ಆಲಮಟ್ಟಿ: ಪ್ರವಾಸಿತಾಣ ಆಲಮಟ್ಟಿಗೆ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ. ಕಳೆದ ದಶಕಗಳಿಂದಲೂ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಮಾಡುತ್ತ ಬಂದಿದ್ದರೂ ಕೂಡ ಬಸ್ ನಿಲ್ದಾಣ ನಿರ್ಮಾಣದ ನಾಗರಿಕರ ಕನಸು ನನಸಾಗದೇ ಉಳಿಯುತ್ತಿರುವದು ವ್ಯವಸ್ಥೆಗೆ ಹಿಡಿದ ಕನ್ನಡಿಯಂತಾಗಿದೆ.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿಯವರು ಈ ಭಾಗದ ಶಾಸಕರ ಮನವಿಯ ಮೇರೆಗೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಕೋಟಿಗೂ ಅಧಿಕ ಹಣ ನಿಗದಿ ಮಾಡಿ ಆದೇಶಿಸಿದ್ದರು. ಸಮ್ಮಿಶ್ರ ಸರ್ಕಾರದ ಪತನದ ನಂತರ ನಿಗದಿತ ಕಾಮಗಾರಿಯೂ ಇಲ್ಲ. ಸಂಬಂಧಿಸಿದ ಅನುದಾನವೂ ಇಲ್ಲದಂತಾಗಿದೆ ಎಂದು ನಾಗರಿಕರು ಆಕ್ರೋಶವ್ಯಕ್ತಪಡಿಸಿದ್ದಾರೆ.
ಏಷ್ಯಾಖಂಡದ ಬೃಹತ್ ನೀರಾವರಿ ಯೋಜನೆಗಳಲ್ಲಿ ದ್ವಿತೀಯ ಸ್ಥಾನ ಹೊಂದಿರುವ ಖ್ಯಾತಿ ಆಲಮಟ್ಟಿಗಿದೆ, ಪಟ್ಟಣವು ರೈಲು ಸಂಪರ್ಕ, ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿರುವುದರಿಂದ ರಾಜ್ಯ ಮತ್ತು ಅಂತಾರಾಜ್ಯ ಸೇರಿದಂತೆ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿ ಆಗಮಿಸುವ ಅಂತಾರಾಜ್ಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಿಗರು ಆಲಮಟ್ಟಿಯಲ್ಲಿರುವ ಜಲಾಶಯ, ರಾಕ್ ಉದ್ಯಾನ, ಮೊಘಲ್ ಉದ್ಯಾನ, ಫ್ರೆಂಚ್ ಉದ್ಯಾನ, ಗುಲಾಬಿ ಉದ್ಯಾನ, ಗೋಪಾಲಕೃಷ್ಣ ಉದ್ಯಾನ, ಲವ-ಕುಶ ಉದ್ಯಾನ ಹಾಗೂ ಸಂಗೀತ ನೃತ್ಯ ಕಾರಂಜಿಗಳನ್ನು ವೀಕ್ಷಿಸುತ್ತಾರೆ. ಕೃ.ಮೇ.ಯೋಜನೆಯು ರಾಜ್ಯದ ಬೃಹತ್ ನೀರಾವರಿ ಯೋಜನೆಯಾಗಿರುವುದರಿಂದ ಇಲಾಖೆಯ ಹಲವಾರು ಪ್ರಮುಖ ಕಚೇರಿಗಳನ್ನು ಹೊಂದಿದೆ. ಇದೆಲ್ಲದರ ಪರಿಣಾಮವಾಗಿ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ.
ಆಲಮಟ್ಟಿಗೆ ರೈಲುಗಳ ಮೂಲಕ ಆಗಮಿಸುವ ಪ್ರವಾಸಿಗರು ಪಟ್ಟಣದ ಪ್ರಮುಖ ಸ್ಥಳಗಳನ್ನು ವೀಕ್ಷಿಸಿದ ನಂತರ ಕೂಡಲಸಂಗಮ, ಐಹೊಳೆ, ಪಟ್ಟದಕಲ್ಲು, ಬಾದಾಮಿಗೆ ತೆರಳುತ್ತಾರಲ್ಲದೇ ಬಸವಜನ್ಮಸ್ಥಳ ಬಸವನಬಾಗೇವಾಡಿಗೂ ತೆರಳುತ್ತಾರೆ ಮತ್ತು ಗಣ್ಯರ ಆಗಮನಕ್ಕೆ ಹೆಲಿಪ್ಯಾಡ್ ನಿರ್ಮಿಸಲಾಗಿದೆ.
Related Articles
ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ಹಾಗೂ ಯುಕೆಪಿಯ ಕೇಂದ್ರ ಸ್ಥಾನ ಹೊಂದಿರುವ ಪಟ್ಟಣಕ್ಕೆ ಬಸ್ ನಿಲ್ದಾಣ ಭಾಗ್ಯವಿಲ್ಲದಿರುವುದರಿಂದ ಬೇಸಿಗೆಯ ಬಿರುಬಿಸಿಲಿನಲ್ಲಿ ರಸ್ತೆಯ ಪಕ್ಕದಲ್ಲಿ ನಿಂತು ತಾವು ಪ್ರಯಾಣಿಸುವ ವಾಹನಕ್ಕಾಗಿ ಕಾಯುವ ಸ್ಥಿತಿ ತಲೆದೋರಿದೆ. ಇದರಿಂದ ರಾಜ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳ ನಿಧಾನವೇ ಪ್ರಧಾನ ಎನ್ನುವ ನೀತಿಯಿಂದ ಕಂಗೆಟ್ಟಿರುವ ಪ್ರವಾಸಿಗರು ಹಿಡಿಶಾಪ ಹಾಕುವಂತಾಗಿದೆ.