– ಜೀವಾ ಅವರ ಬ್ಯಾಂಕ್ ಖಾತೆಗೆ ಭೋವಿ ನಿಗಮಕ್ಕೆ ಸೇರಿದ ದೊಡ್ಡ ಮೊತ್ತದ ಹಣ?
– ಈ ಹಿನ್ನೆಲೆಯಲ್ಲಿ ಮಹಿಳಾ ಉದ್ಯಮಿ ವಿಚಾರಣೆ ನಡೆಸಿದ್ದ ಸಿಐಡಿ ಪೊಲೀಸರು
– ಪದೇ ಪದೆ ವಿಚಾರಣೆ ನಡೆಸಿ ಕಿರುಕುಳ ನೀಡಿದ್ದಾರೆಂದು 11 ಪುಟಗಳ ಡೆತ್‌ನೋಟ್
– ದಾಖಲಾತಿ ನೀಡಿದರೂ ಸಮರ್ಪಕ ಸ್ಪಂದನೆ ಇಲ್ಲ: ಜೀವಾ ಸಹೋದರಿ ಆರೋಪ
Advertisement
ಬೆಂಗಳೂರು: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿರುವ ಆರೋಪದಲ್ಲಿ ವಿಚಾರಣೆಗೆ ಒಳಗಾಗಿದ್ದ ಮಹಿಳಾ ಉದ್ಯಮಿಯೊಬ್ಬರು ಸಿಐಡಿ ಡಿವೈಎಸ್‌ಪಿ ಕನಕಲಕ್ಷ್ಮೀ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ 11 ಪುಟಗಳ ಡೆತ್‌ನೋಟ್ ಬರೆದು ಶುಕ್ರವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪದ್ಮನಾಭನಗರದ ಜೀವಾ (33) ಆತ್ಮಹತ್ಯೆ ಮಾಡಿಕೊಂಡವರು. ಈ ಸಂಬಂಧ ಸಿಐಡಿ ಡಿವೈಎಸ್‌ಪಿ ಕನಕಲಕ್ಷ್ಮೀ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
Related Articles
ವಿಚಾರಣೆ ವೇಳೆ ನಿಮಗೆ ಹಣ ಹೇಗೆ ಬಂತು, ನಿಮಗೆ ಎಲ್ಲಿಂದ ಹಣ ಬರುತ್ತಿದೆ, ನೀವೆಲ್ಲ ಸುಳ್ಳು ಹೇಳುತ್ತೀರಿ, ಮೋಸ ಮಾಡುತ್ತೀರಿ ಎಂದು ಕೂಗಾಡಿದ್ದಾರೆ. ಭೋವಿ ನಿಗಮದ ಹಗರಣದಲ್ಲಿ ಹಲವು ಬಾರಿ ಜೀವಾ ಅವರನ್ನು ಸಿಐಡಿ ಕಚೇರಿಗೆ ವಿಚಾರಣೆಗೆ ಕರೆಯಲಾಗಿತ್ತು. ಆ ವೇಳೆ ದಾಖಲಾತಿ ನೀಡುವಂತೆ ತನಿಖಾಧಿಕಾರಿಗಳು ಕಿರುಕುಳ ನೀಡಿದ್ದಾರೆ. ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್‌ನೋಟ್‌ನಲ್ಲಿ ಜೀವಾ ಉಲ್ಲೇಖೀಸಿದ್ದಾರೆ ಎಂದು ತಿಳಿದು ಬಂದಿದೆ.
Advertisement
2 ಕಂಪೆನಿ ಹೊಂದಿದ್ದ ಜೀವಾ :ಆತ್ಮಹತ್ಯೆ ಮಾಡಿಕೊಂಡ ಜೀವಾ ಅವಿವಾಹಿತರಾಗಿದ್ದು, ಎಲ್‌ಎಲ್‌ಬಿ ವ್ಯಾಸಂಗ ಮಾಡಿದ್ದಾರೆ. ಜೀವಾ ಜಾಮೀನು ಪಡೆದಿದ್ದರು. ಅನಿತಾ ಕ್ರಿಯೇಶನ್ ಎಂಬ ರೇಷನ್ ವಸ್ತು ಹಾಗೂ ವುಡ್ ಪೂರೈಕೆ ಮಾಡುವ ಕಂಪೆನಿ ಹೊಂದಿದ್ದರು. ಜತೆಗೆ ಗಾರ್ಮೆಂಟ್ಸ್ ಕಂಪೆನಿ ಹೊಂದಿದ್ದರು. ತನಿಖಾಧಿಕಾರಿಗಳು ಕೇಳಿದ ದಾಖಲಾತಿ ನೀಡಿದರೂ ಕಿರುಕುಳ ನೀಡುತ್ತಿದ್ದರು ಎಂದು ಜೀವಾ ಸಹೋದರಿ ಪೊಲೀಸರ ಮುಂದೆ ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ.