ಮಂಗಳೂರು ನಗರದ ಸಿಟಿ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಗೋಳು ಕೇಳುವವರಿಲ್ಲ. ಹೆಚ್ಚಿನ ಸಿಟಿ ಬಸ್‌ಗಳಲ್ಲಿ ಟಿಕೆಟ್ ನೀಡದಿದ್ದರೆ, ಸಂಜೆ ವೇಳೆ ಅನೇಕ ಬಸ್‌ಗಳಲ್ಲಿ ಪ್ರಯಾಣಿಕರು ಫುಟ್ಬೋರ್ಡ್‌ನಲ್ಲಿಯೇ ನಿಂತು ಪ್ರಯಾಣಿಸುತ್ತಾರೆ. ಇನ್ನು, ಬಸ್ ಚಾಲಕರು ಕೂಡ ಅಜಾಗರೂಕತೆಯಿಂದ ಪೈಪೋಟಿಗೆ ಬಿದ್ದಂತೆ ಬಸ್ ಚಲಾಯಿಸುತ್ತಿದ್ದಾರೆ. ಹೀಗಿರುವಾಗ ಸುರಕ್ಷೆಯ ದೃಷ್ಟಿಯಿಂದ ಸಿಟಿ ಬಸ್‌ಗಳಲ್ಲಿಯೂ ಸಿ.ಸಿ. ಕೆಮರಾ ಅಳವಡಿಸಬೇಕಿದೆ.
ರಾತ್ರಿ ಹತ್ತು ಗಂಟೆ ಬಳಿಕವೂ ನಗರದ ಸ್ಟೇಟ್ಬ್ಯಾಂಕ್‌ನಿಂದ ಪಾವೂರು, ತಲಪಾಡಿ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ಸಿಟಿ ಬಸ್ ತೆರಳುತ್ತಿದ್ದು, ಈ ವೇಳೆ ಪ್ರಯಾಣಿಕರಿಗೆ ಹೆಚ್ಚಿನ ಭದ್ರತೆಯ ಆವಶ್ಯಕತೆ ಇದೆ. ಮಂಗಳೂರು ನಗರದಲ್ಲಿ ಒಟ್ಟು 360 ಖಾಸಗಿ ಸಿಟಿ ಬಸ್‌ಗಳಿವೆ. ಸ್ಟೇಟ್ಬ್ಯಾಂಕ್‌ನಿಂದ ಕೊನೆಯ ಬಸ್ ಸುಮಾರು 10.20ಕ್ಕೆ ಹೊರಡುತ್ತದೆ. ಪ್ರತೀ ಬಸ್ ದಿನದಲ್ಲಿ ಸರಾಸರಿ 8 ಟ್ರಿಪ್ ಓಡುತ್ತದೆ. ಹೀಗಿದ್ದಾಗ ಬಸ್‌ಗಳಲ್ಲಿ ಭದ್ರತೆಯ ಆವಶ್ಯಕತೆ ಅಗತ್ಯವಾಗಿದೆ.
ಬೆಂಗಳೂರಿನ ಹೆಚ್ಚಿನ ಬಿಎಂಟಿಸಿ ಸಿಟಿ ಬಸ್‌ಗಳಲ್ಲಿ ಸಿಸಿ ಕೆಮರಾಗಳನ್ನು ಹಂತ ಹಂತವಾಗಿ ಅಳವಡಿಸಲಾಗಿದೆ. ಇದರಿಂದ ಅಪಘಾತ ಪ್ರಮಾಣ, ಚಾಲಕ- ನಿರ್ವಾಹಕನ ನಿರ್ಲಕ್ಷತೆ ಕಡಿಮೆಯಾಗಿದೆ. ಜತೆಗೆ ಪ್ರಯಾಣಿಕರ ಜತೆ ನಿರ್ವಾಹಕರ ನಡವಳಿಕೆ ಕೂಡ ಸುಧಾರಿಸಿದೆ.
ಕಾನೂನು ನಿಯಮ ಉಲ್ಲಂಘಿಸುವ ಸಿಟಿ ಬಸ್‌ಗಳ ವಿರುದ್ಧ ಕೆಲವು ದಿನಗಳ ಹಿಂದೆ ಟ್ರಾಫಿಕ್ ಪೊಲೀಸರು ಮತ್ತು ಸಾರಿಗೆ ಇಲಾಖೆ ಕೆಲವು ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿ ದಂಡ ವಿಧಿಸಲಾಗಿತ್ತು. ಆದರೂ, ಮತ್ತದೇ ಅಕ್ರಮಗಳು ಮುಂದುವರಿಯುತ್ತಿವೆ. ಇದನ್ನು ತಡೆಗಟ್ಟಲು ನಗರದಲ್ಲಿ ಸಂಚರಿಸುವ ಸಿಟಿ ಬಸ್‌ಗಳಿಗೂ ಹಂತ ಹಂತವಾಗಿ ಸಿಸಿ ಕೆಮರಾ ಅಳವಡಿಸಬೇಕಿದೆ. •
•••ನವೀನ್ ಭಟ್ ಇಳಂತಿಲ