Advertisement
ನಾಡ ಕಚೇರಿಯಲ್ಲಿಲ್ಲವಿಟ್ಲದ ನಾಡಕಚೇರಿಯಲ್ಲಿ ಆಧಾರ್ ಕಾರ್ಡ್ ಒದಗಿಸುವುದಕ್ಕೆ, ತಿದ್ದುಪಡಿಗೆ ವ್ಯವಸ್ಥೆಯಿತ್ತು. ದಿನಕ್ಕೆ 30 ಮಂದಿಗೆ ಟೋಕನ್ ಸಿಗುತ್ತಿತ್ತು. ಪ್ರಸ್ತುತ ಜನವರಿ ತಿಂಗಳ ಕೊನೆಯವರೆಗೆ ಟೋಕನ್ ನೀಡಿಯೂ ಆಗಿದೆ. ಆದರೆ ಇದನ್ನು ನಂಬಿ ನಾಗರಿಕರು 2020ನೇ ಸಾಲಿನಲ್ಲಿ ಆಧಾರ್ ಕಾರ್ಡ್ ಪಡೆಯುವುದು ಅಥವಾ ತಿದ್ದುಪಡಿ ಮಾಡುವುದು ಕಷ್ಟ. ಏಕೆಂದರೆ, ಕಳೆದ 3 ವಾರಗಳಿಂದ ವಿಟ್ಲ ನಾಡಕಚೇರಿಯ ಕಂಪ್ಯೂಟರ್ ಸರಿಯಿಲ್ಲ. ಆಧಾರ್ ತಿದ್ದುಪಡಿ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ.
ವಿಟ್ಲ ಅಂಚೆ ಕಚೇರಿಯಲ್ಲಿ ಇದೇ ವ್ಯವಸ್ಥೆಯಿದೆ. ಉಳಿದೆಲ್ಲೆಡೆ ಈ ವ್ಯವಸ್ಥೆ ಯಿಲ್ಲ. ಅಂಚೆ ಕಚೇರಿಯಲ್ಲಿಯೂ ಕೇವಲ 30 ಟೋಕನ್ ಸಿಗುತ್ತದೆ. ಆಯಾಯ ದಿನ ಟೋಕನ್ ನೀಡುವ ಪದ್ಧತಿ ಇಲ್ಲಿದೆ. ಟೋಕನ್ ಪಡೆಯಲು ಸರದಿ ಸಾಲಲ್ಲಿ ನಿಲ್ಲುವುದೆಂದರೆ ಅದು ಭಗೀರಥ ಪ್ರಯತ್ನ. ಅದಕ್ಕಾಗಿ ರಾತ್ರಿಯೇ ಅಂಚೆ ಕಚೇರಿ ಬಳಿ ನಿಲ್ಲಬೇಕು. ತಡರಾತ್ರಿ 3 ಗಂಟೆಗೆ ಅಂಚೆ ಕಚೇರಿ ಮುಂಭಾಗದಲ್ಲಿ ನಿಂತಿರಬೇಕು. 6 ಗಂಟೆಗೆ ಗೇಟಿನೊಳಗಡೆ ಬಿಡುತ್ತಾರೆ. ಆಗ ಇರುವ 30 ಮಂದಿಗೆ ಟೋಕನ್ ಸಿಗುತ್ತದೆ. 8.30ರಿಂದ ಕೆಲಸ ಆರಂಭವಾಗುತ್ತದೆ. ಸಮಸ್ಯೆ ಅಂಚೆ ಕಚೇರಿಯದ್ದಲ್ಲ. ಅವರು ಪ್ರತಿದಿನ ಕರ್ತವ್ಯ ನಿಭಾಯಿಸುತ್ತಾರೆ. ಆದರೆ ಇರುವ 30 ಟೋಕನ್‌ಗಳಿಗಾಗಿ ನಾಗರಿಕರು ಪರದಾಡುವಂತಾಗಿದೆ. ಸರ್ವರ್ ಸಮಸ್ಯೆ
ಕಳೆದ ಎಷ್ಟೋ ವರ್ಷಗಳಿಂದ ನಾಗರಿಕರು ಆಧಾರ್ ಕಾರ್ಡ್‌ಗಾಗಿ ಸಂಕಷ್ಟಪಡುವುದು ಯಾರ ಗಮನಕ್ಕೂ ಬಂದಂತಿಲ್ಲ. ಅಧಿಕಾರಿಗಳಿಗೂ ಜನಪ್ರತಿನಿಧಿ ಗಳಿಗೂ ನಾಗರಿಕರ ನಿತ್ಯದ ಗೋಳು ಕಿವಿಗೇ ಬಿದ್ದಿಲ್ಲ. ಸರ್ವರ್ ಸಮಸ್ಯೆ ಎಂದು ಹೇಳುವುದು ಮಾಮೂಲಿಯಾಗಿದೆ. ಈ ಸರ್ವರ್ ಸಮಸ್ಯೆಯನ್ನು ನಿವಾರಿಸುವ, ಅದಕ್ಕೆ ಸೂಕ್ತ ವ್ಯವಸ್ಥೆಯನ್ನು ಒದಗಿಸುವ ಪ್ರಯತ್ನಗಳು ಏಕಾಗುತ್ತಿಲ್ಲ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.
