ಕೆಲವು ತಿಂಗಳ ಹಿಂದೆ ಬೆಂಗಳೂರು ಮೂಲದ ಉದ್ಯಮಿಯೊಬ್ಬರು ಕೇರಳದ ಭಗವತಿದೇವಿ ದೇವಸ್ಥಾನಕ್ಕೆ 700 ಕೋಟಿ ರೂಪಾಯಿಯನ್ನು ದಾನ ರೂಪದಲ್ಲಿ ನೀಡಿರುವ ಸುದ್ದಿಯನ್ನು ನೀವು ಕೇಳಿರಬಹುದು.ಈಗ ಆ ಉದ್ಯಮಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. 500 ಕೋಟಿ
ರೂಪಾಯಿ ಬಜೆಟ್‌ನಲ್ಲಿ ತಮ್ಮ ಹೊಸ ಸಿನಿಮಾದ ಟೈಟಲ್ ಲಾಂಚ್ ಮಾಡಿದ್ದಾರೆ.
ಹೀಗೆ ಸಿನಿಮಾಕ್ಕೆ ಬಂದ ಅವರ ಹೆಸರು ಗಾನ ಶರವಣ ಸ್ವಾಮೀಜಿ. ಜಿ.ಎಸ್.ಆರ್.ಫಿಲಂ ಪೊಡಕ್ಷನ್ಸ್ ಎಂಬ ಬ್ಯಾನರ್ ಹುಟ್ಟುಹಾಕಿದ್ದು, ಅದರಡಿ “ಕೃಷ್ಣರಾಜ-4′ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇತ್ತೀಚೆಗೆ ಚಿತ್ರದ ಟೈಟಲ್ ಲಾಂಚ್ ಮಾಡಿದರು. ಟೈಟಲ್ ಲಾಂಚ್ ಬಳಿಕ ಮಾತನಾಡಿದ ನಿರ್ಮಾಪಕ, ಕಥೆಗಾರ ಹಾಗೂ ಸಂಗೀತ ನಿರ್ದೇಶಕರೂ ಆದ ಗಾನ ಶರವಣ ಸ್ವಾಮೀಜಿ, “ಸಂಗೀತ ಕಲೆ ನನಗೆ ರಕ್ತಗತವಾಗಿ ಬಂದಿದೆ.
ಐದಾರು ವರ್ಷದಿಂದ ಸಿನಿಮಾ ಮಾಡುವ ಯೋಜನೆ ಇತ್ತು. ಮೂರು ವರ್ಷಗಳ ಹಿಂದೆ ಒಂದು ಕಥೆಯ ಹೊಳೆಯಿತು. ಐತಿಹಾಸಿಕ ಹಾಗೂ ಸಾಮಾಜಿಕ ಹಿನ್ನೆಲೆ ಇರುವ ಕಥೆ ಹೊಂದಿದ ಈ ಚಿತ್ರಕ್ಕೆ ಕೃಷ್ಣರಾಜ-4 ಎಂಬ ಟೈಟಲ್ ಇಟ್ಟಿದ್ದೇವೆ. ಚಿತ್ರದ ಬಜೆಟ್ 400ರಿಂದ 500 ಕೋಟಿ ಆಗಲಿದೆ. ಲಂಡನ್ನಲ್ಲಿ ನಮ್ಮ ಮ್ಯೂಸಿಕ್ ಸ್ಟುಡಿಯೋ ಇದ್ದು, ಅಲ್ಲೇ ಈ ಚಿತ್ರದ ಮ್ಯೂಸಿಕ್ ಕೆಲಸಗಳು ನಡೆಯಲಿದೆ. ಅಲ್ಲದೆ ಭಾರತದಲ್ಲಿ ಹೆಸರು ಮಾಡಿರುವ ನಿರ್ದೇಶಕರೊಬ್ಬರನ್ನು ನಮ್ಮ ಚಿತ್ರಕ್ಕೆ ಕರೆತರುವ ಆಲೋಚನೆ ಇದೆ. ಇದು ಕನ್ನಡದ ಜೊತೆಗೆ ಬೇರೆ ಬೇರೆ ಭಾಷೆಯಲ್ಲಿ ನಿರ್ಮಾಣವಾಗಲಿದೆ. ಆಯಾ ಭಾಷೆಯ ಖ್ಯಾತ ಕಲಾವಿದರನ್ನೇ ಕರೆತರುತ್ತೇವೆ’ ಎನ್ನುವುದು ಸ್ವಾಮೀಜಿ ಮಾತು.