ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯಿಂದ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯ ಒಂದೊಂದಾಗಿ ಕಸಿದುಕೊಳ್ಳಲಾಗುತ್ತಿದ್ದು, ನಮ್ಮ ಹಕ್ಕುಗಳಿಗೆ ಹೋರಾಡುವ ಸ್ವಾತಂತ್ರ್ಯ ಸಹ ಇಲ್ಲವಾಗಿದೆ. ಈ ದಿಸೆಯಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸುವುದು ಸಿಐಟಿಯು ಹೊಣೆಯಾಗಿದ್ದು, ಕಾರ್ಮಿಕ ಸಂಘಟನೆಗಳು ನಮ್ಮೊಂದಿಗೆ ಒಗ್ಗೂಡಬೇಕಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಸಿ ನರಸಿಂಹಮೂರ್ತಿ ಹೇಳಿದರು.
ನಗರದ ಮಹಿಳಾ ಸಮಾಜದಲ್ಲಿ ನಡೆದ ಸಿಐಟಿಯು 5ನೇ ತಾಲೂಕು ಸಮ್ಮೇಳನದಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿ ಯಾವುದೇ ಪ್ರಗತಿ ಕಂಡಿಲ್ಲ. ನಿರುದ್ಯೋಗ ಸಮಸ್ಯೆ ತೀವ್ರವಾಗುತ್ತಿದೆ. ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಕಾರ್ಪೋರೇಟ್ ವಲಯಕ್ಕೆ ಅಡಿಯಾಳಾಗಿರುವಂತಿದೆ. ಕಾರ್ಮಿಕರಿಗೆ ಇಎಸ್‌ಐ, ಪಿಎಫ್ ಸೌಲಭ್ಯಗಳು ಕಡಿತವಾಗಿದೆ. ಸರ್ಕಾರಗಳು ನೇಕಾರರು ಹಾಗೂ ರೈತರಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿಲ್ಲ ಎಂದು ದೂರಿದರು.
ಸೌಲಭ್ಯ ನೀಡಲು ನಿರ್ಲಕ್ಷ್ಯ: ಅಂಗನವಾಡಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಟಿ. ಲೀಲಾವತಿ ಮಾತನಾಡಿ, ಕೋವಿಡ್ ಸಮಯದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಸೇವೆ ಸಲ್ಲಿಸಿದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಸರ್ಕಾರ ನಂತರ ಸರಿಯಾಗಿ ನಡೆಸಿಕೊಳ್ಳದೇ ನಿರ್ಲಕ್ಷಿಸಿದೆ. ರಾಜ್ಯದಲ್ಲಿ ಬರೀ 28 ಮಂದಿಗೆ ಮಾತ್ರ ಕೋವಿಡ್ ಪರಿಹಾರದ ಹಣ ಬಂದಿದ್ದು, ಇನ್ನು ಹಲವಾರು ಜನರಿಗೆ ಬಂದಿಲ್ಲ. ಅಂಗನವಾಡಿ ನೌಕರರನ್ನು ಮುಷ್ಕರ ಮಾಡದಂತೆ ಎಂದು ಸುತ್ತೋಲೆ ಹೊರಡಿಸಿರುವ ಸರ್ಕಾರ ಅವರಿಗೆ ಸಿಗಬೇಕಾದ ಸೌಲಭ್ಯ ನೀಡಲು ಮಾತ್ರ ನಿರ್ಲಕ್ಷ್ಯ ವಹಿಸುತ್ತಿದೆ ಎಂದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪಿ.ಎ. ವೆಂಕಟೇಶ್ ಮಾತನಾಡಿ, ಸರ್ಕಾರ ಧ್ವಜದ ವಿಚಾರದಲ್ಲಿಯೂ ಸಹ ಕಾರ್ಪೋರೇಟ್ ವಲಯಕ್ಕೆ ಲಾಭ ಮಾಡಿಕೊಡುತ್ತಿದೆ. ಹುಬ್ಬಳ್ಳಿಯ ಬೆಂಗೇರಿಯಲ್ಲಿ ಇಡೀ ದೇಶಕ್ಕೆ ಧ್ವಜ ತಯಾರಿಸಿಕೊಡುವ ಘಟಕವಿದ್ದು, ಗ್ರಾಮೋ ದ್ಯೋಗಕ್ಕೆ ಸಂಚಕಾರ ತಂದಿದೆ ಎಂದರು.
ಮುಂದಿನ ತಿಂಗಳು ಜಿಲ್ಲಾ ಸಮ್ಮೇಳನ: ಮುಂದಿನ ತಿಂಗಳು ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಸಮ್ಮೇಳನ ನಡೆಯಲಿದೆ. ಸಮ್ಮೇಳನದಲ್ಲಿ ಪ್ರಸಕ್ತ ಜನಸಮಾ ನ್ಯರ, ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚೆ, ಹೋರಾಟದ ರೂಪುರೇಷೆ, ಹೊಸ ಸಮಿತಿಗಳ ರಚನೆ ನಡೆಯಲಿವೆ ಎಂದರು.
ಸಿಐಟಿಯು ತಾಲೂಕು ಸಂಚಾಲಕ ರೇಣುಕಾರಾಧ್ಯ, ಪ್ಲೊರೆನ್ಸ್ ಫ್ಲೋರಾ ಕಾರ್ಮಿಕ ಸಂಘದ ಅಧ್ಯಕ್ಷ ಆರ್ ಚಂದ್ರ ತೇಜಸ್ವಿ , ಎಲ್ ಆರ್ ನಳಿನಾಕ್ಷಿ, ಸಂಚಾಲಕ ಎಂ. ಮಂಜುನಾಥ್, ಎಫ್‌ಕೆಎಆರ್‌ಡಿಯು ತಾಲೂಕು ಕಾರ್ಯದರ್ಶಿ ಇನಾಯತ್ ಪಾಷಾ, ಕಾರ್ಯ ದರ್ಶಿ ಸುಮಾ, ಬಿ. ನರೇಶ್ ಕುಮಾರ್, ಮಣೀಶ್ ಶರ್ಮಾ, ಮುಖಂಡ ಸಿ.ಎಚ್. ರಾಮಕೃಷ್ಣ, ರುದ್ರಾರಾಧ್ಯ ಹಾಗೂ ಮತ್ತಿತರರು ಇದ್ದರು.