುದು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಈ ಮೊದಲು ನಗರದ ವಿವಿಧೆಡೆ ಬೀದಿ ಬಿದಿ ವ್ಯಾಪಾರಿಗಳನ್ನು ಕಾರ್ಯಾಚರಣೆ ಮೂಲಕ ತೆರವುಗೊಳಿಸಿ, ಅವರ ಗೂಡಂಗಡಿ ಸಹಿತ ವಿವಿಧ ವಸ್ತುಗಳನ್ನು ಪುರಭವನದ ಆವರಣದಲ್ಲಿ ತಂದು ಹಾಕುತ್ತಿದ್ದರು. ಇದೀಗ ಅವುಗಳೊಂದಿಗೆ ಇತರ ವಸ್ತುಗಳು ಬಂದು ಸೇರಿವೆ. ಶೀಘ್ರ ಟೆಂಡರ್‌ ಕರೆದು ಇವುಗಳನ್ನು ತೆರವುಗೊಳಿಸುವ ಆವಶ್ಯಕತೆಯಿದೆ.

ಏನೇನು ತ್ಯಾಜ್ಯಗಳಿವೆ
ಪುರಭವನದಲ್ಲಿ ಆಯೋಜನೆಗೊಳ್ಳುವ ಕಾರ್ಯಕ್ರಮಗಳ ಊಟೋಪಚಾರದ ತ್ಯಾಜ್ಯವನ್ನು ವಿಲೇವಾರಿ ಮಾಡುವ ಬದಲು ಆವರಣದಲ್ಲೇ ಸುರಿಯಲಾಗುತ್ತದೆ. ಸ್ಟೇಟ್‌ ಬ್ಯಾಂಕ್‌ನ ಸರ್ವಿಸ್‌ ಬಸ್‌ ನಿಲ್ದಾಣವನ್ನು ಮರು ನಿರ್ಮಾಣ ಮಾಡುವ ವೇಳೆ ಅಲ್ಲಿದ್ದ ಕಬ್ಬಿಣದ ಬೀಮ್‌ಗಳನ್ನು ತಂದು ರಾಶಿ ಹಾಕಲಾಗಿದೆ. ಉಳಿದಂತೆ ಪೊಲೀಸ್‌ ಇಲಾಖೆಗೆ ಸಂಬಂಧಪಟ್ಟ ಬ್ಯಾರಿಕೇಡ್‌ ಗಳು, ಪಾಲಿಕೆಯ ವಿವಿಧೆಡೆಯ ಬೀದಿ ದೀಪ ಕಂಬಗಳ ರಾಶಿ, ಕಾಮಗಾರಿ ವೇಳೆ ತೆರವುಗೊಳಿಸಲಾದ ಸ್ಮಾರ್ಟ್‌ ಪೋಲ್‌, ಟಯರ್‌ಗಳ ರಾಶಿ, ತುಂಡಾದ ಇಂಟರ್‌ ಲಾಕ್‌ಗಳ ರಾಶಿ, ವಿದ್ಯುತ್‌ ಕೇಬಲ್‌ ಗಳು ಹೀಗೆ ಸಾಕಷ್ಟು ವಸ್ತುಗಳನ್ನು ತಂದು ಸುರಿಯಾಗಿದೆ.

ಪಾರ್ಕಿಂಗ್‌ಗೆ ಸ್ಥಳದ ಕೊರತೆ
ಪುರಭವನದ ಪಾರ್ಕಿಂಗ್‌ ಸ್ಥಳದಲ್ಲೇ ಈ ತಾಜ್ಯ, ಗುಜಿರಿ ವಸ್ತುಗಳನ್ನು ತಂದು ಹಾಕಿರುವುದರಿಂದ ಪಾರ್ಕಿಂಗ್‌ಗೂ ಸ್ಥಳಾವಕಾಶ ವಿಲ್ಲದಂತಾಗಿದೆ. ದ್ವಿಚಕ್ರ ವಾಹನಗಳ ನಿಲುಗಡೆಗೆ ಮೀಸಲಾಗಿರಿಸಿರುವ ಸ್ಥಳದಲ್ಲೇ ಗುಜರಿ ವಸ್ತುಗಳನ್ನು ರಾಶಿ ಹಾಕಿದ್ದು, ಇದರಿಂದ ಸವಾರರು ಬೇರೆ ಕಡೆಗಳಲ್ಲಿ ವಾಹನ ನಿಲ್ಲಿಸುವಂತಾಗಿದೆ. ಪಾರ್ಕಿಂಗ್‌ಗೆ ಸ್ಥಳದ ಕೊರತೆ ಉಂಟಾಗುತ್ತಿದೆ.

Advertisement

ಹಾಕಲು ಬೇರೆ ಸ್ಥಳವಿಲ್ಲ!
ಪಾಲಿಕೆ ವ್ಯಾಪ್ತಿಯಲ್ಲಿ ಗುಜರಿ ವಸ್ತುಗಳನ್ನು ಹಾಕಲು ಸ್ಥಳದ ಕೊರತೆಯಿದೆ ಎನ್ನುತ್ತಾರೆ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು. ಈ ಮೊದಲು ಪಾಲಿಕೆ ಕಟ್ಟಡದ ಹಿಂಭಾಗದಲ್ಲೇ ಇಂತಹ ಗುಜರಿ ವಸ್ತುಗಳನ್ನು ತಂದು ಸುರಿಯಲಾಗುತ್ತಿತ್ತು. ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಪಾಲಿಕೆ ಆವರಣದಲ್ಲಿಯೇ ತಂದು ಸುರಿಯಲಾಗುತ್ತಿದೆ.

ತೆರವಿಗೆ ಕ್ರಮ
ಪುರಭವನದ ಆವರಣದಲ್ಲಿ ಈ ಹಿಂದೆ ತಂದು ಹಾಕಿದ್ದ ತ್ಯಾಜ್ಯ ವಸ್ತುಗಳನ್ನು ತೆರವುಗೊಳಿಸಲಾಗಿತ್ತು. ಇದೀಗ ಮತ್ತೆ ತಂದು ತಂದು ಹಾಕಿರುವುದರಿಂದ ಕಮಿಷನರ್‌ ಜತೆ ಮಾತನಾಡಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
ಜಯಾನಂದ ಅಂಚನ್‌, – ಮೇಯರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next