Advertisement

ಸಿನಿ ಮಾಯೆ; ಸಿನಿಮಾ ಎಕ್ಸ್‌ಪ್ರೆಸ್‌ನಲ್ಲಿ 107 ಬೋಗಿಗಳು !

11:50 AM Jul 28, 2017 | Team Udayavani |

ಕನ್ನಡ ಚಿತ್ರರಂಗ ಸಿನಿಮಾ ಬಿಡುಗಡೆಯ ವಿಷಯದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಕಳೆದ ವರ್ಷ ಜುಲೈವರೆಗೆ ಹಾಗೂ ಈ ವರ್ಷದ ಜುಲೈವರೆಗೆ ಬಿಡುಗಡೆಯಾದ ಸಿನಿಮಾಗಳ ಪಟ್ಟಿಯನ್ನು ತೆಗೆದು ನೋಡಿದರೆ ನಿಮಗೆ ಆ ಸ್ಥಿರತೆ ಏನೆಂದು ಗೊತ್ತಾಗುತ್ತದೆ. ಹೌದು, 2016 ಜುಲೈ ತಿಂಗಳಾಂತ್ಯಕ್ಕೆ 107 ಕನ್ನಡ ಸಿನಿಮಾಗಳು ಬಿಡುಗಡೆ ಕಂಡಿದ್ದವು. ಈ ವರ್ಷ ಕೂಡಾ ಅಂದರೆ 2017 ಜುಲೈ ಅಂತ್ಯಕ್ಕೆ 107 ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಅಚ್ಚರಿಯಾದರೂ ಸತ್ಯ. ಇದನ್ನು ಕಾಕತಾಳೀಯ ಎನ್ನಬೇಕಷ್ಟೇ. ಯಾರೂ ಪ್ಲ್ರಾನ್‌ ಮಾಡಿ, ಈ ನಂಬರ್‌ಗೆàಮ್‌ ಮಾಡಿಲ್ಲ. ಏಳು ತಿಂಗಳಲ್ಲಿ ಬಿಡುಗಡೆಯಾದ ಸಿನಿಮಾಗಳ ಸಂಖ್ಯೆ 100ರ ಗಡಿದಾಟಿದೆ. 

Advertisement

ವರ್ಷ ಪೂರೈಸಲು ಇನ್ನೂ ಐದು ತಿಂಗಳುಗಳು ಬಾಕಿ ಇವೆ. ಈ ಐದು ತಿಂಗಳಲ್ಲಿ ಏನಿಲ್ಲವೆಂದರೂ 60+ ಸಿನಿಮಾಗಳು ಬಿಡುಗಡೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಲ್ಲೊಂದು ಅಂಶವನ್ನು ನಾವು ಗಮನಿಸಲೇಬೇಕು. ಅದು ಕಳೆದ ಎರಡು ತಿಂಗಳಲ್ಲಿ ಹೆಚ್ಚಿದ ಬಿಡುಗಡೆಯ ಭರಾಟೆ. ಹಾಗೆ ನೋಡಿದರೆ ಮೇವರೆಗೆ ನಿಧಾನಗತಿಯಲ್ಲಿ ಸಾಗುತ್ತಿದ್ದ ಚಿತ್ರಗಳ ಬಿಡುಗಡೆಯು, ಜೂನ್‌ ಹಾಗೂ ಜುಲೈಯಲ್ಲಿ ಒಮ್ಮೆಲೇ ಏರಿಕೆಯಾಗಿದೆ. ಮೇವರೆಗೆ  ಬಿಡುಗಡೆಯಾಗಿದ್ದು 67 ಸಿನಿಮಾಗಳು. ಈಗ ಅದರ ಸಂಖ್ಯೆ 107. ಅಂದರೆ ಕಳೆದ ಎರಡು ತಿಂಗಳಲ್ಲಿ 40 ಸಿನಿಮಾಗಳು ಬಿಡು ಗಡೆಯಾಗಿವೆ.  ವಾರಕ್ಕೆ ಏನಿಲ್ಲವೆಂದರೂ ಸರಾಸರಿ ನಾಲ್ಕು ಸಿನಿಮಾಗಳು ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಾ ಬಂದಿವೆ. 

