Advertisement

ಪೌರತ್ವ ಕಾಯ್ದೆ ವಿರುದ್ಧ ಅಸಹಕಾರ ಚಳವಳಿ

11:07 PM Feb 24, 2020 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ವಿರುದ್ಧ ದೇಶದ ಜನರು ಅಸಹಕಾರ ಚಳವಳಿ ಆರಂಭಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್‌ ಮೂಲಕ ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸರಣಿ ಟ್ವೀಟ್‌ ಮಾಡಿರುವ ಅವರು, ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜನ ವಿರೋಧಿ ನೀತಿ ಅನುಸರಿಸುತ್ತಿದೆ.

Advertisement

ಜನ ವಿರೋಧಿ ನೀತಿಗಳಿಗೆ ಅಸಹಕಾರ ತೋರುವುದು ಸಂವಿಧಾನ ಬಾಹಿರವಲ್ಲ ಎಂದು ಮಹಾತ್ಮ ಗಾಂಧಿಯವರೇ ಹೇಳಿದ್ದಾರೆ. ಹೀಗಾಗಿ ದೇಶದ ಜನತೆ ಮತ್ತೂಮ್ಮೆ ಅಸಹಕಾರ ಚಳವಳಿಗೆ ಸಿದ್ಧರಾಗಬೇಕಿದೆ. ಬಿಜೆಪಿಯ ಸಂವಿಧಾನ ವಿರೋಧಿ ಕಾನೂನಿಗೆ ಇದೇ ಸರಿಯಾದ ಉತ್ತರ ಎಂದು ಟ್ವೀಟ್‌ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಆಡಳಿತದ ಬಗ್ಗೆ ವಾಗ್ಧಾಳಿ ನಡೆಸಿರುವ ಅವರು, ಪ್ರಜಾಪ್ರಭುತ್ವ ವಿರೋಧಿ ಕಾರ್ಯಕ್ರಮಗಳನ್ನು ಜಾರಿ ಮಾಡುವುದು ವಾಜಪೇಯಿ ಕಾಲದಲ್ಲಿ ಬಿಜೆಪಿಯ ರಹಸ್ಯ ಅಜೆಂಡಾ ಆಗಿತ್ತು. ಮೋದಿಯವರು ಅಧಿಕಾರಕ್ಕೆ ಬಂದ ನಂತರ ದೇಶ ವಿರೋಧಿ, ಜನ ವಿರೋಧಿ ಮತ್ತು ಸಂವಿಧಾನ ವಿರೋಧಿ ಅಜೆಂಡಾವನ್ನು ಜಾರಿಗೆ ತರಲು ಬಹಿರಂಗವಾಗಿ ತೊಡೆ ತಟ್ಟಿ ನಿಂತಿದ್ದಾರೆ. ಇದು ದೇಶದ ಭವಿಷ್ಯಕ್ಕೆ ಮಾರಕ.

ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ಬಡತನ, ಹಸಿವು, ನಿರುದ್ಯೋಗ, ಮಹಿಳಾ ದೌರ್ಜನ್ಯ, ರೈತರ ಆತ್ಮಹತ್ಯೆ ಇಂತಹ ಹಲವಾರು ಜ್ವಲಂತ ಸಮಸ್ಯೆಗಳು ದೇಶವನ್ನು ಬಾಧಿಸುತ್ತಿವೆ. ಇವೆಲ್ಲ ಸರಿಪಡಿಸುವುದನ್ನು ಬಿಟ್ಟು ಸಿಎಎ, ಎನ್‌ಆರ್‌ಸಿ ಜಾರಿಗೆ ತರುವ ಹಿಂದಿನ ಉದ್ದೇಶವೇನು ಎಂದು ಅರ್ಥವಾಗದಷ್ಟು ಜನ ಮೂರ್ಖರಲ್ಲ ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next