ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renukaswamy case) ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್ (Actor Darshan) ಪರಪ್ಪನ ಅಗ್ರಹಾರದಲ್ಲಿ ರಾಜಾರೋಷವಾಗಿರುವ ಫೋಟೋ ವೈರಲ್ ಆಗಿರುವ ಬೆನ್ನಲ್ಲೇ ಜೈಲಿನ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳು ಎದ್ದಿದೆ.
ಕೊಲೆ ಪ್ರಕರಣದಲ್ಲಿ ಬಂಧನವಾಗಿದ್ದರೂ ದರ್ಶನ್ ಅವರಿಗೆ ಪಶ್ಚಾತ್ತಾಪವೇ ಕಾಡುತ್ತಿಲ್ಲ. ಜೈಲಿನಲ್ಲಿ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ, 11ನೇ ಆರೋಪಿ ನಾಗರಾಜ್ ಜತೆ ಕೂತುಕೊಂಡು ಕೈಯಲ್ಲಿ ಸಿಗರೇಟ್ ಹಿಡಿದು, ಕಾಫಿ ಕಪ್ ಹಿಡಿದಿಟ್ಟುಕೊಂಡು ಹಾಯಾಗಿ ಇದ್ದಾರೆ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.
ಫೋಟೋ ಬಳಿಕ ದರ್ಶನ್ ವಿಡಿಯೋ ಕಾಲ್ ಮಾಡಿ ಮಾತನಾಡಿರುವುದು ಕೂಡ ವೈರಲ್ ಆಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಈ ಲೋಪಕ್ಕೆ ಕಾರಣರಾದ 7 ಮಂದಿ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶಿಸಿದೆ.
ಇದನ್ನೂ ಓದಿ: Minu Muneer: ನಟ ಜಯಸೂರ್ಯ, ಮುಕೇಶ್ ಸೇರಿ 6 ಮಂದಿಯ ವಿರುದ್ಧ ಕಿರುಕುಳದ ಆರೋಪ ಮಾಡಿದ ನಟಿ
ಈ ಫೋಟೋ ಬಗ್ಗೆ ಚರ್ಚೆ ಜೋರಾಗುತ್ತಿರುವ ಬೆನ್ನಲ್ಲೇ ಇದು ನಕಲಿ ಫೋಟೋವೆಂದು ನಿರ್ದೇಶಕರೊಬ್ಬರು ಹೇಳಿದ್ದಾರೆ.
ತರುಣ್ ಸುಧೀರ್ ಹಿರಿಯ ಸಹೋದರ ನಿರ್ದೇಶಕ ನಂದಕಿಶೋರ್ (Director Nanda Kishore) ದರ್ಶನ್ ಜೈಲಿನಲ್ಲಿ ಸಿಗರೇಟ್ ಎಳೆಯುತ್ತಿರುವ ಫೋಟೋ ಬಗ್ಗೆ ಮಾತನಾಡಿದ್ದಾರೆ.
“ಇದು ಯಾವುದೋ ಒಂದು ಕ್ಷಣದ ಭಾಗವಷ್ಟೇ. ಅವರು ಜೈಲಿನ ಒಳಗಡೆ ಯಾವ ಮನಸ್ಥಿತಿಯಲ್ಲಿ ಇದ್ದಾರೆ ಅನ್ನೋದು ಮುಖ್ಯ. ಅವರು ಅಳುತ್ತಿರುವ ಪೋಟೋ ತೆಗೆಯಲು ಸಾಧ್ಯವಾಗಿಲ್ವಾ? ಅವರು ಬೇಜಾರಲ್ಲಿ ಇರುವ ಪೋಟೋ ತೆಗೆಯಲು ಸಾಧ್ಯವಾಗಿಲ್ವಾ?” ಎಂದು ಪ್ರಶ್ನಿಸಿದ್ದಾರೆ.
“ಅವರು ಮನೆಯವರಿಂದ, ಮಗನಿಂದ ದೂರವಾಗಿ ಎಷ್ಟು ನೋವು ಅನುಭವಿಸುತ್ತಿದ್ದಾರೆ. ಸಾವಿರಾರು ಕೋಟ್ಯಂತರ ಜನ ಅವರಿಗೆ ಆಶೀರ್ವಾದ ಮಾಡುತ್ತಿರುವಾಗ ಅವರ ಮನದಲ್ಲಿ ಯಾವ ಭಾವನೆ ಬರುತ್ತಿರಬಹುದು” ಎಂದಿದ್ದಾರೆ.
ವಿಲ್ಸನ್ ಗಾರ್ಡನ್ ನಾಗ ಜತೆಗಿರುವ ಬಗ್ಗೆ ಮಾತನಾಡಿರುವ ಅವರು, “ದರ್ಶನ್ ಅವರು ಇರುವಂತಹ ಜಾಗ ಎಂಥಹದ್ದು ಅಲ್ಲಿ ಸಾಧು-ಸಂತರು ಇರುತ್ತಾರಾ? ಅಷ್ಟೊಂದು ಸೆಕ್ಯುರಿಟಿ ಇರುವ ಸ್ಥಳದಲ್ಲಿ ಯಾರೋ ಇಬ್ಬರು ಕುಳಿತುಕೊಂಡು, ಏನೋ ಮಾಡುತ್ತಾರೆ ಎನ್ನುವುದು ಸರಿ ಅಲ್ಲ” ಎಂದಿದ್ದಾರೆ.
“ಸರ್ಕಾರದಿಂದ ಅವರಿಗೆ ಬೆಡ್ ಊಟ ಕೊಟ್ಟಿಲ್ಲದೆ ಇರಬಹುದು. ಅವರು ಏನು ತಿನ್ನುತ್ತಿದ್ದಾರೆ ಏನು ಮಾಡ್ತಿದ್ದಾರೆ ಅಂತ ಗೊತ್ತಿಲ್ಲ. ಯಾರೋ ಒಬ್ಬರು ಕುಳಿತುಕೊಂಡ ತಕ್ಷಣ ಅವರಿಗೆ ರಾಜಾತಿಥ್ಯ ಕೊಟ್ಟಿದ್ದಾರೆ ಎನ್ನುವುದು ಸರಿಯಲ್ಲ” ಎಂದಿದ್ದಾರೆ.
ಇದು ಎಐ ಟೆಕ್ನಾಲಜಿ ಕಾಲ. ಎಐ ಬಂದ ಮೇಲೆ ಫೋಟೋಗಳನ್ನು ಮಾರ್ಫಿಂಗ್ ಮಾಡುವುದು ಹೆಚ್ಚಾಗಿದೆ. ನಮ್ಮ ಜೊತೆ ಇಲ್ಲದೆ ಇರುವ ನಾಯಕರ ಪೋಟೋ ಕೂಡ ಸಿನಿಮಾದಲ್ಲಿ ಹಾಕಬಹುದು. ನನ್ನ ಪ್ರಕಾರ ಇದು ಫೇಕ್ ಪೋಟೋ” ಎಂದು ಅವರು ಹೇಳಿದ್ದಾರೆ.
ಸದ್ಯ ದರ್ಶನ್ ಅವರನ್ನು ಬೆಳಗಾವಿ ಹಿಂಡಲಗಾ ಜೈಲಿಗೆ ಸ್ಥಳಾಂತರ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.