Related Articles
ಆಧಾರ್ ಕಾರ್ಡ್ ತಿದ್ದುಪಡಿಗಾಗಿ ನಾಗರಿಕರು ತೊಂದರೆ ಪಡುತ್ತಿರುವುದನ್ನು ಮನಗಂಡು ನಾನು ಜಿಲ್ಲಾಧಿಕಾರಿಗೆ, ದಿಲ್ಲಿಯ ಕುಂದು ಕೊರತೆ ವಿಭಾಗಕ್ಕೆ, ಶಾಸಕರಿಗೆ ಪತ್ರ ಬರೆದು ಸಮಸ್ಯೆ ನಿವಾರಿಸಬೇಕು ಮತ್ತು ಆಧಾರ್‌ಗೆ ವಿಟ್ಲ, ಬಿ.ಸಿ. ರೋಡ್‌ನಲ್ಲಿ ಅದಾಲತ್ ಮಾಡ ಬೇಕು ಎಂದು ವಿನಂತಿಸಿದ್ದೆ. ಇದಕ್ಕೆ ಇ ಮತ್ತು ಐಟಿ ವಿಭಾಗದ ಅಸಿಸ್ಟೆಂಟ್ ಡೈರೆಕ್ಟರ್ ಜನರಲ್ ಎಲ್.ಕೆ. ದಕ್Ò ಅವರು ಬೆಂಗಳೂರು ಸೆಂಟರ್ ಫಾರ್ ಎ-ಗವರ್ನೆನ್ಸ್ ಜಿಒಕೆ ಅವರಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದ್ದಾರೆ. ನನಗೂ ಆ ಪತ್ರದ ಪ್ರತಿ ಕಳುಹಿಸಿದ್ದಾರೆ. ಶಾಸಕರಿಗೆ ಮೊಬೈಲ್‌ನಲ್ಲಿ ಸಂಪರ್ಕಿಸಿದಾಗ ಆಧಾರ್ ಸಂಬಂಧಿಸಿದ ಕಿಟ್ ಬಂದಿಲ್ಲ. ಕಿಟ್ ಲಭಿಸಿದ ಕೂಡಲೇ ಕಾರ್ಯ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.
- ಶ್ರೀಧರ ಕುಕ್ಕೆಮನೆ ಕೋಡಪದವು, ನ್ಯಾಯವಾದಿ
Advertisement
ಕೆಲವೊಮ್ಮೆ ಅಡ್ಡಿಹಿಂದೆ ಪಂಚಾಯತ್‌ನಲ್ಲಿ ಆಧಾರ್ ತಿದ್ದುಪಡಿಗೆ ವ್ಯವಸ್ಥೆಯಿತ್ತು. ಅದನ್ನು ಕೇಂದ್ರ ಸರಕಾರ ಸ್ಥಗಿತಗೊಳಿಸಿದೆ. ಇದೀಗ ವಿಟ್ಲ ನಾಡಕಚೇರಿಯಲ್ಲಿದೆ. ಆಧಾರ್ ಕಿಟ್ ಇರುವ ಲ್ಯಾಪ್‌ಟಾಪ್ ಇದ್ದಾಗ ಮಾತ್ರ ಕೆಲಸ ಮಾಡಲು ಸಾಧ್ಯವಾಗುತ್ತದೆ. ಹಾಗಾಗಿ ತೊಂದರೆಯಾಗಿರಬಹುದು. ಮತ್ತು ಆಧಾರ್ ತಿದ್ದುಪಡಿ ಕಾರ್ಯವನ್ನು ವೈಯಕ್ತಿಕವಾಗಿ ತಮ್ಮದೇ ಕಂಪ್ಯೂಟರ್‌ನಲ್ಲಿ ಅಥವಾ ಸೈಬರ್ ಕೇಂದ್ರಗಳಲ್ಲಿ ಮಾಡಲಾಗುತ್ತದೆ. ಅದನ್ನು ಇನ್ನೂ ಕೆಲವರು ಬಳಸುತ್ತಿಲ್ಲ. ಈ ಬಗ್ಗೆ ವ್ಯಾಪಕ ಪ್ರಚಾರವೂ ಆಗಬೇಕಾಗಿದೆ. ಸರ್ವರ್ ಸಮಸ್ಯೆ ಈಗ ಕಡಿಮೆಯಾಗಿದೆ. ಆದರೂ ಕೆಲವೊಮ್ಮೆ ಅಡ್ಡಿಯಾಗುತ್ತಿದೆ.
