ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದ ಬೆನ್ನಲ್ಲೇ ಸಾಲು- ಸಾಲು ಪ್ರಕರಣಗಳು ಅಪರಾಧ ತನಿಖಾ ವಿಭಾಗದ (ಸಿಐಡಿ) ಅಂಗಳಕ್ಕೆ ಬಂದು ಬೀಳಲಾರಂಭಿಸಿವೆ. ಪರಿಣಾಮ ಸಿಐಡಿ ಅಧಿಕಾರಿಗಳಿಗೆ ಕಾರ್ಯ ದೊತ್ತಡ ಹೆಚ್ಚಾಗಿ ಗಂಭೀರ ಸ್ವರೂಪದ ಪ್ರಕರಣಗಳ ವಿಚಾರಣೆ, ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಕೆ ಕೂಡ ವಿಳಂಬವಾಗುತ್ತಿದೆ.
ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಸರಣಿ ಪ್ರಕರಣಗಳನ್ನು ಹೆಚ್ಚಿನ ತನಿಖೆಗಾಗಿ ರಾಜ್ಯ ಸರ್ಕಾರವು ಸಿಐಡಿಗೆ ವರ್ಗಾಯಿಸಿದೆ. ಪ್ರಸ್ತುತ ಸಿಐಡಿಯಲ್ಲಿರುವ 371 ಕೇಸ್‌ಗಳ ತನಿಖೆಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಇನ್ನು ತನಿಖೆ ಪೂರ್ಣಗೊಳಿಸಿ ಚಾರ್ಜ್‌ಶೀಟ್ ಸಲ್ಲಿಸಿರುವ 1,307 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ. ಈ ಎಲ್ಲ ಪ್ರಕರಣಗಳನ್ನು ಇಲ್ಲಿರುವ 539 ಅಧಿ ಕಾರಿ ಹಾಗೂ ಸಿಬ್ಬಂದಿಯೇ ನಿರ್ವಹಿಸಬೇಕಿರುವುದು ಸವಾಲಾಗಿದೆ. ಕಳೆದ ಒಂದು ವರ್ಷ ದಿಂದ ಕರ್ನಾಟಕ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿದ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳ ತನಿಖಾ ಜವಾಬ್ದಾರಿ ಸಿಐಡಿಗೆ ವಹಿಸಲಾಗಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಆ ಪ್ರಕರಣಗಳಲ್ಲಿರುವ ಪ್ರತಿ ಆರೋಪಿಗಳನ್ನು ವಿಚಾರಣೆ ನಡೆಸಿ, ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸುವುದು ವಿಳಂಬವಾಗುತ್ತಿದೆ.
ಸಿಐಡಿಯಲ್ಲಿ ತನಿಖೆ, ವಿಚಾರಣೆ ಏಕೆ ವಿಳಂಬ?: ಸಿಐಡಿ ತನಿಖೆ ನಡೆಸುತ್ತಿರುವ ಶೇ.80ರಷ್ಟು ಕೇಸ್‌ಗಳು ಕೋಟ್ಯಂತರ ರೂ. ವಂಚನೆ, ಸೈಬರ್ ಕ್ರೈಂ, ಕೊಲೆ, ಅನುಮಾನಾಸ್ಪದ ಸಾವು, ಲೈಂಗಿಕ ದೌರ್ಜನ್ಯ, ಅತ್ಯಾಚಾರ ಆರೋ ಪಕ್ಕೆ ಸಂಬಂಧಿಸಿದ್ದಾಗಿವೆ. ಈ ಪ್ರಕರಣ ಗಳಲ್ಲಿ ಡಿಜಿಟಲ್ ಸಾಕ್ಷ್ಯಗಳೇ ಹೆಚ್ಚಿನ ಮಹತ್ವ ಪಡೆದಿವೆ. ಆರೋಪಿಗಳ ಕರೆಗಳ ಸಿಡಿಆರ್ ಗಳು, ಎಫ್ಎಸ್‌ಎಲ್ ವರದಿ, ಸಿಸಿ ಕ್ಯಾಮರಾ ದೃಶ್ಯಾವಳಿಗಳು, ಮೊಬೈಲ್ ಸಾಕ್ಷ್ಯ ಕಲೆ ಹಾಕಲು ಹಲವು ದಿನಗಳೇ ಹಿಡಿಯುತ್ತವೆ. ಹೀಗಾಗಿ ಕಾಲಮಿತಿಯೊಳಗೆ ವಿಚಾರಣೆ, ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸುವುದು ಸವಾಲಾಗಿದೆ. ಮಹತ್ವದ ಪ್ರಕರಣಗಳಲ್ಲೂ ತನಿಖೆ ವೇಳೆ ಮೇಲ್ನೋಟಕ್ಕೆ ಸಿಗುವ ಸಾಕ್ಷ್ಯ ಗಳ ನ್ನಷ್ಟೇ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖೀಸಿ ಅವಸರದಲ್ಲಿ ತನಿಖೆ ಪೂರ್ಣಗೊಳಿಸುವ ಅನಿ ವಾರ್ಯತೆ ಸೃಷ್ಟಿಯಾಗಿದೆ. ಹಲವು ವರ್ಷಗಳಿಂದ ಖಾಲಿ ಇರುವ ಶೇ.12ರಷ್ಟು ಹುದ್ದೆ ಭರ್ತಿಗೆ ಸಂಸ್ಥೆಗೆ ಬಲ ತುಂಬಲು ಸರ್ಕಾರ ಆಸಕ್ತಿವಹಿಸಿಲ್ಲ.
