Advertisement
ಮೂಲಗಳ ಪ್ರಕಾರ ಸರಕಾರದ ವಿವಿಧ ಇಲಾಖೆಗಳ ಪೈಕಿ ಒಂದು ಇಲಾಖೆಯಲ್ಲಿ ಮಾತ್ರ ನಿಯಮಾವಳಿ ಮೀರಿ ಸಾಕಷ್ಟು ದಿನಗೂಲಿ ನೌಕರರಿಗೆ ಗಳಿಕೆ ರಜೆ ನಗದೀಕರಣ ಸೌಲಭ್ಯ ಒದಗಿಸಿದೆ. ಇದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸರಕಾರ ಗಳಿಕೆ ರಜೆ ನಗದೀಕರಣ ಮಾಡುವಂತಿಲ್ಲ ಎಂಬ ಆದೇಶವನ್ನು ಪುನರುಚ್ಚರಿಸಿ ಈಗಾಗಲೇ ನಗದೀಕರಣ ಮಾಡಿಸಿಕೊಂಡವರಿಂದ ಆ ಹಣ ವಾಸಪ್ ಪಡೆಯುವಂತೆ ಸೂಚಿಸಿದೆ ಎನ್ನಲಾಗಿದೆ.
ದಿನಗೂಲಿ ನೌಕರರನ್ನು ಖಾಯಂಗೊಳಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸರಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ದಿನಗೂಲಿ ನೌಕರರು ಆತಂಕಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮವನ್ನು ಜಾರಿಗೆ ತಂದಿದ್ದ ರಾಜ್ಯ ಸರಕಾರ, 2014ರಲ್ಲಿ ಅದಕ್ಕೆ ನಿಯಮಾವಳಿ ರೂಪಿಸಿತ್ತು. ಈ ಅಧಿನಿಯಮದ ಪ್ರಕಾರ ದಿನಗೂಲಿ ನೌಕರರಿಗೆ ನಿವೃತ್ತಿ ವಯಸ್ಸಿನವರೆಗೆ ಸೇವಾ ಭದ್ರತೆ ಒದಗಿಸಲಾಗಿತ್ತು. ಜತೆಗೆ ವರ್ಷಕ್ಕೆ 30 ದಿನಗಳ ಗಳಿಕೆ ರಜೆ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ, ದಿನಗೂಲಿ ನೌಕರರು ಗಳಿಕೆ ರಜೆಯನ್ನು ಆಯಾ ವರ್ಷ ತೆಗೆದುಕೊಳ್ಳಲು ಅವಕಾಶವಿತ್ತೇ ಹೊರತು ಅದನ್ನು ನಗದೀಕರಿಸಿಕೊಳ್ಳಲು ಅವಕಾಶ ಇರಲಿಲ್ಲ. ಆದರೂ ಇಲಾಖೆಗಳು ದಿನಗೂಲಿ ನೌಕರರಿಗೆ ಗಳಿಕೆ ರಜೆ ನಗದೀಕರಣ ಸೌಲಭ್ಯ ಕಲ್ಪಿಸಿದ್ದವು. ಅಂದರೆ, ವರ್ಷದ 30 ದಿನ ನಿಗದಿಯಾಗಿರುವ ಗಳಿಕೆ ರಜೆಯನ್ನು ಪಡೆಯದಿದ್ದಲ್ಲಿ ಎಷ್ಟು ದಿನ ರಜೆ ಬಾಕಿ ಉಳಿಸಿಕೊಳ್ಳ ಲಾಗಿತ್ತೋ ಅಷ್ಟು ದಿನಗಳ ವೇತನವನ್ನು ದಿನಗೂಲಿ ನೌಕರರಿಗೆ ನೀಡಲಾಗಿತ್ತು. ಆದರೆ, ಇದು ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮಕ್ಕೆ ವ್ಯತಿರಿಕ್ತವಾಗಿದೆ. ಹೀಗಾಗಿ ಗಳಿಕೆ ರಜೆ ನಗದೀಕರಣವನ್ನು ನಿಯಮ ಬಾಹಿರವಾಗಿ ಮಂಜೂರು ಮಾಡಿರುವ ಪ್ರಕರಣಗಳಲ್ಲಿ, ಮಂಜೂರು ಮಾಡಿ ಹೊರಡಿಸಿರುವ ಆದೇಶವನ್ನು ತಕ್ಷಣ ರದ್ದುಪಡಿಸಬೇಕು ಮತ್ತು ಈಗಾಗಲೇ ಪಾವತಿಸಿರುವ ಆರ್ಥಿಕ ಸೌಲಭ್ಯವನ್ನು ಅಂತಹ ದಿನಗೂಲಿ ನೌಕರರಿಂದ ವಸೂಲಿ ಮಾಡಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.