ಕನ್ನಡ ಚಿತ್ರರಂಗದ ಹೊಸ ಟ್ರೆಂಡ್ ಎಂದರೆ, ಚಿತ್ರಗಳ ವೀಡಿಯೋ ಗೇಮ್ ಮಾಡುವುದು. ಇಂಥದ್ದೊಂದು ಟ್ರೆಂಡ್ ಮೊದಲು ಶುರುವಾಗಿದ್ದು, ಉಪೇಂದ್ರ ನಿರ್ದೇಶನದ ಮತ್ತು ಶಿವರಾಜಕುಮಾರ್ ಅಭಿನಯದ “ಓಂ’ ಚಿತ್ರದಿಂದ. ಕಳೆದ ವರ್ಷ “ಓಂ’ ಚಿತ್ರ ಹೊಸ ತಂತ್ರಜ್ಞಾನದಲ್ಲಿ ಬಿಡುಗಡೆಯಾಗಿತ್ತು.
ಆಗ ಒಂದಿಷ್ಟು ಆಸಕ್ತರು ಚಿತ್ರಕ್ಕೆ ಸಂಬಂಧಿಸಿದ ವೀಡಿಯೋ ಗೇಮ್ ಮಾಡಿದ್ದರು. ಆ ನಂತರ “ಲೀ’ ಎಂಬ ಗೇಮ್ ಸಹ ಮಾಡಲಾಗಿತ್ತು. ಯಾಕೆ ಈ ಮಾತು ಎಂದರೆ, ನಾಳೆ ಬಿಡುಗಡೆಯಾಗುತ್ತಿರುವ ಸುದೀಪ್ ಅಭಿನಯದ “ಹೆಬ್ಬುಲಿ’ ಚಿತ್ರದ ಮೊಬೈಲ್ ಗೇಮ್‌ವೊಂದು ಎಲ್ಲೆಡೆ ಸುದ್ದಿ ಮಾಡುತ್ತಿದೆ.
ಈ ಮೊಬೈಲ್ ಗೇಮ್ ಮಾಡಿರುವುದು ಸುದೀಪ್ ಅವರ ಅಭಿಮಾನಿಗಳು. ಸುದೀಪ್ ಅವರ ಒಂದಿಷ್ಟು ಅಭಿಮಾನಿಗಳೆಲ್ಲಾ ಸೇರಿ, ಸಂತೋಷ್ ಅವರ ನೇತೃತ್ವದಲ್ಲಿ ಒಂದು ಮೊಬೈಲ್ ಗೇಮ್ ಮಾಡಿದ್ದಾರೆ. ಗ್ರಾಫಿಕ್ ಡಿಸೈನರ್ ಆಗಿರುವ ಸಂತೋಷ್, ತಮ್ಮ ತಂಡದೊಂದಿಗೆ ಕಳೆದ ಎರಡು ತಿಂಗಳ ಕಾಲ ಕೂತು ಈ ಗೇಮ್ ಮಾಡಿದ್ದಾರೆ.
ಈ ಗೇಮ್ ಒಂದು ಸಾಹಸಮಯ ಗೇಮ್ ಎಂದರೆ ತಪ್ಪಿಲ್ಲ. ಕಾಶ್ಮೀರದ ಕಾಡಿನೊಳಗೆ ಒಂದಿಷ್ಟು ಭಯೋತ್ಪಾದಕರು ಅಡಗಿಕೊಂಡು ಕುಳಿತಿದ್ದಾರೆ. ಪಕ್ಕದ ಒಂದು ಹಳ್ಳಿಯನ್ನು ಹೈಜಾಕ್ ಮಾಡಿದ್ದಾರೆ. ಅಲ್ಲಿಗೆ ಎಂಟ್ರಿ ಕೊಡುವ ಪ್ಯಾರಾ ಕಮಾಂಡೋ ರಾಮ್ ಅಲಿಯಾಸ್ ಹೆಬ್ಬುಲಿ ಮತ್ತು ತಂಡದವರು,
ಹೇಗೆ ಅಲ್ಲಿರುವ ಟೆರರಿಸ್ಟ್‌ಗಳನ್ನು ಸದೆ ಬಡಿಯುತ್ತಾರೆ ಎನ್ನುವುದು ಈ ಗೇಮ್‌ನ ಸಾರಾಂಶ. ಥರ್ಡ್ ಪರ್ಸನ್ ಶೂಟರ್ ಗೇಮ್ ಎಂದು ಕರೆಯಲ್ಪಡುವ ಈ ಮೊಬೈಲ್ ಗೇಮ್ ಈಗಾಗಲೇ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಆ್ಯಂಡ್ರಾಯ್ಡ ಬಳಕೆದಾರರು, ಈ ಗೇಮ್ ಡೌನ್‌ಲೋಡ್ ಮಾಡಿಕೊಂಡು ಆಡಬಹುದು.