ವರ್ಷದಿಂದ ವರ್ಷಕ್ಕೆ ಬಿಡುಗಡೆಯ ಸಂಖ್ಯೆ ಜಾಸ್ತಿಯಾಗುತ್ತಿದೆ ನಿಜ. ಹಾಗಂತ ಗೆಲುವಿನ ಪ್ರಮಾಣ ಎಷ್ಟಿದೆ ಎಂದರೆ ಅದಕ್ಕೆ ಉತ್ತರಿಸೋದು ಕಷ್ಟ. ನೀವು ಈ ವರ್ಷ ಬಿಡುಗಡೆಯಾದ ಸಿನಿಮಾಗಳ ಪಟ್ಟಿಯನ್ನು ತೆರೆದು ನೋಡಿದರೆ ಅದರಲ್ಲಿ ದೊಡ್ಡ ಯಶಸ್ಸು ಸಿಕ್ಕಿರೋದು ಈ ಬಾರಿ ಸ್ಟಾರ್‌ಗಳಿಗೆ ಎಂದರೆ ಹೊಸಬರಿಗೆ ಬೇಸರವಾಗಬಹುದು. ಈ ವರ್ಷ ಸುದೀಪ್‌, ಪುನೀತ್‌, ಶಿವರಾಜಕುಮಾರ್‌ ಅವರಿಗೆ ಈ ವರ್ಷದ ಆರಂಭದಲ್ಲೇ ಗೆಲುವು ಸಿಕ್ಕಿದೆ. ಸುದೀಪ್‌ ಅವರ “ಹೆಬ್ಬುಲಿ’, ಪುನೀತ್‌ ರಾಜಕುಮಾರ್‌ ಅವರ “ರಾಜಕುಮಾರ’ ಹಾಗೂ ಶಿವರಾಜಕುಮಾರ್‌ ಅವರ “ಬಂಗಾರ ಸನ್‌ಆಫ್ ಬಂಗಾರದ ಮನುಷ್ಯ’ ಚಿತ್ರಗಳು ಯಶಸ್ಸಿನ ಪಟ್ಟಿ ಸೇರಿವೆ. 

ನೀವೇ ಸೂಕ್ಷ್ಮವಾಗಿ ಗಮನಿಸಿ ಈ ಏಳು ತಿಂಗಳಲ್ಲಿ ಹೊಸಬರ ಯಾವ ಚಿತ್ರವೂ ದೊಡ್ಡ ಮಟ್ಟದ ಯಶಸ್ಸು ಕಂಡಿಲ್ಲ. ಹಾಗಂತ ಅವರ ಕಾನ್ಸೆಪ್ಟ್ ಸರಿ ಇರಲಿಲ್ಲ ಅಥವಾ ಸಿನಿಮಾ ಚೆನ್ನಾಗಿರಲಿಲ್ಲ ಎಂದರ್ಥವಲ್ಲ. ಸಾಕಷ್ಟು ಮಂದಿ ಹೊಸಬರು ವಿಭಿನ್ನ ಕಥಾವಸ್ತುವಿನೊಂದಿಗೆ ಸಿನಿಮಾ ಮಾಡಿದ್ದಾರೆ. ವಿಮರ್ಶಕರಿಂದಲೂ ಅದು ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ, ಥಿಯೇಟರ್‌ನಲ್ಲಿ ನಿಂತು, ಪ್ರೇಕ್ಷಕರನ್ನು ಸೆಳೆದು ಬಿಝಿನೆಸ್‌ ಮಾಡುವಲ್ಲಿ ಆ ಸಿನಿಮಾಗಳು ವಿಫ‌ಲವಾಗಿವೆಯಷ್ಟೇ. ಆ ಮಟ್ಟಿಗೆ ಮೊನ್ನೆ ಮೊನ್ನೆ ತೆರೆಕಂಡ ಸಂಪೂರ್ಣ ಹೊಸಬರ “ಒಂದು ಮೊಟ್ಟೆಯ ಕಥೆ’ ಚಿತ್ರದ ಕಾನ್ಸೆಪ್ಟ್ ಜೊತೆಗೆ ಕಲೆಕ್ಷನ್‌ ಚೆನ್ನಾಗಿದೆ. 

