Advertisement

ಸಿಎಎ ರದ್ದತಿ ಪ್ರಶ್ನೆಯೇ ಇಲ್ಲ ! ದಶಕಗಳಿಂದ ಜನರು ನಿರೀಕ್ಷಿಸುತ್ತಿದ್ದ ಆಶಯ ಈಗ ಈಡೇರಿಕೆ

09:56 AM Feb 18, 2020 | sudhir |

ವಾರಾಣಸಿ: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವುದನ್ನಾಗಲಿ, ಸಿಎಎ ನಿರ್ಧಾರವನ್ನಾಗಲಿ ಪುನರ್ವಿಮರ್ಶೆ ಮಾಡುವ ಪ್ರಶ್ನೆಯೇ ನಮ್ಮ ಸರಕಾರದ ಮುಂದಿಲ್ಲ. ಅದಕ್ಕಾಗಿ ಎಷ್ಟೇ ಆಂತರಿಕ, ಬಾಹ್ಯ ಒತ್ತಡವಿದ್ದರೂ ಈ ವಿಚಾರಗಳಲ್ಲಿ ಸರಕಾರದ ನಿರ್ಧಾರ ಅಚಲ ಎಂದು ಪ್ರಧಾನಿ ಮೋದಿ ಖಡಾಖಂಡಿತವಾಗಿ ಹೇಳಿದ್ದಾರೆ.

Advertisement

ತಮ್ಮ ಲೋಕಸಭಾ ಕ್ಷೇತ್ರವಾದ ವಾರಾಣಸಿಗೆ ಒಂದು ದಿನದ ಭೇಟಿಗಾಗಿ ರವಿವಾರ ಆಗಮಿಸಿದ್ದ ಅವರು, ಬೃಹತ್‌ ಸಮಾವೇಶವೊಂದರಲ್ಲಿ ಮಾತನಾಡಿದರು. ಸಂವಿಧಾನದ 370ನೇ ವಿಧಿ, ಸಿಎಎಯಂಥ ನಿರ್ಧಾರಗಳು ದೇಶದ ಹಿತದೃಷ್ಟಿಯಿಂದ ಇಂದು ಅನಿವಾರ್ಯ. ಇಂಥ ದಿಟ್ಟ ನಡೆಗಳನ್ನು ದೇಶದ ಜನತೆ ದಶಕಗಳಿಂದ ನಿರೀಕ್ಷಿಸಿದ್ದರು. ಈಗ ಅವುಗಳನ್ನು ಸಾಕಾರಗೊಳಿಸಲಾಗಿದೆ. ಅದರ ವಿರುದ್ಧ ಇಡೀ ವಿಶ್ವವೇ ತಿರುಗಿಬಿದ್ದರೂ ಅವುಗಳ ಅನುಷ್ಠಾನಕ್ಕೆ ಸರಕಾರ ಕಟಿಬದ್ಧವಾಗಿದೆ ಎಂದಿದ್ದಾರೆ.

“ಮಹಾಕಾಳ ಎಕ್ಸ್‌ಪ್ರೆಸ್‌’ಗೆ ಚಾಲನೆ
ದೇಶದ ಮೂರು ಜ್ಯೋತಿರ್ಲಿಂಗಗಳ ಕ್ಷೇತ್ರಗಳಾದ ಉತ್ತರ ಪ್ರದೇಶದ ವಾರಾಣಸಿ, ಉಜ್ಜಯಿನಿ ಮತ್ತು ಮಧ್ಯಪ್ರದೇಶದ ಓಂಕಾರೇಶ್ವರ ನಡುವೆ ಸಂಚರಿಸುವ, ಐಆರ್‌ಸಿಟಿಸಿಯ ಹೊಸ ರೈಲು “ಮಹಾಕಾಳ ಎಕ್ಸ್‌ಪ್ರೆಸ್‌’ಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ವಿವಿಧ ಪುಣ್ಯಕ್ಷೇತ್ರಗಳಿಗೆ ಸುಲಭ ಸಾರಿಗೆ ಸಂಪರ್ಕ ನೀಡುವುದರಿಂದಲೂ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್‌ ಡಾಲರ್‌ಗೆ ಏರಿಸಲು ನೆರವಾಗುತ್ತದೆ ಎಂದರು.

ನಾನಾ ಯೋಜನೆಗಳ ವಿವರ
ಬೆಳಗ್ಗೆ 1,254 ಕೋಟಿ ರೂ. ಮೊತ್ತದ 50 ಯೋಜನೆಗಳಿಗೆ ಚಾಲನೆ ನೀಡಿದ ಮೋದಿ, ವಾರಾಣಸಿಯಲ್ಲಿ ಕೆಲವು ವರ್ಷಗಳ ಹಿಂದೆ ಕೈಗೊಳ್ಳಲಾಗಿದ್ದ 25,000 ಕೋಟಿ ರೂ. ಮೊತ್ತದ ಮೂಲಸೌಕರ್ಯ ಯೋಜನೆಗಳಲ್ಲಿ ಹಲವು ಯೋಜನೆಗಳು ಪೂರ್ಣಗೊಂಡಿದ್ದು ಇನ್ನು ಕೆಲವು ಯೋಜನೆಗಳ ಕಾಮಗಾರಿ ಮುಂದುವರಿದಿದೆ. 7,000 ಕೋಟಿ ರೂ. ಮೊತ್ತದ “ನಮಾಮಿ ಗಂಗೆ’ ಪೂರ್ಣಗೊಂಡಿದೆ. 21,000 ಕೋಟಿ ರೂ. ಮೊತ್ತದ ಇತರ ಯೋಜನೆಗಳು ಚಾಲ್ತಿಯಲ್ಲಿವೆ ಎಂದರು.

