Advertisement

ಪೌರತ್ವ ತಿದ್ದುಪಡಿ ಮಸೂದೆ ಅಮೆರಿಕದ ಅಧಿಕ ಪ್ರಸಂಗ

09:58 AM Dec 13, 2019 | sudhir |

ಭಾರತದ ಪೌರತ್ವ ತಿದ್ದುಪಡಿ ಮಸೂದೆ ಯಾವ ನೆಲೆಯಲ್ಲೂ ಅಮೆರಿಕದ ಧಾರ್ಮಿಕ ಆಯೋಗಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಬಂಧಿಸಿಲ್ಲ.

Advertisement

ಭಾರೀ ವಿವಾದಕ್ಕೊಳಗಾಗಿರುವ ಪೌರತ್ವ ತಿದ್ದುಪಡಿ ಮಸೂದೆಗೆ ಸಂಬಂಧಪಟ್ಟಂತೆ ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಆಯೋಗವು ನೀಡಿದ ಎಚ್ಚರಿಕೆ ಅನಗತ್ಯ ಮಾತ್ರವಲ್ಲದೆ ಆ ದೇಶದ ಅಧಿಕ ಪ್ರಸಂಗಿತನದ ನಡೆ ಎನ್ನಬೇಕಾಗುತ್ತದೆ. ಭಾರತದ ಪೌರತ್ವ ತಿದ್ದು ಪಡಿ ಮಸೂದೆ ಯಾವ ನೆಲೆಯಲ್ಲೂ ಅಮೆರಿಕದ ಧಾರ್ಮಿಕ ಆಯೋಗಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಬಂಧಿಸಿಲ್ಲ. ಹೀಗಿರುವಾಗ ಈ ಆಯೋಗ ಆಕ್ಷೇಪ ಎತ್ತಿರುವುದರ ಔಚಿತ್ಯ ಏನು ಎಂದು ಪ್ರಶ್ನಿಸಬೇಕಾಗಿದೆ.