ಸೈಬರ್ ಕಳ್ಳರಿಗೆ ಸಿಐಡಿ ಬಲೆ: ಇತ್ತೀಚೆಗೆ ಕರ್ನಾಟಕದಲ್ಲಿ ಮಿತಿ ಮೀರುತ್ತಿರುವ ಸೈಬರ್ ಕ್ರೈಂ ಪತ್ತೆಗೆ ಸಿಐಡಿ ಪೊಲೀಸರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಕ್ರಿಪ್ಟೋ ಕರೆನ್ಸಿ, ದುಡ್ಡು ಡಬಲ್ ಮಾಡುವುದಾಗಿ ಕೋಟ್ಯಂತರ ರೂ. ವಂಚನೆ, ಹ್ಯಾಕಿಂಗ್ ಮೂಲಕ ದತ್ತಾಂಶ ಕಳವು, ಉದ್ಯೋ ಗದ ಹೆಸರಿನಲ್ಲಿ ವಂಚನೆ, ಬ್ಲ್ಯಾಕ್ ಮೇಲ್ ಮಾಡಿ ದುಡ್ಡು ಲಪಟಾಯಿಸಿರುವುದಕ್ಕೆ ಸಂಬಂಧಿಸಿದ 50ಕ್ಕೂ ಹೆಚ್ಚಿನ ಪ್ರಕರಣ ಗಳು ಸಿಐಡಿಯಲ್ಲಿ ತನಿಖಾ ಹಂತದಲ್ಲಿವೆ.
ಈ ಪ್ರಕರಣಗಳಲ್ಲಿ ಸಕ್ರಿಯವಾಗಿರುವ ಅಂತಾರಾಜ್ಯ ಸೈಬರ್ ಕ್ರೈಂ ಗ್ಯಾಂಗ್‌ಗಳು ಹಾಗೂ ವಿದೇಶಗಳಲ್ಲೇ ಕುಳಿತು ಸ್ಥಳೀಯರ ಮೂಲಕ ಸೈಬರ್ ಕ್ರೈಂ ಎಸಗಿ ಲಕ್ಷಾಂತರ ರೂ. ಲಪಟಾಯಿಸಿರುವವರ ಸುಳಿವು ಸಿಕ್ಕಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ಇನ್ನು ರಾಜ್ಯವನ್ನೇ ತಲ್ಲಣಗೊಳಿಸಿದ ಬಿಟ್‌ಕಾಯಿನ್ ಪ್ರಕರಣ, ಹಾಸನದ ಅಶ್ಲೀಲ ವಿಡಿಯೋ ವೈರಲ್ ಕೇಸ್, ಸೈಬರ್ ಅಪರಾಧ ಪ್ರಕರಣಗಳು ಸೇರಿದಂತೆ 15ಕ್ಕೂ ಹೆಚ್ಚಿನ ಗಂಭೀರ ಕೇಸ್‌ಗಳಲ್ಲಿ ಹಗಲಿರುಳೆನ್ನದೆ ಸಿಐಡಿ ಅಧಿಕಾರಿಗಳು ಡಿಜಿಟಲ್ ಸಾಕ್ಷ್ಯ ಕಲೆ ಹಾಕುವಲ್ಲಿ ನಿರತರಾಗಿದ್ದಾರೆ ಎಂದು ಸಿಐಡಿ ಮೂಲಗಳಿಂದ ತಿಳಿದು ಬಂದಿದೆ.
ಸಿಐಡಿಯಲ್ಲಿರುವ ಪ್ರಕರಣಗಳನ್ನು ಸಿಐಡಿ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಇತ್ತೀಚೆಗೆ ತಾಂತ್ರಿಕ ಕಾರ್ಯಾಚರಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇನ್ನು ಕಳೆದ 1 ವರ್ಷದ ಹಿಂದೆ ಸಿಐಡಿಯಲ್ಲಿ 903 ಪ್ರಕರಣಗಳಿದ್ದವು. ಸದ್ಯ 371 ಕೇಸ್‌ಗಳು ತನಿಖಾ ಹಂತದಲ್ಲಿವೆ.
-ಡಾ. ಎಂ.ಎ.ಸಲೀಂ, ಪೊಲೀಸ್ ಮಹಾನಿರ್ದೇಶಕ, ಸಿಐಡಿ
– ಅವಿನಾಶ ಮೂಡಂಬಿಕಾನ