ಸಿನಿಮಾ ಮತ್ತು ರಾಜಕೀಯ ಈ ಎರಡೂ ರಂಗಗಳ ನಡುವೆಯೂ ಒಂದು ಬಿಡಿಸಲಾಗದ ನಂಟಿದೆ ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿರುವ ವಿಷಯ. ಅದರಲ್ಲೂ ಈ ನಂಟು ಎಷ್ಟರ ಮಟ್ಟಿಗೆ ಗಟ್ಟಿಯಾಗಿದೆ ಎಂಬುದು ಚುನಾವಣೆ ಹತ್ತಿರವಾಗುತ್ತಿದ್ದಂತೆ ಜಗಜ್ಜಾಹೀರಾಗುತ್ತದೆ. ಸದ್ಯ ರಾಜ್ಯ ರಾಜಕಾರಣದಲ್ಲಿ ನಿಧಾನವಾಗಿ ಚುನಾವಣೆಯ ಕಾವು ಏರತೊಡಗಿದೆ. ಹೇಗಾದರೂ ಮಾಡಿ ಅಧಿಕಾರದ ಗದ್ದುಗೆಯನ್ನು ಹಿಡಿಯಬೇಕೆಂಬ ಪಣಕ್ಕೆ ಬಿದ್ದಿರುವ ರಾಜಕೀಯ ಪಕ್ಷಗಳು ಮತದಾರರನ್ನು ಆಕರ್ಷಿಸಲು, ಓಲೈಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ.
ಇನ್ನು ಪ್ರತಿಬಾರಿ ಚುನಾವಣೆ ಬಂದಾಗಲೂ ಚುನಾವಣಾ ಕಣದಲ್ಲಿ ಮತ್ತಷ್ಟು ಬಿಸಿ ಏರಿಸಿ, ರಂಗು ತುಂಬುವುದು ಸಿನಿಮಾ ತಾರೆಯರು ಎಂದರೆ ತಪ್ಪಾಗಲಾರದು. ಹಾಗೆಯೇ ಈ ಬಾರಿಯೂ ಚುನಾವಣೆಯ ಹೊಸ್ತಿಲಿನಲ್ಲಿರುವ ಕರ್ನಾಟಕ ರಾಜ್ಯ ರಾಜಕೀಯ ಅಂಗಳಕ್ಕೆ ನಿಧಾನವಾಗಿ ಚಿತ್ರರಂಗದ ತಾರೆಯರು, ಕಲಾವಿದರು ಮತ್ತು ತಂತ್ರಜ್ಞರ ಪ್ರವೇಶವಾಗುತ್ತಿದೆ.ಹೊಸವರ್ಷ ಆರಂಭವಾಗುತ್ತಿದ್ದಂತೆ, ಹೊಸ ಜೋಶ್‌ನಲ್ಲಿ ರಾಜಕೀಯ ಚಟುವಟಿಕೆಗಳು ಗದಿಗೆದರಿದ್ದು, ರಾಜಕೀಯ ಪಕ್ಷಗಳು ಮತ್ತು ರಾಜಕೀಯ ನೇತಾರರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ತಮ್ಮ “ಶಕ್ತಿ ಪ್ರದರ್ಶನ’ ಮಾಡಿ, ವರ್ಚಸ್ಸು ಹೆಚ್ಚಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ “ಉತ್ಸವ’ಗಳು ಮತ್ತು “ಹಬ್ಬ’ಗಳ ಹೆಸರಿನಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ “ರಾಜಕೀಯ ಪ್ರಾಯೋಜಿತ’ ಕಾರ್ಯಕ್ರಮಗಳಲ್ಲಿ ಸಿನಿಮಾ ತಾರೆಯರು ಮತ್ತು ಕಲಾವಿದರೇ ಆಕರ್ಷಣೀಯ ಕೇಂದ್ರ ಬಿಂದುವಾಗುತ್ತಿದ್ದಾರೆ.