ಧಾರ್ಮಿಕ ಆಯೋಗಕ್ಕೆ ಮಸೂದೆಯ ಸಂಪೂರ್ಣ ಮಾಹಿತಿ ಇರುವುದು ಅನುಮಾನ. ಅದಾಗ್ಯೂ ಅದು ಮಸೂದೆಯನ್ನು ತಪ್ಪು ದಿಕ್ಕಿನಲ್ಲಿ ಇಟ್ಟಿರುವ ತಪ್ಪು ಹೆಜ್ಜೆ ಎಂದು ಬಣ್ಣಿಸಿರುವುದಲ್ಲದೆ ಮಸೂದೆ ರಾಜ್ಯಸಭೆಯಲ್ಲೂ ಮಂಜೂರಾದರೆ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಕೆಲವು ನಾಯಕರಿಗೆ ನಿರ್ಬಂಧ ಹೇರುವ ಎಚ್ಚರಿಕೆಯನ್ನು ನೀಡಿದೆ. ಇದಕ್ಕೆ ಭಾರತ ತಕ್ಕ ಪ್ರತ್ಯುತ್ತರವನ್ನೂ ನೀಡಿದೆ. ಪೌರತ್ವ ಮಸೂದೆ ಎನ್ನುವುದು ಸಂಪೂರ್ಣವಾಗಿ ನಮ್ಮ ಆಂತರಿಕ ವಿಚಾರವಾಗಿದ್ದು, ಇದರ ಸಾಧಕ ಬಾಧಕಗಳೇನೆ ಇದ್ದರೂ ಅದನ್ನು ಚರ್ಚಿಸಿ ನಿರ್ಧರಿಸುವಷ್ಟು ಪ್ರೌಢಿಮೆ ಮತ್ತು ಪ್ರಬುದ್ಧತೆ ನಮ್ಮ ಸಂಸತ್‌ ಸದಸ್ಯರಿಗೆ ಇದೆ. ಹೀಗಿರುವಾಗ ಇದರಲ್ಲಿ ಅಮೆರಿಕವಾಗಲಿ, ಪಾಕಿಸ್ಥಾನವಾಗಲಿ ಮೂಗು ತೂರಿಸುವ ಅಗತ್ಯವೇ ಇಲ್ಲ. ಹಾಗೊಂದು ವೇಳೆ ಯಾರದ್ದಾದರೂ ಧಾರ್ಮಿಕ ಹಕ್ಕುಗಳಿಗೆ ಚ್ಯುತಿ ಬರುತ್ತಿದೆ ಎಂದು ಈ ಆಯೋಗಕ್ಕೆ ಅನ್ನಿಸುವುದಾದರೆ ಇತರ ದೇಶಗಳಲ್ಲಿ ಆಗಿರುವ ಧಾರ್ಮಿಕ ತಾರತಮ್ಯ ಘಟನೆಗಳಿಗೆ ಈ ಆಯೋಗ ಹೇಗೆ ಪ್ರತಿಕ್ರಿಯಿಸಿದೆ ಎನ್ನುವುದನ್ನೂ ತಿಳಿಸಬೇಕಾಗುತ್ತದೆ. ಪಾಕಿಸ್ತಾನದಲ್ಲೇ ದಶಕಗಳಿಂದ ಧಾರ್ಮಿಕ ಅಲ್ಪಸಂಖ್ಯಾತರು ನಿರಂತರವಾಗಿ ದೌರ್ಜನ್ಯಕ್ಕೂ, ಶೋಷಣೆಗೂ ಒಳಗಾಗುತ್ತಿದ್ದಾರೆ. ಯಾವ ಪಾಕಿಸ್ತಾನದ ನಾಯಕನಿಗೆ ಆಯೋಗ ನಿರ್ಬಂಧ ಹೇರಿದೆ? ಮತಾಂಧ ಉಗ್ರರು ಧರ್ಮದ ಹೆಸರಿನಲ್ಲೇ ರಕ್ತದೋಕುಳಿ ಹರಿಸುತ್ತಿರುವಾಗ ಆಯೋಗ ಎಲ್ಲಿ ಹೋಗಿತ್ತು?

ಜಗತ್ತಿಗೆಲ್ಲ ಧಾರ್ಮಿಕ ಸಹಿಷ್ಣುತೆಯ ಬೋಧನೆ ಮಾಡುವ ಈ ಧಾರ್ಮಿಕ ಆಯೋಗಕ್ಕೆ ಪಾಶ್ಚಾತ್ಯ ದೇಶಗಳಲ್ಲಿ ನಡೆಯುತ್ತಿರುವ ವರ್ಣ ದ್ವೇಷದ ಹತ್ಯೆಗಳನ್ನು ಮತ್ತು ಹಲ್ಲೆಗಳನ್ನು ತಡೆಯಲು ಸಾಧ್ಯವಾಗಿಲ್ಲ. ಆಯೋಗ ನಿರ್ಬಂಧ ಹೇರಿದ ಕೂಡಲೇ ಊರೇನು ಮುಳುಗಿ ಹೋಗುವುದಿಲ್ಲ. ಆದರೆ ಅಮೆರಿಕದ ಸಂಸತ್ತು ಇದರ ಶಿಫಾರಸುಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ.

ದಶಕಗಳ ಹಿಂದೆ ಆಗ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರಿಗೆ ಅಮೆರಿಕ ಭೇಟಿಗೆ ನಿರ್ಬಂಧ ವಿಧಿಸಿದ್ದು ಇದೇ ಆಯೋಗದ ಶಿಫಾರಸಿನ ಮೇರೆಗೆ. ಭಾರತದ ಕೆಲವು ಸೆಲೆಬ್ರಿಟಿಗಳು, ರಾಜಕೀಯ ಮತ್ತು ಸಾಮಾಜಿಕ ರಂಗದ ನಾಯಕರು ಸಹಿ ಸಂಗ್ರಹ ಅಭಿಯಾನದ ಮೂಲಕ ಮೋದಿಗೆ ನಿರ್ಬಂಧ ಹೇರುವಂತೆ ಒತ್ತಡ ಹಾಕಿದ್ದರು. ಆದರೆ ಪ್ರಧಾನಿಯಾದ ಬಳಿಕ ಮೋದಿಯನ್ನು ಆ ದೇಶ ರತ್ನಗಂಬಳಿ ಹಾಸಿ ಸ್ವಾಗತಿಸಬೇಕಾಯಿತು ಎನ್ನುವುದು ಬೇರೆ ವಿಚಾರ.

