ಮುಧೋಳ: ತಾಲೂಕಿನ ಹಲಗಲಿ-ವಜ್ಜರಮಟ್ಟಿ ಗ್ರಾಮದ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ.
11 ಕಿ.ಮೀ. ಉದ್ದದ ರಸ್ತೆ ನಿರ್ಮಾಣಗೊಂಡ ಬಳಿಕ ದುರಸ್ತಿಯಾಗದ ಕಾರಣ ಡಾಂಬರು ಕಿತ್ತುಬಂದಿದೆ. ಸವಾರರು ರಸ್ತೆಯಲ್ಲಿ ಸಂಚರಿಸುವಾಗ ಸರ್ಕಸ್ ಮಾಡುವಂತಾಗಿದೆ. ವಜ್ಜರಮಟ್ಟಿ ಹಲಗಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯಿಂದ ಮರಿಕಟ್ಟಿ, ಬರಗಿ ಸೇರಿ ತಿಮ್ಮಾಪುರ ಕ್ರಾಸ್‌ಗೆ ತೆರಳಬಹುದು. ಈ ಮಾರ್ಗದಲ್ಲಿ ಸಂಚರಿಸುವುದರಿಂದ ಅಂದಾಜು 15 ಕಿ.ಮೀ. ಅಂತರ ಕಡಿಮೆಯಾಗುವುದರಿಂದ ಸಾರ್ವಜನಿಕರಿಗೆ ಹಣ ಹಾಗೂ ಸಮಯದ ಉಳಿತಾಯವಾಗುತ್ತದೆ.ಆದರೆ, ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ಸಾರ್ವಜನಿಕರು ಈ ಮಾರ್ಗದಲ್ಲಿ ಸಂಚರಿಸಲು ಹಿಂದೇಟು ಹಾಕುವಂತಾಗಿದೆ.
ಕೃಷಿಕರ ಓಡಾಟ ಹೆಚ್ಚು: ಮುಧೋಳ ನಗರದಿಂದ ಹಲಗಲಿ ಗ್ರಾಮಕ್ಕೆ ಬಹುತೇಕ ಬಸ್‌ಗಳು ಮಂಟೂರು ಅಮಲಝರಿ ಮಾರ್ಗವಾಗಿ ಓಡಾಡುವುದರಿಂದ ವಜ್ಜರಮಟ್ಟಿ-ಹಲಗಲಿ ಗ್ರಾಮದ ರಸ್ತೆಯಲ್ಲಿ ಕೃಷಿಕರು ಹಾಗೂ ಖಾಸಗಿ ವಾಹನ ಸವಾರರೇ ಹೆಚ್ಚು ಓಡಾಡುತ್ತಾರೆ. ರಸ್ತೆಹಾಳಾಗಿರುವುದರಿಂದ ಕಬ್ಬು ತುಂಬಿದ ಟ್ರಾಕ್ಟರ್ ಗಳು ಸಂಚರಿಸುವ ವೇಳೆ ಅಪಘಾತ ಸಂಭವ ಹೆಚ್ಚಿರುತ್ತದೆ. ಬಹುತೇಕ ಕಡೆಯಲ್ಲಿ ಡಾಂಬರು ಕಿತ್ತು ಖಡಿ ಎದ್ದಿದ್ದರಿಂದ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಘಟನೆ ಹಲವಾರು ಬಾರಿ ಈ ರಸ್ತೆಯಲ್ಲಿ ಸಂಭವಿಸಿದೆ.
ಬಸ್ ಸೌಕರ್ಯ ಹೆಚ್ಚಲಿ: ಸದ್ಯ ಮುಧೋಳ-ವಜ್ಜರಮಟ್ಟಿ ಮಾರ್ಗವಾಗಿ ಹಲಗಲಿಗೆ ಬೆಳಗ್ಗೆ ಹಾಗೂ ಸಂಜೆ ವೇಳೆ ಮಾತ್ರ ಎರಡು ಬಸ್‌ಗಳು ಸಂಚರಿಸುತ್ತವೆ. ಬಹುತೇಕ ಬಸ್ ಗಳು ಮಂಟೂರ ಮಾರ್ಗದಿಂದ ತೆರಳುವುದರಿಂದ ಅಂದಾಜು ಆರು ಕಿ.ಮೀ. ಅಂತರ ಹೆಚ್ಚಾಗುತ್ತದೆ. ಅಲ್ಲದೆ ವಜ್ಜರಮಟ್ಟಿ ಮಾರ್ಗದಲ್ಲಿ ಹಲವು ಶಿಕ್ಷಣ ಸಂಸ್ಥೆಗಳಿವೆ. ಮುಧೋಳ ನಗರದಲ್ಲಿನ ತಹಶೀಲ್ದಾರ್ ಕಚೇರಿಯೂ ಇದೇ ಮಾರ್ಗದಲ್ಲಿ ಇರುವುದರಿಂದ ಈ ಮಾರ್ಗದಲ್ಲಿ ಬಸ್ ಸೌಕರ್ಯ ಹೆಚ್ಚಿಸುವುದರಿಂದ ಆಡಳಿತಾತ್ಮಕ ಕಾರ್ಯಕ್ಕೆ ಹೆಚ್ಚು ಅನುಕೂಲವಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯ. ಹಲಗಲಿಯಿಂದ ವಜ್ಜರಮಟ್ಟಿಗೆ ತೆರಳಲು ಈ ರಸ್ತೆ ಹೆಚ್ಚು ಅನುಕೂಲವಾಗಿದೆ. ಆದರೆ ರಸ್ತೆ ಹಾಳಾಗಿರುವುದರಿಂದ ರಸ್ತೆಯಲ್ಲಿ ಸಂಚರಿಸುವುದು ಕಷ್ಟವಾಗಿದೆ. ಈ ಮಾರ್ಗ ಸರಿಪಡಿಸಿ ಬಸ್ ಸೌಕರ್ಯ ಒದಗಿಸಿದರೆ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗುತ್ತದೆ.
-ಗೋವಿಂದಪ್ಪ ತಳವಾರ