ಹೊಸಬರದ್ದೇ ಸಿನಿಮಾ ಹೆಚ್ಚು: ಹೊಸಬರ ಸೋಲು-ಗೆಲುವು ಮುಖ್ಯವಲ್ಲ. ಆದರೆ, ಚಿತ್ರರಂಗಕ್ಕೆ ಬಂದು ಸಿನಿಮಾ ಮಾಡೋದು ಸುಲಭದ ಕೆಲಸವಲ್ಲ. ಆ ಮಟ್ಟಿಗೆ ಈ ಬಾರಿ ಹೊಸಬರನ್ನು ಮೆಚ್ಚಬೇಕು. ಏಕೆಂದರೆ, ಇಲ್ಲಿವರೆಗೆ ಬಿಡುಗಡೆಯಾದ 107 ಸಿನಿಮಾಗಳಲ್ಲಿ ಸುಮಾರು 60+ ಸಿನಿಮಾಗಳು ಹೊಸಬರದ್ದು ಎಂದರೆ ನೀವು ನಂಬಲೇಬೇಕು. ಸ್ಟಾರ್‌ಗಳ, ಈಗಾಗಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡವರ ಸಿನಿಮಾ ಎಂದು ಲೆಕ್ಕಹಾಕಿ ತೆಗೆದರೂ ಆ ಸಂಖ್ಯೆ 20 ದಾಟುವುದಿಲ್ಲ. ಅಲ್ಲಿಗೆ ನೀವೇ ಲೆಕ್ಕ ಹಾಕಿ, 107ರಲ್ಲಿ ಉಳಿದವರ ಪಾಲು ಎಷ್ಟು ಎಂದು. ಇಲ್ಲಿ ಹೊಸಬರು ಎಂದರೆ ಸಂಪೂರ್ಣ ಹೊಸಬರು ಎನ್ನುವಂತಿಲ್ಲ. ಬಹುತೇಕ ಸಿನಿಮಾಗಳಲ್ಲಿ ತಾರಾಗಣ ಹೊಸಬರದಾಗಿದ್ದು, ನಿರ್ದೇಶಕ ಒಂದೆರಡು ಸಿನಿಮಾ ಮಾಡಿದವರಾಗಿರುತ್ತಾರೆ. ಈ ತರಹದ ಕಾಂಬಿನೇಶನ್‌ನ ಸಿನಿಮಾಗಳು ಕೂಡಾ ಬಂದಿವೆ. ಹಾಗಾಗಿ, ಈ ವರ್ಷ ಕೂಡಾ ಬಿಡುಗಡೆಯಲ್ಲಿ ಹೊಸಬರು ಮೇಲುಗೈ ಸಾಧಿಸುತ್ತಾರೆ. ಚಿತ್ರಗಳ ಸೋಲು-ಗೆಲುವು ಚಿತ್ರರಂಗಕ್ಕೆ ಹೊಸದಾಗಿ ಬರುವವರನ್ನು ತಡೆಯುವುದಿಲ್ಲ ಎಂಬುದು ಸಾಬೀತಾಗಿದೆ. ಬಂದ ಸಿನಿಮಾಗಳೆಲ್ಲವೂ ಗೆಲ್ಲಬೇಕೆಂಬ ನಿಯಮವಿಲ್ಲ. ಹಾಗಾಗಿಯೇ ಒಂದು ನಂಬಿಕೆಯೊಂದಿಗೆ ಚಿತ್ರರಂಗಕ್ಕೆ ದಿನದಿಂದ ದಿನಕ್ಕೆ ಹೊಸಬರು ಬರುತ್ತಲೇ ಇದ್ದಾರೆ. ಕೆಲವರ ಪ್ರತಿಭೆ ಪ್ರವರ್ಧಮಾನಕ್ಕೆ ಬರಲು ಒಂದೆರಡು ವರ್ಷ ತೆಗೆದುಕೊಳ್ಳುತ್ತದೆ. ಅದೇ ನಂಬಿಕೆಯೊಂದಿಗೆ ಚಿತ್ರರಂಗಕ್ಕೆ ಬಂದ ಹೊಸಬರು ಪ್ರಯತ್ನಿಸುತ್ತಲೇ ಇದ್ದಾರೆ. ಹಾರರ್‌, ಕಾಮಿಡಿ, ನೈಜ ಘಟನೆ, ಲವ್‌ ಸೇರಿದಂತೆ ಅನೇಕ ವಿಷಯಗಳೊಂದಿಗೆ ಹೊಸಬರು ಪ್ರಯತ್ನಿಸುತ್ತಿರೋದಂತೂ ಸುಳ್ಳಲ್ಲ. 