ಇದೆಲ್ಲವೂ ರಾಜಕೀಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳು. ಈ ಕಾರ್ಯಕ್ರಮಕ್ಕೆ ತಾರೆಯರು ಮತ್ತು ಕಲಾವಿದರೇ ಸೆಂಟರ್ ಆಫ್ ಅಟ್ರಾಕ್ಷನ್ ಎಂಬುದನ್ನು ಬಹುತೇಕ ಜನಸಾಮಾನ್ಯರೆಲ್ಲರೂ ಒಪ್ಪುವಂತಿದ್ದರೂ, ತಾರೆಯರು ಮಾತ್ರ ಇದನ್ನು ಒಪ್ಪಲು ಸುತಾರಾಂ ತಯಾರಿಲ್ಲ. “ಕಲಾವಿದರಿಗೆ ಪಕ್ಷ-ವ್ಯಕ್ತಿಗಳು ಎಂಬ ಬೇಧ-ಭಾವವಿರುವುದಿಲ್ಲ. ಸಾವಿರಾರು ಜನರನ್ನು ರಂಜಿಸುವ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಿದಾಗ ಕಲಾವಿದರಾಗಿ ಇಲ್ಲವೆನ್ನಲಾಗದು. ನೆರೆದಿದ್ದವರಿಗೆ ಮನರಂಜನೆ ನೀಡುವುದು ನಮ್ಮ ಕರ್ತವ್ಯ’ ಎಂಬುದು ಇಂಥ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಕಲಾವಿದರ ಮಾತು. ಅದೇನೆಯಾಗಿದ್ದರೂ, ಅದರ ಹಿಂದಿರುವ ವಾಸ್ತವ ಸತ್ಯವನ್ನು ಅರ್ಥ ಮಾಡಿಕೊಳ್ಳದಷ್ಟು ದಡ್ಡರಲ ಜನ ಸಾಮಾನ್ಯರು ಎಂಬುದೂ ಕೂಡ ಅಷ್ಟೇ ಸತ್ಯ.ಇನ್ನು ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಅಕ್ಕಪಕ್ಕದ ರಾಜ್ಯಗಳಂತೆ ಸಿನಿಮಾನಟ-ನಟಿಯರು ರಾಜಕೀಯ ಪಕ್ಷಗಳ ಜೊತೆ ನೇರಾ ನೇರವಾಗಿ ಗುರುತಿಸಿಕೊಳ್ಳುವುದು ತುಂಬ ಕಡಿಮೆ ಎಂದೇ ಹೇಳಬಹುದು.
ಆದರೂ ಹೇಳಿ-ಕೇಳಿ ರಾಜಕಾರಣ ಎಂಬುದು ಎಲ್ಲರನ್ನೂ ಕೈ ಬೀಸಿ ಕರೆಯುವುದರಿಂದ, ಚುನಾವಣೆ ಹತ್ತಿರವಾಗುತ್ತಿದ್ದಂತೆ, ಕೆಲವು ತಾರೆಯರು ಮತ್ತು ಕಲಾವಿದರು ಕೆಲವು ರಾಜಕೀಯ ಪಕ್ಷಗಳ ಜೊತೆ ನೇರವಾಗಿ ಗುರುತಿಸಿಕೊಂಡರೆ, ಇನ್ನು ಕೆಲವು ತಾರೆಯರುಮತ್ತು ಕಲಾವಿದರು “ಪಕ್ಷ ರಾಜಕಾರಣ’ ದಿಂದ ಕೊಂಚ ಮಟ್ಟಿಗೆ ಅಂತರ ಕಾಯ್ದುಕೊಂಡು ತಮಗೆ ಬೇಕಾದ ಅಭ್ಯರ್ಥಿಗಳ ಪರವಾಗಿ “ಸ್ನೇಹ-ಸಂಬಂಧ’ದಿಂದ ಪ್ರಚಾರ ಕಾರ್ಯಗಳಿಗೆ ಇಳಿಯುತ್ತಾರೆ. ತಮ್ಮ ನೆಚ್ಚಿನ ಪಕ್ಷಗಳು ಮತ್ತು ತಮ್ಮವರ ಪರವಾಗಿ ಬ್ಯಾಟಿಂಗ್ ಮಾಡಲು ರೆಡಿಯಾಗುತ್ತಿದ್ದಾರೆ. ಹಿಂದಿನ ಹಲವು ಚುನಾವಣೆಗಳಲ್ಲಿ ರಾಜ್ಯದ ಜನತೆ ಕೂಡ ಇದೆಲ್ಲವನ್ನೂ ಹತ್ತಿರದಿಂದ ಕಂಡಿದ್ದಾರೆ.