Advertisement

ಭಾರತದ ಆಂತರಿಕ ವಿಚಾರಗಳಲ್ಲಿ ಈ ಧಾರ್ಮಿಕ ಆಯೋಗ ಮೂಗು ತೂರಿಸುತ್ತಿರುವುದು ಇದೇ ಮೊದಲೇನಲ್ಲ. 2001ರಿಂದ 2004ರ ವರೆಗೆ ಮತ್ತು 2009ರಿಂದ 2010ರ ವರೆಗೆ ಆಯೋಗ ಭಾರತವನ್ನು ಕಣ್ಗಾವಲು ವಿಭಾಗಕ್ಕೆ ಸೇರಿಸಿತ್ತು. ಇದಕ್ಕೆ ನೀಡಿದ ಕಾರಣ ಭಾರತದಲ್ಲಿ ಒಂದು ನಿರ್ದಿಷ್ಟ ಸಮುದಾಯದ ಧಾರ್ಮಿಕ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ ಎನ್ನುವುದು. ಇದೇ ಆಯೋಗ ಗೋಧಾÅದಲ್ಲಿ ಚಲಿಸುತ್ತಿರುವ ರೈಲಿಗೆ ಬೆಂಕಿ ಹಚ್ಚಿ 58 ಕರಸೇವಕರನ್ನು ಜೀವಂತ ದಹಿಸಿದ ಘಟನೆಯನ್ನು ಒಂದು ಅಪಘಾತ ಎಂದು ಬಣ್ಣಿಸಿ ಛೀಮಾರಿ ಹಾಕಿಸಿಕೊಂಡಿತ್ತು. ಸನ್ಯಾಸಿ ಲಕ್ಷ್ಮಣಾನಂದ ಸರಸ್ವತಿ ಅವರ ಹತ್ಯೆಯನ್ನೂ ಆಯೋಗ ಪರೋಕ್ಷವಾಗಿ ಸಮರ್ಥಿಸಿತ್ತು. ಈ ಕೆಲವು ಉದಾಹರಣೆಗಳೇ ಆಯೋಗದ ಉದ್ದೇಶ ಪರಿಶುದ್ಧವಾಗಿಲ್ಲ ಎನ್ನುವುದನ್ನು ತಿಳಿಸುತ್ತದೆ. ಅಮೆರಿಕದ ಆಯೋಗ ತನ್ನ ಮೂಗಿನ ನೇರಕ್ಕೆ ವಿಚಾರಗಳನ್ನು ವ್ಯಾಖ್ಯಾನಿಸಿಕೊಂಡು ತೀರ್ಪುಗಳನ್ನು ನೀಡುವುದು ಬೇಡ. ನಮ್ಮ ಆಂತರಿಕ ವಿಚಾರಗಳನ್ನು ನಾವೇ ತೀರ್ಮಾನಿಸಿಕೊಳ್ಳುತ್ತೇವೆ ಎಂಬ ನಿಲುವನ್ನು ನಾವು ತಾಳಬೇಕು. ಈ ವಿಚಾರವಾಗಿ ಎಲ್ಲರೂ ರಾಜಕೀಯ, ಧಾರ್ಮಿಕ ಭಿನ್ನಾಭಿಪ್ರಾಯ ಮರೆತು ಏಕ ಧ್ವನಿಯಿಂದ ಮಾತನಾಡಬೇಕಾದ ಅಗತ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next