Advertisement

ಮೊದಲೇ ಹೇಳಿದಂತೆ ಇನ್ನೂ ಏಳು ತಿಂಗಳಿದೆ. ಈ ಏಳು ತಿಂಗಳಲ್ಲಿ ಸ್ಟಾರ್‌ಗಳ, ಹೊಸಬರ ಸಾಕಷ್ಟು ಸಿನಿಮಾಗಳಿವೆ. ಆ ಚಿತ್ರಗಳು ಯಶಸ್ಸು ಕಂಡರೆ ವರ್ಷದ ಯಶಸ್ಸಿನ ಪ್ರಮಾಣ ಏರಿಕೆಯಾಗಲೂಬಹುದು. ಪುನೀತ್‌ ರಾಜಕುಮಾರ್‌ ಅವರ “ಅಂಜನೀಪುತ್ರ’, ದರ್ಶನ್‌ ಅವರ “ತಾರಕ್‌’, ಶಿವರಾಜಕುಮಾರ್‌ ಅವರ “ಮಾಸ್‌ ಲೀಡರ್‌’ ಮತ್ತು “ಟಗರು’, ಯಶ್‌ರ “ಕೆಜಿಎಫ್’, ಗಣೇಶ್‌ ಅಭಿನಯದ “ಮುಗುಳು ನಗೆ’ ಮತ್ತು “ಚಮಕ್‌’, ಉಪೇಂದ್ರ ಅಭಿನಯದ “ಉಪೇಂದ್ರ ಮತ್ತೆ ಹುಟ್ಟಿ ಬಾ’ ಚಿತ್ರಗಳು ಈ ವರ್ಷವೇ ತೆರೆಕಾಣಲಿವೆ. ಜೊತೆಗೆ ಈಗಾಗಲೇ ಟ್ರೇಲರ್‌ ಹಾಗೂ ಹಾಡುಗಳ ಮೂಲಕ ಭರವಸೆ ಮೂಡಿಸಿರುವ ಹೊಸಬರ ಚಿತ್ರಗಳು ಕೂಡಾ ಬಿಡುಗಡೆಯ ಪಟ್ಟಿಯಲ್ಲಿವೆ. 

ಕಳೆದ ವರ್ಷದ ಮೊದಲ ಏಳು ತಿಂಗಳಿಗೆ ಹೋಲಿಸಿದರೆ, ಈ ವರ್ಷ ಸಹ ಅಷ್ಟೇ ಸಂಖ್ಯೆಯ ಚಿತ್ರಗಳು ಬಿಡುಗಡೆಯಾಗಿವೆ. ಇನ್ನು ವರ್ಷಾಂತ್ಯಕ್ಕೆ ಕನ್ನಡ ಚಿತ್ರರಂಗ ಅಂದಾಜು 170 ಕನ್ನಡ ಸಿನಿಮಾಗಳಿಗೆ ಸಾಕ್ಷಿಯಾಗಬಹುದು. ಕಳೆದ ವರ್ಷ 171 ಕನ್ನಡ ಸಿನಿಮಾಗಳು ಬಿಡುಗಡೆಯಾಗಿದ್ದವು. ಹದಿಮೂರು ತುಳು ಸಿನಿಮಾಗಳು ಸೇರಿ ಒಟ್ಟು 184 ಸಿನಿಮಾಗಳಿಗೆ ಕನ್ನಡ ಚಿತ್ರರಂಗ ಸಾಕ್ಷಿಯಾಗಿತ್ತು. ಈ ವರ್ಷವೂ ಅದೇ ನಂಬರ್‌ ರಿಪೀಟ್‌ ಆಗುವ ಸಾಧ್ಯತೆಗಳಿವೆ. ಕೆಲವೊಮ್ಮೆ ಕೊನೆಯ ಓವರ್‌ ಇಡೀ ಪಂದ್ಯದ ದಿಶೆಯನ್ನೇ ಬದಲಿಸುವಂತೆ, ವರ್ಷದ ಕೊನೆಯಲ್ಲಿ ಅಂಥದ್ದೊಂದು ಓವರ್‌ ಬರದಿದ್ದರೆ, 180 ಪ್ಲಸ್‌ ಚಿತ್ರಗಳೇ ಬಿಡುಗಡೆಯಾಗಬಹುದು.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next