ನಟಿಯರಾದ ಶ್ರುತಿ, ತಾರಾ ಅನುರಾಧಾ, ಮಾಳವಿಕಾ ಅವಿನಾಶ್, ಜಗ್ಗೇಶ್, ಉಮಾಶ್ರೀ, ಭಾವನಾ ರಾಮಣ್ಣ, ಜಯಮಾಲಾ, ರಮ್ಯಾ, ಪೂಜಾ ಗಾಂಧಿ, ಸಾಧುಕೋಕಿಲ, ಮುಖ್ಯಮಂತ್ರಿ ಚಂದ್ರು ಹೀಗೆ ಅನೇಕ ಕಲಾ ವಿ ದರು ನೇರವಾಗಿ ಕೆಲವು ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರೆ, ಸ್ಟಾರ್‌ಗಳಾದ ದರ್ಶನ್, ಯಶ್, ಸುದೀಪ್, ದುನಿಯಾ ವಿಜಯ್, ಲೂಸ್‌ಮಾದ ಯೋಗಿ, ನಟಿಯರಾದ ರಚಿತಾ ರಾಮ್ ಮೊದಲಾದವರು ಎಲ್ಲೂ ರಾಜಕೀಯ ಪಕ್ಷದ ನಂಟು ಅಂಟಿಸಿಕೊಳ್ಳದೆ ತಮಗೆ ಬೇಕಾದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯ ಮಾಡಿ, ಇಲ್ಲಿಯೂ ಸೈ ಅಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.
ಇನ್ನು ಈ ಬಾರಿ ಚುನಾವಣೆಯಲ್ಲಿ ಯಾರೆಲ್ಲ ಸ್ಟಾರ್ ಯಾವ ಪಕ್ಷದ ಪರವಾಗಿ ಅಖಾಡಕ್ಕಿಳಿಯುತ್ತಾರೆ, ಯಾವ ಅಭ್ಯರ್ಥಿಯ ಪರವಾಗಿ ಬ್ಯಾಟಿಂಗ್ ಮಾಡುತ್ತಾರೆ ಅನ್ನೋದು ಇನ್ನೇನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ಒಟ್ಟಾರೆ ಈ ಬಾರಿ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಸಿನಿಮಾಗಳ ಬಿಡುಗಡೆಯ ಸಂಖ್ಯೆಯೂ ಕೊಂಚ ಇಳಿಮುಖವಾಗುತ್ತಿದ್ದು, ಅನೇಕ ಸ್ಟಾರ್ ನಟ-ನಟಿಯರನ್ನು ಥಿಯೇಟರ್ ನಲ್ಲಿ ನೋಡಬೇಕು ಎಂದುಕೊಳ್ಳುತ್ತಿದ್ದ ಪ್ರೇಕ್ಷಕರಿಗೆ, ನೇರವಾಗಿ ದರ್ಶನ ಭಾಗ್ಯ ಸಿಗುವ ಸಾಧ್ಯತೆಗಳು ದಟ್ಟವಾಗಿದೆ.
ಜಿ.ಎಸ್.ಕಾರ್ತಿಕ ಸುಧನ್