“ಕಾಶಿ ಏಕ್‌, ರೂಪ್‌ ಅನೇಕ್‌’
ದೀನದಯಾಳ್‌ ಹಸ್ತಕಲಾ ಸಂಕುಲದಲ್ಲಿ ಆಯೋಜಿಸಲಾಗಿದ್ದ “ಕಾಶಿ ಏಕ್‌, ರೂಪ್‌ ಅನೇಕ್‌’ ಎಂಬ ಕರಕುಶಲ ವಸ್ತುಪ್ರದರ್ಶನ ಉದ್ಘಾ ಟಿಸಿದ ಮೋದಿ ಅಲ್ಲಿ ಭಾರತ, ಅಮೆರಿಕ, ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾದ ಮಳಿಗೆಗಳಿಗೆ ಭೇಟಿ ನೀಡಿದರು. ಉತ್ತರ ಪ್ರದೇಶದ ಸುಮಾರು 10 ಸಹಸ್ರ ಕುಶಲಕರ್ಮಿಗಳ 23 ಲಕ್ಷ ದಷ್ಟು ಸಾಮಗ್ರಿ, ಕೈಮಗ್ಗದ ಉತ್ಪನ್ನಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ಅವುಗಳಲ್ಲಿ 35 ಸಾವಿರ ಕರಕುಶಲ ನೇಯ್ಗೆಗಳು ವಾರಾಣಸಿಯ 1.5 ಲಕ್ಷ ನೇಕಾರರದ್ದೇ ಆಗಿವೆ. ಇದೇ ವೇಳೆ ನೇಕಾರ ರನ್ನು ಪ್ರೋತ್ಸಾಹಿಸಲು ವಾರಾಣಸಿ ಜಿಲ್ಲಾಡಳಿತ ಹೊರತಂದಿರುವ “ಒಂದು ಜಿಲ್ಲೆ, ಒಂದು ಉತ್ಪನ್ನ’ (ಒಡಿಒಪಿ) ಯೋಜನೆಗೆ ಚಾಲನೆ ನೀಡಲಾಯಿತು.

Advertisement

ದೀನದಯಾಳ್‌ ಕೇಂದ್ರ ಲೋಕಾರ್ಪಣೆ
ವಾರಾಣಸಿಯಲ್ಲಿ ನೂತನವಾಗಿ ನಿರ್ಮಿಸ ಲಾಗಿರುವ ದೀನದಯಾಳ್‌ ಸ್ಮಾರಕ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ, ಅನಂತರ ದೀನದಯಾಳ್‌ ಅವರ 63 ಅಡಿ ಎತ್ತರದ ಪ್ರತಿಮೆಯನ್ನೂ ಅನಾವರಣಗೊಳಿಸಿದರು. ದಲಿತರ ಉದ್ಧಾರಕ್ಕೆ ತಮ್ಮ ಸರಕಾರ ಕಂಕಣಬದ್ಧ ವಾಗಿದೆ ಎಂದ ಅವರು, ಇದುವೇ ಉಪಾಧ್ಯಾಯ ಅವರ ಅಂತ್ಯೋದಯ ಎಂದು ತಿಳಿಸಿದರು.

ವೈಭವಯುತ “ರಾಮಧಾಮ’
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಟ್ರಸ್ಟನ್ನು ಈಗಾಗಲೇ ಸ್ಥಾಪಿಸಲಾಗಿದೆ. ಅದರ ಮೂಲಕ ಬೃಹತ್ತಾದ, ವೈಭವಯುತವಾದ ರಾಮಮಂದಿರವನ್ನು ತ್ವರಿತವಾಗಿ ನಿರ್ಮಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಅದೇ ಜಾಗದಲ್ಲಿ ರಾಮಧಾಮ ನಿರ್ಮಾಣಕ್ಕಾಗಿ 67 ಎಕರೆ ಭೂಮಿಯನ್ನು ಸಂಪೂರ್ಣವಾಗಿ ಟ್ರಸ್ಟ್‌ಗೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ. ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ರಾಮ ದೇಗುಲ ನಿರ್ಮಾಣವಾಗುವ ಜಾಗವನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರವೆಂದು ಘೋಷಿಸಿ, ಈ ಟ್ರಸ್ಟನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಅವರು ಹೇಳಿದ್ದಾರೆ.

ಸಿದ್ಧಾಂತ ಶಿಖಾಮಣಿ ಗ್ರಂಥ ಬಿಡುಗಡೆ
ವಾರಾಣಸಿಯ ಶ್ರೀ ಜಗದ್ಗುರು ವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವ ಸಮಾರಂಭದಲ್ಲಿ ಮೋದಿ ಪಾಲ್ಗೊಂಡರು. ಮಠದ ವತಿಯಿಂದ “ಸಿದ್ಧಾಂತ ಶಿಖಾಮಣಿ’ ಗ್ರಂಥಗಳನ್ನು 19 ಭಾಷೆಗಳಿಗೆ ಭಾಷಾಂತರಿಸಲಾಗಿದ್ದು, ಅವುಗಳನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ, ಕನ್ನಡ, ತೆಲುಗು, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಮೋದಿ ಮಾತನಾಡಿದಾಗ ಜನರು ಚಪ್ಪಾಳೆಯ ಮೂಲಕ ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, ವಿವಿಧ ಮಠಾಧೀಶರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next