- ರಶ್ಮಿ ಎಸ್.ಆರ್. ತಹಶೀಲ್ದಾರ್, ಬಂಟ್ವಾಳ ಆಧಾರ್ ತಿದ್ದುಪಡಿಯ ಗೋಳು ವೈರಲ್
ಕೆಲಸಕ್ಕೆ ರಜೆ ಹಾಕಿ ಬೆಳಗ್ಗೆ 4 ಗಂಟೆಗೆ ಎದ್ದು ಮನೆಯಿಂದ ಹೊರಟು 5 ಗಂಟೆಗೆ ಅಂಚೆ ಕಚೇರಿ ತಲುಪಿದೆ. ಗೇಟ್ ತೆರೆದಿರಲಿಲ್ಲ. ಆದರೆ ಗೇಟ್‌ನ ಹೊರಗೆ ಅಷ್ಟೊತ್ತಿಗಾಗಲೇ 14 ಮಂದಿ ಸೇರಿದ್ದರು. 15ನೇ ಸಂಖ್ಯೆ ನನಗೆ ದೊರಕಿತು. 6 ಗಂಟೆಗೆ ಗೇಟ್ ತೆರೆದರು. ಒಳಗೆ ಹೋದೆವು. 6 ಗಂಟೆಗೆ ಸಾಲಿನಲ್ಲಿ 30 ಮಂದಿ ಸೇರಿದ್ದರು. ಸಾಲಿನಲ್ಲಿದ್ದ ಮೊದಲ ವ್ಯಕ್ತಿ ನಿಂತಲ್ಲೇ ನಿದ್ದೆ ಮಾಡಿ ಪಕ್ಕದವರ ಮೇಲೆ ಬೀಳುತ್ತಿದ್ದುದ್ದನ್ನು ನೋಡಿ ಬೇಸರವಾಯಿತು. ಅನಂತರ ಇವರಲ್ಲಿ ಮಾತನಾಡಿಸಿ ದಾಗ ಅವರ ಊರು ದೂರ ಹಾಗೂ ವಾಹನ ಇಲ್ಲ. ವಿಟ್ಲದಲ್ಲಿರುವ ಬಂಧುವಿನ ಮನೆಯಲ್ಲಿ ವಾಸ್ತವ್ಯ, ಬೆಳಗ್ಗೆ 3 ಗಂಟೆಗೆ ಅಂಚೆ ಕಚೇರಿ ಮುಂದುಗಡೆ ತಲುಪಿದ್ದಾರೆ ಎಂದು ತಿಳಿಯಿತು. ಸಾಲಿನಲ್ಲಿ ನಿಲ್ಲಲು ಅಸಾಧ್ಯವಾದ ವಯಸ್ಕರು, ಪುಟ್ಟ ಮಗುವನ್ನು ಹೊತ್ತ ತಾಯಂದಿರಿದ್ದರು. 8 ಗಂಟೆಯ ತನಕವೂ ಮಹಿಳೆಯರು, ಪುರುಷರು, ವಯಸ್ಕರು ಬಂದು ತಮ್ಮ ಅಸಹಾಯಕತೆ ಪ್ರದರ್ಶಿಸಿ, ನಿರಾಶಭಾವದಿಂದ ಹಿಂತಿರುಗುತ್ತಿದ್ದರು. ಕೆಲವರು ತುಂಬಾ ದೂರದಿಂದ ಆಟೋದಲ್ಲಿ 300 ರೂ. ಖರ್ಚು ಮಾಡಿ ಬಂದರೂ 30 ಮಂದಿಯ ಸರದಿ ಸಾಲು ಸೇರಲು ಸಾಧ್ಯವಾಗಲೇ ಇಲ್ಲ. ಗಂಟೆ 8.30ಕ್ಕೆ ಸರಿಯಾಗಿ ಅಂಚೆ ಕಚೇರಿ ತೆರೆದು ಸಾಲಿನಲ್ಲಿ ನಿಂತು, 15ನೇ ಟೋಕನ್ ಪಡೆದು, ಮನೆಗೆ ಬಂದು, ಪತ್ನಿಯನ್ನು ಕರೆದುಕೊಂಡು ಹೋಗಿ, ಆಧಾರ್ ತಿದ್ದುಪಡಿ ಕಾರ್ಯ ಮುಗಿಯಿತೆಂದು ತಿಳಿದುಕೊಂಡಿದ್ದೇನೆ. ಪ್ರತಿದಿನ ಆಧಾರ್ ಕಾರ್ಡ್‌ಗಾಗಿ ಪರದಾಡಿದರೆ ಅವರ
ಹೊಟ್ಟೆ ತುಂಬಿಸುವವರಾರು? ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಬಡವರ ಕಷ್ಟಕ್ಕೆ ಸಹಕರಿಸಬೇಕಾಗಿದೆ.
– ಪ್ರದೀಪ್ ಬಲ್ಲಾಳ್ ಎರುಂಬು - ಉದಯಶಂಕರ್ ನೀರ್ಪಾಜೆ