Advertisement
ಗೇಲ್ ಗ್ಯಾಸ್ ಲಿ. ವತಿಯಿಂದ ಮಂಗಳೂರು ಸಹಿತ ದೇಶದ 129 ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳಲಿರುವ “ಸಿಟಿ ಗ್ಯಾಸ್’ ಅಡುಗೆ ಅನಿಲ ಪೂರೈಕೆ ಯೋಜನೆಗೆ ಪ್ರಧಾನಿ ಮೋದಿ ಅವರು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಗುರುವಾರ ಸಂಜೆ 4 ಗಂಟೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮ ಯೋಜನೆ ಕಾರ್ಯರೂಪಕ್ಕೆ ಬರುವ ಎಲ್ಲ ಜಿಲ್ಲೆಗಳಲ್ಲಿ ಏಕಕಾಲಕ್ಕೆ ನೇರ ಪ್ರಸಾರವಾಗಲಿವೆ. ಜತೆಗೆ ದೇಶದ 123 ಜಿಲ್ಲೆಗಳಲ್ಲಿ ಸಿಟಿ ಗ್ಯಾಸ್ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದ ಬಿಡ್ಡಿಂಗ್‌ಗೆ ಚಾಲನೆ ನೀಡುವ ಕಾರ್ಯಕ್ರಮ ಕೂಡ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಗರದ ಪುರಭವನದಲ್ಲಿ ಪ್ರತ್ಯೇಕ ಸಮಾರಂಭ ಆಯೋಜಿಸಲಾಗಿದೆ.
ಭಾರತ ಸರಕಾರದ ಅಧೀನಕ್ಕೆ ಒಳಪಟ್ಟ ಗೇಲ್ (ಇಂಡಿಯಾ) ಲಿ. ವತಿಯಿಂದ ಕೊಚ್ಚಿಯಿಂದ ಮಂಗಳೂರು ವರೆಗೆ ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಕಾರ್ಯ ಈಗಾಗಲೇ ಮುಗಿದಿದೆ. ಮಂಗಳೂರಿನ ಎಂಸಿಎಫ್‌ಗೆ ನೈಸರ್ಗಿಕ ಅನಿಲ ಪೂರೈಸಲು ಪೈಪ್‌ಲೈನ್ ಸಾಗಿ ಬರಲಿದ್ದು, ಬಂಟ್ವಾಳ ಹಾಗೂ ಮಂಗಳೂರು ತಾಲೂಕಿನ ಸುಮಾರು 16 ಹಳ್ಳಿಗಳ ವ್ಯಾಪ್ತಿಯಲ್ಲಿ 35 ಕಿ.ಮೀ. ಉದ್ದದಲ್ಲಿ ಸಾಗಲಿದೆ. ಇದೇ ಅನಿಲವನ್ನು ಮಂಗಳೂರಿನ ಜನರಿಗೂ ಕೊಳವೆ ಮೂಲಕ ನೀಡಲು ಯೋಜನೆ ರೂಪಿಸಲಾಗುತ್ತಿದೆ. ಪೈಪ್‌ಲೈನ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ.
Related Articles
Advertisement
ಮೊದಲ ಹಂತ; ಸುರತ್ಕಲ್ ಭಾಗದಲ್ಲಿ ಅನುಷ್ಠಾನಪ್ರಾಯೋಗಿಕ ಯೋಜನೆ ಅನ್ವಯ 200ರಿಂದ 500ರಷ್ಟು ಮನೆ-ಉದ್ಯಮಕ್ಕೆ ನಳ್ಳಿ ಮೂಲಕ ಗ್ಯಾಸ್ ವಿತರಿಸುವ ಯೋಜನೆ ಇರಿಸಲಾಗಿದೆ. ಸುರತ್ಕಲ್ ಭಾಗದಲ್ಲಿರುವ ಎಂಸಿಎಫ್ ಅಥವಾ ಎಂಆರ್‌ಪಿಎಲ್ ಟೌನ್‌ಶಿಪ್‌ನ ವ್ಯಾಪ್ತಿಯಲ್ಲಿ ಪೈಪ್‌ಲೈನ್ ಅಳವಡಿಸಲು ಉದ್ದೇಶಿಸಲಾಗಿದೆ. ಕತಾರ್‌ನಿಂದ ಎಲ್‌ಎನ್‌ಜಿಯು ಹಡಗಿನ ಮೂಲಕ ಗೇಲ್‌ನ ಕೊಚ್ಚಿನ್ ಟರ್ಮಿನಲ್‌ಗೆ ಬರುತ್ತಿದೆ. ಇದನ್ನು “ಎಲ್‌ಪಿಜಿ ಬುಲೆಟ್’ ಇದ್ದ ಹಾಗೆ. “ಎಲ್‌ಎನ್‌ಜಿ ಬುಲೆಟ್’ ಮೂಲಕ ಹಡಗಿನಲ್ಲಿ ಮಂಗಳೂರಿಗೆ ತಂದರೆ ಸುಮಾರು 1,000 ಸಂಪರ್ಕಕ್ಕೆ ಒಂದು ತಿಂಗಳಿಗೆ ಬರಲಿದೆ. ಅಥವಾ ರಸ್ತೆಯ ಮೂಲಕ ಎಲ್‌ಪಿಜಿ ಟ್ಯಾಂಕರ್‌ನಂತೆ “ಕ್ರಯೋಜನಿಕ್ ಟ್ಯಾಂಕರ್’ನಲ್ಲಿ ಮಂಗಳೂರಿಗೆ ತರುವ ಸಾಧ್ಯತೆಯೂ ಇದೆ. ಹೀಗೆ ಮಂಗಳೂರಿಗೆ ಬರುವ ಎಲ್‌ಎನ್‌ಜಿಯನ್ನು ಗ್ಯಾಸ್ ಆಗಿ ಪರಿವರ್ತಿಸಲು ಕೊಚ್ಚಿ ಟರ್ಮಿನಲ್ ರೀತಿ ಪುಟ್ಟ ಟರ್ಮಿನಲ್ ಕೂಡ ಮಂಗಳೂರಿನಲ್ಲಿ ನಿರ್ಮಾಣವಾಗಲಿದೆ. ಅಲ್ಲಿಂದ ವಾಹನಗಳ ಪೂರೈಕೆ (ಸಿಎನ್‌ಜಿ), ಗೃಹ ಬಳಕೆ (ಪಿಎನ್‌ಜಿ) ವಾಣಿಜ್ಯ ಬಳಕೆ ಹಾಗೂ ಕೈಗಾರಿಕೆಗಳ ಬಳಕೆ ಎಂಬುದಾಗಿ ಬೇರ್ಪಡಿಸಿ ಗೇಲ್ ಸಂಸ್ಥೆಯು ಅನಿಲ ಪೂರೈಕೆ ಮಾಡಲಿದೆ.