Advertisement

ದಕ್ಷಿಣ ಬೆಂಗಳೂರು ಭಾಗದ ನಾಗರಿಕರ ಜಾಗರಣೆ

12:16 PM Oct 16, 2017 | Team Udayavani |

ಬೆಂಗಳೂರು: ನಗರದಲ್ಲಿ ಶನಿವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನಗರದ ಹಲವಾರು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನರು ಜಾಗರಣೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಶನಿವಾರ ಮಧ್ಯರಾತ್ರಿ ಆರಂಭವಾದ ಭಾರಿ ಮಳೆ ನಿರಂತರವಾಗಿ ಬೆಳಗಿನವರೆಗೆ ಸುರಿದ ಪರಿಣಾಮ ಬಿಟಿಎಂ ಬಡಾವಣೆ, ಬೊಮ್ಮನಹಳ್ಳಿ, ಯಲಹಂಕ ಸೇರಿದಂತೆ ನಗರದ ಹಲವಾರು ಪ್ರದೇಶಗಳು ಜಲಾವೃತಗೊಂಡಿದ್ದವು.

Advertisement

ಇದರಿಂದಾಗಿ ನಾಗರಿಕರು ರಜೆದಿನವಾದ ಭಾನುವಾರ ಮನೆಗಳಿಗೆ ಸೇರಿದ್ದ ನೀರನ್ನು ಹೊರಹಾಕುವುದರಲ್ಲಿ ನಿರತರಾಗಿದ್ದರು. ಭಾನುವಾರ ಬೆಳಗ್ಗೆಯೂ ನಗರದಲ್ಲಿ ಮೋಡಕವಿದ ವಾತಾವರಣ ಮುಂದುವರಿಸಿದ ಪರಿಣಾಮ ನಾಗರಿಕರು ಮನೆಗಳಿಗೆ ಹೊರಬರಲು ಹಿಂದೇಟು ಹಾಕಿದರು. ಬೊಮ್ಮನಹಳ್ಳಿಯ 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಹೊಂಗಸಂದ್ರ ವಾರ್ಡ್‌ನ ಓಂ ಶಕ್ತಿ ಬಡಾವಣೆಯ ಮನೆಗಳಿಗೆ ಚರಂಡಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. 

ಇದರೊಂದಿಗೆ ಬಿಟಿಎಂ ಬಡಾವಣೆ ಹಲವಾರು ಕಡೆಗಳಲ್ಲಿ ಸಮಸ್ಯೆ ಉಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸಿದರು. ಈ ಭಾಗದ ರಾಜಕಾಲುವೆ, ಚರಂಡಿ ಹಾಗೂ ಮ್ಯಾನ್‌ಹೋಲ್‌ಗ‌ಳು ಉಕ್ಕಿ ಹರಿದು ಮನೆಗಳಿಗೆ ನೀರು ಪ್ರವೇಶಿಸಿ ಮನೆಯಲ್ಲಿ ಹಲವಾರು ವಸ್ತುಗಳು ನೀರಿನಲ್ಲಿ ಮುಳಗಿದವು. ಬೆಂಗಳೂರು ದಕ್ಷಿಣ ಭಾಗದಲ್ಲಿ ಶನಿವಾರ ಭಾರಿ ಮಳೆ ಸುರಿದ ಪರಿಣಾಮ ಈ ಭಾಗದ ಹಲವಾರು ಬಡಾವಣೆಗಳ ರಸ್ತೆಗಳು ಸಂಪೂರ್ಣ ಜಲಾವೃತಗೊಂಡು ವಾಹನಗಳ ಸಂಚರಿಸಲು ತೊಂದರೆಯುಂಟಾಗಿದೆ. 

ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರ ಸಮೀಪ ಮಳೆ ನೀರು ಸಂಪೂರ್ಣವಾಗಿ ರಸ್ತೆಯಲ್ಲಿ ನಿಂತ ಪರಿಣಾಮ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು. ಇದರೊಂದಿಗೆ ಯಲಹಂಕದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮಳೆ ನೀರು ನುಗ್ಗಿ ಬೇಸ್‌ಮೆಂಟ್‌ ಸಂಪೂರ್ಣ ಜಲಾವೃತಗೊಂಡಿದ್ದು, ಅಪಾರ್ಟ್‌ಮೆಂಟ್‌ ನಿವಾಸಿಗಳು ಮನೆಯಿಂದ ಹೊರಬರಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಇಕೋ ಸ್ಪೇಸ್‌ ಭಾಗದಲ್ಲಿಯೂ ನೀರು ತುಂಬಿರುವುದರಿಂದ ಸೋಮವಾರ ತೀವ್ರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. 

ಇದರೊಂದಿಗೆ ಮಾರತಹಳ್ಳಿ, ವೈಟ್‌ಫೀಲ್ಡ್‌ ಹಾಗೂ ಹೊಸೂರು ರಸ್ತೆಗಳಲ್ಲಿ ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ಸೋಮವಾರ ಬೆಳಗ್ಗೆ ನಗರದಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದ್ದು, ಪಾಲಿಕೆಯ ಸಿಬ್ಬಂದಿ ಕೂಡಲೇ ನೀರು ತೆರವುಗೊಳಿಸಲು ಮುಂದಾಗಬೇಕಿದೆ ಎಂದು ಸ್ಥಳೀಯ ತಿಳಿಸಿದ್ದಾರೆ.

Advertisement

ಭಾನುವಾರ ಸಾಧಾರಣ ಮಳೆ
ನಗರದಲ್ಲಿ ಕೆಲದಿನಗಳಿಂದ ಅಬ್ಬರಿಸುತ್ತಿರುವ ಮಳೆ, ಭಾನುವಾರ ಕೊಂಚ ತಗ್ಗಿತ್ತು. ಇದರಿಂದ ಜನ ತುಸು ನಿಟ್ಟುಸಿರುಬಿಟ್ಟರು. ಬೆಳಗ್ಗೆ ಅಲ್ಲಲ್ಲಿ ಸಾಧಾರಣ ಮಳೆಯಾಯಿತು. ಅದರಲ್ಲೂ ನಗರದ ಉತ್ತರದಲ್ಲಿ ಗರಿಷ್ಠ 25.5 ಮಿ.ಮೀ ಮಳೆ ದಾಖಲಾಗಿದೆ. ಉಳಿದೆಡೆ ಕೇವಲ ತುಂತುರು ಹನಿಯಿತು. ಆದರೆ, ಮಳೆ ಪರಿಣಾಮ ಮಾತ್ರ ಮುಂದುವರಿದಿದೆ. ಹಲವಾರು ರಸ್ತೆಗಳು ಭಾನುವಾರ ಕೂಡ ಜಲಾವೃತಗೊಂಡಿದ್ದವು. ಮನೆಗಳಿಗೆ ನುಗ್ಗಿದ ನೀರು ಹೊರಹಾಕುವ ಕೆಲಸ ಮುಂದುವರಿಯಿತು.

ರಾಜಾನುಕುಂಟೆಯಲ್ಲಿ 24.5 ಮಿ.ಮೀ, ಅರಕೆರೆ 25.5, ಬಂಡಿಕೊಡಿಗೇಹಳ್ಳಿ 20, ದೊಡ್ಡಜಾಲ 20.5, ಬ್ಯಾಟರಾಯನಪುರ 8.5, ದೊಡ್ಡಗುಬ್ಬಿ 12, ರಾಧಾಕೃಷ್ಣ ದೇವಸ್ಥಾನದಲ್ಲಿ 6.5 ಮಿ.ಮೀ. ಮಳೆ ದಾಖಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ತಿಳಿಸಿದೆ. ಈ ಮಧ್ಯೆ ಸೋಮವಾರ ಕೂಡ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಆದರೆ, ಕಳೆದ ಮೂರ್‍ನಾಲ್ಕು ದಿನಗಳಿಗೆ ಹೋಲಿಸಿದರೆ, ಮಳೆ ಪ್ರಮಾಣ ತುಸು ಕಡಿಮೆ ಇರಲಿದೆ. ಅಲ್ಲಲ್ಲಿ ಗುಡುಗುಸಹಿತ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next